ಖತರ್ನಾಕ್ ಕಳ್ಳಿ ತಂಡ ಬಂಧನ

ಬ್ಯೂಟಿ ಪಾರ್ಲರ್‍ಗೆ ಬರುವ ಮಹಿಳೆಯರ ಬ್ಯಾಗ್‍ನಿಂದ ಅವರ ಮನೆಯ ಬೀಗ ಕದ್ದು ಬ್ಯೂಟಿಷಿಯನ್ ಕೆಲಸ ಮುಗಿಯುವಷ್ಟರಲ್ಲಿ ಸಹಚರರ ಮೂಲಕ ಅವರ ಮನೆ ಕಳವು ಮಾಡಿಸುತ್ತಿದ್ದ ಖತರ್ನಾಕ್ ಕಳ್ಳಿ ಸೇರಿ ನಾಲ್ವರನ್ನು ಚಂದ್ರ ಬಡಾವಣೆ ಪೊಲೀಸರು ಬಂಧಿಸಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬ್ಯೂಟಿ ಪಾರ್ಲರ್‍ಗೆ ಬರುವ ಮಹಿಳೆಯರ ಬ್ಯಾಗ್‍ನಿಂದ ಅವರ ಮನೆಯ ಬೀಗ ಕದ್ದು ಬ್ಯೂಟಿಷಿಯನ್ ಕೆಲಸ ಮುಗಿಯುವಷ್ಟರಲ್ಲಿ ಸಹಚರರ ಮೂಲಕ ಅವರ ಮನೆ
ಕಳವು ಮಾಡಿಸುತ್ತಿದ್ದ ಖತರ್ನಾಕ್ ಕಳ್ಳಿ ಸೇರಿ ನಾಲ್ವರನ್ನು ಚಂದ್ರ ಬಡಾವಣೆ ಪೊಲೀಸರು ಬಂಧಿಸಿದ್ದಾರೆ.

ತುರುವೇಕೆರೆ ತಾಲೂಕಿನ ಕ್ಯಾಮಸಂದ್ರ ಗ್ರಾಮದ ಪ್ರಸಾದ್ ಕುಮಾರ್ (24), ಮಾಗಡಿ ಭೈರನಹಳ್ಳಿ ಗ್ರಾಮದ ಲತಾ (32), ಚನ್ನರಾಯಪಟ್ಟಣ ಹೊಸಹಳ್ಳಿ ಗ್ರಾಮದ ಮಂಜೇಗೌಡ (26) ಹಾಗೂ ಮಾಗಡಿ ಕೋರಮಂಗಲದ ಪ್ರಸನ್ನ (28) ಬಂಧಿತರು. ಆರೋಪಿಗಳಿಂದ ರು.32 ಲಕ್ಷ ಮೌಲ್ಯದ 1 ಕೆಜಿ 29 ಗ್ರಾಂ ಚಿನ್ನಾಭರಣ ಹಾಗೂ 2 ಕೆಜಿ 618 ಗ್ರಾಂ ಬೆಳ್ಳಿ ವಸ್ತುಗಳನ್ನು
ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಆರೋಪಿ ಲತಾ, ಪತಿ ಹಾಗೂ ಮಗಳೊಂದಿಗೆ 4 ವರ್ಷಗಳಿಂದ ನಾಗರಬಾವಿಯಲ್ಲಿ ವಾಸವಿದ್ದಳು. ಮನೆ ಹತ್ತಿರ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಳು. ಆದರೆ, ಸುಲಭವಾಗಿ ಹಣಗಳಿಸಿ ಐಷಾರಾಮಿ ಜೀವನಕ್ಕಾಗಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಳು. ಈ ವಿಚಾರ ತಿಳಿದ ಪತಿ ವಿಚ್ಛೇದನ ಪಡೆದು ದೂರವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪತಿ ತೊರದೆ ನಂತರ ಲತಾಳಿಗೆ ಕಾರು ಚಾಲಕ ಪ್ರಸಾದ್ ಎಂಬಾತನ ಪರಿಚಯವಾಗಿತ್ತು. ಆತ ಕೆಲಸ ಬಿಟ್ಟು ಲತಾ ಜತೆ ಸೇರಿ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದ.

