ಅಷ್ಟ ಭ್ರಷ್ಟರ ನವಕೋಟಿ ಅಕ್ರಮ ಆಸ್ತಿಪಾಸ್ತಿ ಪತ್ತೆ

ರಾಜ್ಯದ ಆರು ಜಿಲ್ಲೆಗಳ ಎಂಟು ಭ್ರಷ್ಟ ಅಧಿಕಾರಿಗಳಿಗೆ ಸೇರಿದ 18 ಸ್ಥಳಗಳ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ರು.9.5 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ...
ಎಂಟು ಅಧಿಕಾರಿಗಳ ನಿವಾಸದ ಮೇಲೆ ಲೋಕಾಯುಕ್ತ ದಾಳಿ ( ಸಾಂದರ್ಭಿಕ ಚಿತ್ರ)
ಎಂಟು ಅಧಿಕಾರಿಗಳ ನಿವಾಸದ ಮೇಲೆ ಲೋಕಾಯುಕ್ತ ದಾಳಿ ( ಸಾಂದರ್ಭಿಕ ಚಿತ್ರ)

ಬೆಂಗಳೂರು: ರಾಜ್ಯದ ಆರು ಜಿಲ್ಲೆಗಳ ಎಂಟು ಭ್ರಷ್ಟ ಅಧಿಕಾರಿಗಳಿಗೆ ಸೇರಿದ 18 ಸ್ಥಳಗಳ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ರು.9.5 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ.

ಬೆಂಗಳೂರು ವಿಭಾಗ ಲೋಕೋಪಯೋಗಿ ಇಲಾಖೆ ಸಂವಹನ ಮತ್ತು ಕಟ್ಟಡ ವಿಭಾಗ ಮುಖ್ಯ ಎಂಜಿನಿಯರ್ ಎ.ಎನ್ ತ್ಯಾಗರಾಜ, ಕರ್ನಾಟಕ ರಾಜ್ಯ ಕೋ ಅಪರೇಟಿವ್ ಮಾರ್ಕೆಟಿಂಗ್ ಫೆಡರೇಷನ್ ಬೆಂಗಳೂರು ವ್ಯವಸ್ಥಾಪಕ ನಾಗಯ್ಯ ಅಂದಾನಯ್ಯ ಹಿರೇಮಠ, ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಎಂಜಿನಿಯರ್ ಮಲ್ಲಿಕಾರ್ಜುನ ರೇವಣಸಿದ್ದಪ್ಪ ನ್ಯಾನೆಗಲಿ, ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕು ಗ್ರಾಮಲೆಕ್ಕಾಧಿಕಾರಿ ಸಿದ್ಧಾರ್ಥ ಬೋಪಾಲ್ ಸಿಂಗಾಡಿ, ಚಿಕ್ಕೋಡಿ ಲೋಕೋಪಯೋಗಿ ಇಲಾಖೆ ಲೆಕ್ಕ ಅಧೀಕ್ಷಕ ಕೃಷ್ಣ ಮಹಾದೇವಪ್ಪ, ಕೊಡಗು ಜಿಲ್ಲೆ ಸಂಪಾಜಿ ವಲಯ ಅರಣ್ಯಾಧಿಕಾರಿ ಬಾಲಕೃಷ್ಣಾ ಚಾರ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ಸಹಾಯಕ ನಿರ್ದೇಶಕ ಅಣ್ಣೇಗೌಡ ಹಾಗೂ ರಾಮನಗರ
ಜಿಲ್ಲೆ ಬಿಡದಿ ಪೊಲೀಸ್ ಠಾಣೆ ಸಹಾಯಕ ಸಬ್ ಇನ್ಸ್‍ಪೆಕ್ಟರ್ ಜಗದೀಶ್ ಬಲೆಗೆ ಬಿದ್ದ ಭ್ರಷ್ಟರು. ಬೆಂಗಳೂರು, ಬಾಗಲಕೋಟೆ, ಬೆಳಗಾವಿ, ಮಂಗಳೂರು, ಮೈಸೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು.

