ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ರೈಲುಗಳ ಸಂಖ್ಯೆ ಹೆಚ್ಚಿಸಲು ಹೈಕೋರ್ಟ್ ಸೂಚನೆ

ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ರೈಲುಗಳ ಸಂಖ್ಯೆ ಹೆಚ್ಚಿಸುವ ಕುರಿತು ಖಚಿತ ಮಾಹಿತಿ ನೀಡಬೇಕೆಂದು ರೈಲ್ವೆ ಇಲಾಖೆಗೆ ಹೈಕೋರ್ಟ್ ಸೂಚನೆ
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ರೈಲುಗಳ ಸಂಖ್ಯೆ ಹೆಚ್ಚಿಸುವ ಹಾಗೂ ಪ್ರಸ್ತುತ ಸಂಚರಿಸುತ್ತಿರುವ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸುವ ಕುರಿತು ಒಂದು ವಾರದಲ್ಲಿ ಖಚಿತ ಮಾಹಿತಿ ನೀಡಬೇಕೆಂದು ರೈಲ್ವೆ ಇಲಾಖೆಗೆ ಹೈಕೋರ್ಟ್ ಸೂಚನೆ ನೀಡಿದೆ.   

ಬೆಂಗಳೂರು -ಮಂಗಳೂರು ಮಾರ್ಗದಲ್ಲಿ ರಸ್ತೆ ಸಾರಿಗೆ  ಹಾಗೂ ರೈಲಿನ ವ್ಯವಸ್ಥೆ ಅಸಮರ್ಪಕವಾಗಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸಲು ಆದೇಶ  ನೀಡಲು  ಕೋರಿ ಲತಾ ರಮೇಶ್ ಮತ್ತು  ಪ್ರದೀಪ್ ಕುಮಾರ್  ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ನ ಮುಖ್ಯ  ನ್ಯಾಯ ಮೂರ್ತಿ  ಎಸ್.ಕೆ ಮುಖರ್ಜಿ  ಮತ್ತು ನ್ಯಾ.ರಾಮಮೋಹನ ರೆಡ್ಡಿ ಅವರಿದ್ದ ವಿಭಾಗೀಯ ಪೀಠ, ಹೆಚ್ಚುವರಿ ರೈಲು ಸೇವೆ ಕಲ್ಪಿಸಲು  ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.  

ಬೆಂಗಳೂರು-ಮಂಗಳೂರು ರಸ್ತೆ ಹಾಗೂ ರೈಲು  ಮಾರ್ಗ ಸಮರ್ಪಕವಾಗಿಲ್ಲ, ಅಲ್ಲದೇ  ಶಿರಾಡಿ ಘಾಟ್ ರಸ್ತೆ ಮಾರ್ಗ ದುಸ್ಥಿತಿಯಲ್ಲಿರುವ ಕಾರಣ, ಚಾರ್ಮಡಿ ಘಾಟ್ ಬಳಸಿಕೊಂಡು ಮಂಗಳೂರಿಗೆ ಪ್ರಯಾಣಿಸಬೇಕಿದೆ. ಪ್ರಯಾಣಿಕರಿಗೆ  ಅನುಕೂಲವಾಗಲು ಹೆಚ್ಚಿನ ರೈಲು ಸಂಪರ್ಕಗಳನ್ನು ಕಲ್ಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಅರ್ಜಿದಾರರ ಪರ ವಕೀಲರು ವಾದಮಂಡಿಸಿದ್ದರು.

ಹೈಕೋರ್ಟ್ ನಿರ್ದೇಶನಕ್ಕೆ ಪ್ರತಿಕ್ರಿಯೆ ನೀಡಿರುವ ರೈಲ್ವೆ ಇಲಾಖೆ ಪರ ವಕೀಲರು, ರೈಲುಗಳ ಸಂಖ್ಯೆಯನ್ನು  ಹೆಚ್ಚಿಸುವ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚೆ  ನಡೆಸಲಾಗುವುದು. ಇದಕ್ಕಾಗಿ ಕಾಲಾವಕಾಶ ಅಗತ್ಯವಿದೆ ಎಂದು  ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com