ಕ್ರೀಂ ಹಚ್ಚಿ ಮನೆಕಳವು: ಬ್ಯೂಟಿಪಾರ್ಲರ್ ನಡೆಸುತ್ತಿದ್ದ ಲತಾ, ಅಲ್ಲಿಗೆ ಬರುವ ಮಹಿಳೆಯರ ಸ್ನೇಹ ಸಂಪಾದಿಸುತ್ತಿದ್ದಳು. ಮಾತನಾಡುತ್ತಾ ಅವರ ಪತಿ, ಮಕ್ಕಳು, ಅವರ ಕೆಲಸ ಸೇರಿದಂತೆ ಎಲ್ಲ ವಿವರಗಳನ್ನು ಸಂಗ್ರಹಿಸುತ್ತಿದ್ದಳು. ಮಹಿಳೆಯರು ಬ್ಯೂಟಿ ಪಾರ್ಲರ್‍ಗೆ ಬಂದಾಗ ಅವರ ಮನೆಯಲ್ಲಿ ಯಾರು ಇರುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದಳು. ಫೇಸ್ ಪ್ಯಾಕ್ ಮಾಡಿಸಿಕೊಳ್ಳುವಂತೆ ಬಲವಂತ ಮಾಡಿ ಕ್ರೀಂ ಹಚ್ಚಿ ಗಂಟೆಗಟ್ಟಲೇ ಕೂರಿಸುತ್ತಿದ್ದಳು. ಈ ವೇಳೆ ಮಹಿಳೆಯರ ಬ್ಯಾಗ್‍ನಿಂದ ಕೀ ಕಳವು ಮಾಡಿ ಸಹಚರ ಪ್ರಸಾದನಿಗೆ ನೀಡುತ್ತಿದ್ದಳು. ಜತೆಗೆ ವಿಳಾಸವನ್ನು ತಿಳಿಸುತ್ತಿದ್ದಳು. ಪ್ರಸಾದ್, ತನ್ನ ಸ್ನೇಹಿತರಾದ ಮಂಜೇಗೌಡ ಮತ್ತು ಪ್ರಸನ್ನನ ಜತೆ ಸೇರಿ ಮನೆಗೆ ನುಗ್ಗಿ ಚಿನ್ನ, ಬೆಳ್ಳಿ ಮತ್ತು ಹಣ ಕಳವು ಮಾಡಿ ಪಾರ್ಲರ್‍ಗೆ ವಾಪಸ್ಸಾಗುತ್ತಿದ್ದರು. ಕಳವು ಮಾಡಿ ವಾಪಸ್ ಪಾರ್ಲರ್‍ಗೆ ಬರುವವರೆಗೂ ಫೇಸ್ ಪ್ಯಾಕ್ ನೆಪದಲ್ಲಿ ಕಾಲ ದೂಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯರ ಮನೆಗಳು ಹತ್ತಿರವಿದ್ದರೆ, ಅದೇ ದಿನ ಕಳವು ಮಾಡುತ್ತಿದ್ದರು, ದೂರದ ಮನೆಗಳ ಕೀ ನಕಲು ಮಾಡಿಸಿಕೊಳ್ಳುತ್ತಿದ್ದರು. ಮತ್ತೊಮ್ಮೆ ಪಾರ್ಲರ್‍ಗೆ ಬಂದಾಗ ಮನೆಗೆ ನುಗ್ಗಿ ಕಳವು ಮಾಡುತ್ತಿದ್ದರು. ಕದ್ದ ಒಡವೆಗಳನ್ನು ಮಣಪ್ಪುರಂ, ಮುತ್ತೂಟ್ ಸೇರಿದಂತೆ ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಅಡವಿಟ್ಟು ಹಣ ಪಡೆದು ಮೋಜಿನ ಜೀವನ ನಡೆಸುತ್ತಿದ್ದರು.

ಪತ್ರಿಕೆಯಲ್ಲಿ ಫೋಟೋ, ಮತ್ತೊಂದು ಪ್ರಕರಣ ಬಯಲು!:

ಕಳೆದ ತಿಂಗಳಲ್ಲಿ ಕಳವು ಪ್ರಕರಣ ಸಂಬಂಧ ಪೀಣ್ಯ ಪೊಲೀಸರು ಲತಾಳನ್ನು ಬಂಧಿಸಿದ್ದರು. ಈ ವೇಳೆ ಆರೋಪಿಯ ಫೋಟೋ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಅದನ್ನು ಗಮನಿಸಿದ ಚಂದ್ರ ಬಡಾವಣೆ ನಿವಾಸಿ ಪುಷ್ಪಲತಾ ಎಂಬುವರು ಬ್ಯೂಟಿಪಾರ್ಲರ್‍ಗೆ ಹೋಗಿದ್ದ ದಿನವೇ ತಮ್ಮ ಮನೆಯಲ್ಲೂ ಕಳ್ಳತನವಾಗಿತ್ತು ಎಂದು ದೂರು ನೀಡಿದ್ದರು. ಪೀಣ್ಯ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಲತಾಳನ್ನು ಚಂದ್ರ ಬಡಾವಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಜ್ಞಾನಭಾರತಿ, ಕುಂಬಳಗೋಡು, ಕುಮಾರಸ್ವಾಮಿ
ಬಡಾವಣೆ, ತಾವರೆಕರೆ, ಪೀಣ್ಯ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳು ಪತ್ತೆಯಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com