ಲೋಕೋಪಯೋಗಿ ಇಲಾಖೆ ಸಂವಹನ ಮತ್ತು ಕಟ್ಟಡ ವಿಭಾಗ ಮುಖ್ಯ ಎಂಜಿನಿಯರ್ ಎ.ಎನ್ ತ್ಯಾಗರಾಜ ಅವರಿಗೆ ಸೇರಿದ ನ್ಯಾಯಾಂಗ ಬಡಾವಣೆ ನಿವಾಸದ ಮೇಲೆ ಬೆಂಗಳೂರು ನಗರ ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ಹಾಗೂ 10 ಅಧಿಕಾರಿ ಮತ್ತು ಸಿಬ್ಬಂದಿ ತಂಡ ದಾಳಿ ನಡೆಸಿ ದಾಖಲೆಪತ್ರಗಳ ಪರಿಶೀಲನೆ ನಡೆಸಿದರು. ದಾಳಿ ವೇಳೆ ನಾಗಶೆಟ್ಟಿಹಳ್ಳಿಯಲ್ಲಿ ಫ್ಲ್ಯಾಟ್ ರು.2.21 ಕೋಟಿ, ಯಲಹಂಕದಲ್ಲಿ ಮನೆ ರು.60 ಲಕ್ಷ, ಕಮ್ಮನಹಳ್ಳಿಯಲ್ಲಿ ಸೈಟ್ ರು.13 ಲಕ್ಷ, ಕೆಆರ್ ಪುರದಲ್ಲಿ ವಾಣಿಜ್ಯ ಸಂಕೀರ್ಣ ರು.29 ಲಕ್ಷ, ಯಲಹಂಕದಲ್ಲಿ ಫ್ಲ್ಯಾಟ್ ರು.17 ಲಕ್ಷ, ಯಲಹಂಕದಲ್ಲಿ ಸೈಟ್ ರು.9.5 ಲಕ್ಷ. ಸದಾಶಿವನಗರದಲ್ಲಿ ವಾಣಿಜ್ಯ ಕಟ್ಟಡ ರು.26 ಲಕ್ಷ, ದೇನನಹಳ್ಳಿ ಸಮೀಪ ಮೂರು ಕಡೆ ಭೂಮಿ ರು.1 ಕೋಟಿ 29 ಲಕ್ಷ. ಜಕ್ಕೂರು ಬಳಿ ಭೂಮಿ ರು.84 ಲಕ್ಷ ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಅಲ್ಲದೇ 2.7 ಕೆಜಿ ಚಿನ್ನಾಭರಣ ರು.69 ಲಕ್ಷ, ಬ್ಯಾಂಕ್ಖಾತೆಗಳಲ್ಲಿ ರು.37 ಲಕ್ಷ, 10 ಕೆಜಿ ಬೆಳ್ಳಿ, ರು.2.97 ಲಕ್ಷ ನಗದು, 2 ಕಾರುಗಳು ರು.10 ಲಕ್ಷ, ಗೃಹೋಪಯೋಗಿ ವಸ್ತುಗಳು ರು.30 ಲಕ್ಷ, 2 ದ್ವಿಚಕ್ರ ವಾಹನ ಹಾಗೂ 10 ಲಕ್ಷ ಮೌಲ್ಯದ ಇತರ ಚರಾಸ್ತಿಯು ಪತ್ತೆಯÁಗಿದೆ. ಇವರ ಒಟ್ಟು ಆಸ್ತಿ ಒಟ್ಟು ಆಸ್ತಿ ರು.7.55 ಕೋಟಿ ಆಗಿದ್ದು, ಅಸಮತೋಲನ ಆಸ್ತಿ ಮೌಲ್ಯವೇ ರು.3.95 ಕೋಟಿ. ತ್ಯಾಗರಾಜ ಅವರು ಆದಾಯಕ್ಕೂ ಮೀರಿ ಶೇ.88.87ರಷ್ಟು ಆಸ್ತಿ ಸಂಪಾದಿಸಿರುವುದು ತಿಳಿದು ಬಂದಿದೆ. ಇವರ ಮನೆಯಿಂದ ಇತರ ದಾಖಲೆಪತ್ರಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆದ ದಾಳಿ ವೇಳೆ ಕೆಲವು ಅಧಿಕಾರಿಗಳಿಗೆ ಸೇರಿದ ಬ್ಯಾಂಕ್ ಲಾಕರ್ ಗಳ ಪರಿಶೀಲನೆ ನಡೆಸಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

5 ಮಹಡಿ ಅಪಾರ್ಟ್‍ಮೆಂಟ್ ಒಡೆಯ ಎಎಸ್ಸೈ!
ಬಿಡದಿ ಪೊಲೀಸ್ ಠಾಣೆ ಸಹಾಯಕ ಸಬ್ ಇನ್ಸ್‍ಪೆಕ್ಟರ್ ಆಗಿರುವ ಜಗದೀಶ್ ಅವರು ಕನಕಪುರ ರಸ್ತೆ ರಘುವನಹಳ್ಳಿಯಲ್ಲಿ 5 ಮಹಡಿಯ ಅಪಾರ್ಟ್‍ಮೆಂಟ್ ನಿರ್ಮಿಸಿದ್ದು ಅದರಲ್ಲಿ 51 ಫ್ಲ್ಯಾಟ್‍ಗಳಿರುವುದು ಲೋಕಾಯುಕ್ತ ದಾಳಿ ವೇಳೆ ಕಂಡು ಬಂದಿದೆ. ಎಲ್ಲ ಫ್ಲ್ಯಾಟ್‍ಗಳನ್ನು ಬಾಡಿಗೆಗೆ ಬಿಟ್ಟಿದ್ದರು. ಪತ್ನಿ ಹಾಗೂ ಮಕ್ಕಳ ಓಡಾಟಕ್ಕೆ 4 ಐಷಾರಾಮಿ ಕಾರುಗಳು, 2 ಬುಲೆಟ್ ದ್ವಿಚಕ್ರ ವಾಹನಗಳು ಪತ್ತೆಯಾಗಿವೆ. ಈ ಹಿಂದೆಯೂ ಪ್ರಕರಣವೊಂದರಲ್ಲಿ ಮಧ್ಯಸ್ಥಿಕೆ ವಹಿಸಿದ್ದ ಬಗ್ಗೆ ಜಗದೀಶ್ ವಿರುದಟಛಿ ಇಲಾಖಾ ತನಿಖೆ ನಡೆಯುತ್ತಿದೆ. ಲೋಕಾಯುಕವರದಿ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ ಅವರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಅಣ್ಣೇಗೌಡ ( ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ಸಹಾಯಕ ನಿರ್ದೇಶಕ)

ಆದಾಯಕ್ಕೂ ಮೀರಿ ಆಸ್ತಿ ಹೊಂದಿದ ಆರೋಪದ ಮೇಲೆ ಮೈಸೂರಿನ ಕುವೆಂಪುನಗರದ ಆದಿ ಚುಂಚನಗಿರಿ ರಸ್ತೆಯಲ್ಲಿನ ಅಣ್ಣೇಗೌಡ ಅವರ ನಿವಾಸ ಮತ್ತು ವಾಣಿಜ್ಯ ಸಂಕೀರ್ಣದ ಮೇಲೆ
ಗುರುವಾರ ಮುಂಜಾನೆ 5.15ರ ಸುಮಾರಿಗೆ ದಾಳಿ ನಡೆಸಿದರು. ಮಧ್ಯಾಹ್ನ 2 ಗಂಟೆಯವರೆಗೂ ಸ್ಥಿರ ಮತ್ತು ಚರಾಸ್ತಿಗಳ ಮಾಹಿತಿ ಪಡೆದು, ಸ್ಥಿರಾಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಎಸ್ಪಿ ನಾರಾಯಣ ನೇತೃತ್ವದಲ್ಲಿ ಇನ್ಸ್ ಪೆಕ್ಟರ್‍ಗಳಾದ ಮ್ಯಾಥ್ಯೂ ಥಾಮಸ್, ಗೋಪಾಲಸ್ವಾಮಿ ಮತ್ತು ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.

ಕೃಷ್ಣ ಮಹಾದೇವಪ್ಪ (ಚಿಕ್ಕೋಡಿ ಉಪವಿಭಾಗದ ಲೋಕೋಪಯೋಗಿ ಇಲಾಖೆಯ ಲೆಕ್ಕ ಅಧೀಕ್ಷಕ)
ಚಿಕ್ಕೋಡಿ ಬುದಟಛಿನಗರದಲ್ಲಿ 34 ಲಕ್ಷದ ಮನೆ, ಹಿರೇಕೋಡಿ ಗ್ರಾಮ ವ್ಯಾಪ್ತಿಯಲ್ಲಿ ಒಂದು ನಿವೇಶನ, ಗೋಕಾಕ ತಾಲೂಕಿನ ಮಲ್ಲಾಪೂರ ಪಿ.ಜಿ ಗ್ರಾಮದಲ್ಲಿ ನಿವೇಶನ, 2 ಬೈಕ್, ಹೊಂಡಾ ಸಿಟಿ ಕಾರ್, 200 ಗ್ರಾಂ ಚಿನ್ನ, 500 ಗ್ರಾಂ ಬೆಳ್ಳಿ, ಮನೆಯಲ್ಲಿ ರು.6.30 ಲಕ್ಷ, ಕಚೇರಿಯಲ್ಲಿ ರು. 1.28 ಲಕ್ಷ ನಗದು ಹಣ ಪತ್ತೆಯಾಗಿದೆ. ವಿವಿಧ ಬ್ಯಾಂಕ್ ಖಾತೆಗಳಲ್ಲಿ ರು. 9 ಲಕ್ಷ ನಗದು. 12 ಎಲ್‍ಐಸಿ ಪಾಲಿಸಿ ಹೊಂದಿದ್ದಾರೆ.

ಸಿದ್ದಾರ್ಥಿ ಸಿಂಗಾಡಿ (ಚಿಕ್ಕೋಡಿ ತಾ. ಹಿರೇಕೋಡಿ ಗ್ರಾಮ ಲೆಕ್ಕಾಧಿಕಾರಿ)
ಚಿಕ್ಕೋಡಿ ಪಟ್ಟಣದ ಇಂದಿರಾನಗರದಲ್ಲಿ 2 ಮನೆ, ಹಿರೇಕೋಡಿಯಲ್ಲಿ ಒಂದು ನಿವೇಶನ, ಮನೆಯಲ್ಲಿ 262 ಗ್ರಾಂ ಚಿನ್ನ ಹಾಗೂ ಬ್ಯಾಂಕ್ ಲಾಕರ್‍ದಲ್ಲಿ 250 ಗ್ರಾಂ ಚಿನ್ನ ಸೇರಿ ಒಟ್ಟು ರು.12 ಲಕ್ಷ ಮೌಲ್ಯದ ಚಿನ್ನಾಭರಣ, 1250 ಗ್ರಾಂ ಬೆಳ್ಳಿ, ಮನೆಯಲ್ಲಿ ರು.52 ಸಾವಿರ ನಗದು ಹಣ ಸಿಕ್ಕಿದೆ.ಸಿದ್ದಾರ್ಥ ಸಿಂಗಾಡಿ ಒಟ್ಟು ರು.83 ಲಕ್ಷ ಆದಾಯ ಹೊಂದಿದ್ದಾರೆ. ಅವರ ವೇತನ ಇತರ ಮೂಲಗಳಿಂದ ರು.31 ಲಕ್ಷ ಆದಾಯ ಇರಬೇಕಿತ್ತು. ಅಕ್ರಮವಾಗಿ ರು.52 ಲಕ್ಷ ಹಣ ಮಾಡಿದ್ದಾರೆ ಎಂದು ಲೋಕಾಯುಕ್ತ ಎಸ್ಪಿ ರವಿಕುಮಾರ ನಾಯ್ಕ ಈ ಕುರಿತು ಮಾಹಿತಿ ನೀಡಿದ್ದಾರೆ.

ಮಲ್ಲಿಕಾರ್ಜುನ ರೇವಣಸಿದ್ದಪ್ಪ ನಾಯನೇಗಲಿ (ಬಿಟಿಡಿಎ ಸಹಾಯಕ ಎಂಜಿನಿಯರ್)

ಬಾಗಲಕೋಟೆ ನವನಗರ ಸೆಕ್ಟರ್ ನಂ- 55 ರಲ್ಲಿ  ರು.1.29 ಕೋಟಿ ಮೌಲ್ಯದ ಆರು ಮನೆಗಳು, ಬಾಗಲಕೋಟೆ ತಾಲೂಕಿನ ಮುರನಾಳದಲ್ಲಿ  ರು.60 ಸಾವಿರ ಮೌಲ್ಯದ ನಿವೇಶನ, ಮಾರುತಿ ಕಾರು, ರು.48 ಸಾವಿರ ನಗದು, 33 ಗ್ರಾಂ ಚಿನ್ನ ಹಾಗೂ ವಿವಿಧ ಬ್ಯಾಂಕ್ ಖಾತೆಯಲ್ಲಿ ರು.5.09 ಲಕ್ಷ ಹಣವಿರುವುದು ಪತ್ತೆಯಾಗಿದೆ. ನಾಯನೇಗಲಿ ಅವರ ಒಟ್ಟಾರೆ ಆದಾಯ ರು.52.45 ಲಕ್ಷವಿದ್ದು ಅವರ ಆಸ್ತಿ ರು.1.35ಕೋಟಿ. ರು.98 ಲಕ್ಷ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

ನಾಗಯ್ಯ ಅಂದಾನಯ್ಯ (ರಾಜ್ಯ ಸಹಕಾರ ಮಹಾಮಂಡಳದ ವ್ಯವಸ್ಥಾಪಕ)
ಬೀಳಗಿ ತಾಲೂಕು ಕುಂದರಗಿ ಗ್ರಾಮದಲ್ಲಿ ರು.8 ಲಕ್ಷ ಮೌಲ್ಯದ ಮನೆ, ರು.21 ಲಕ್ಷ ಮೌಲ್ಯದ ರಸಗೊಬ್ಬರ ಗೋದಾಮು, ಬೀಳಗಿ ಕ್ರಾಸ್ ಕೊರ್ತಿ ಪುನರ್ವಸತಿ ಕೇಂದ್ರದಲ್ಲಿ ರು.64 ಸಾವಿರ ಮೌಲ್ಯದ ಪ್ಲಾಟ್ ಹಾಗೂ ರು.10 ಲಕ್ಷ ಮೌಲ್ಯದ ಮನೆ, ಮಂಗಳೂರು ಜಿಲ್ಲಾ ಸುರತ್ಕಲ್ ಹೋಬಳಿಯ ಕಾವೂರ ಗ್ರಾಮದಲ್ಲಿ ರು.10 ಲಕ್ಷ ಮೌಲ್ಯದ ಮನೆ, ಬಾಗಲಕೋಟೆ ತಾಲೂಕಿನ ಸಿಮಿಕೇರಿ ಪುನರ್ವತಿ ಕೇಂದ್ರದಲ್ಲಿ ರು.1.75 ಲಕ್ಷ ಮೌಲ್ಯದ ಎರಡು ಪ್ರತ್ಯೇಕ ನಿವೇಶನ, ಬಾದಾಮಿ ತಾಲೂಕಿನ ತೋಗುಣಸಿ ಗ್ರಾಮದಲ್ಲಿ ರು.6 ಲಕ್ಷ ಮೌಲ್ಯದ ಜಮೀನು ಹೊಂದಿದ್ದಾರೆ. ಮಾರುತಿ ಅಲ್ಟೋ ಕಾರ್ ಇದೆ. ರು.34 ಸಾವಿರ ನಗದು ಹಾಗೂ 143 ಗ್ರಾಂ ಚಿನ್ನ ದಾಳಿ ವೇಳೆಯಲ್ಲಿ ಪತ್ತೆಯಾಗಿದೆ. ಹಿರೇಮಠ ಅವರ ಒಟ್ಟಾರೆ ಆದಾಯ ರು.35 ಲಕ್ಷ ಮಾತ್ರವಿದ್ದು ರು.73.14 ಲಕ್ಷ ಆಸ್ತಿ ಹೊಂದಿದ್ದಾರೆ. ರು.49.38 ಲಕ್ಷ ಮೌಲ್ಯದ ಅಕ್ರಮ ಆಸ್ತಿ ಹೊಂದಿದ್ದಾರೆ.

ಬಾಲಕೃಷ್ಣ (ಸಂಪಾಜೆ ವಲಯ ಅರಣ್ಯಾಧಿಕಾರಿ)
ಲೋಕಾಯುಕ್ತ ಇಲಾಖೆಯ ಅಧಿಕಾರಿಗಳು ಗುರುವಾರ ಸಂಪಾಜೆ ವಲಯ ಅರಣ್ಯಾಧಿಕಾರಿಗೆ ಸೇರಿದ ಪುತ್ತೂರಿನ ಉರ್ಲಾಂಡಿಯಲ್ಲಿರುವ `ಗೋಕುಲ' ಹೆಸರಿನ ಮನೆಗೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ. ಬಾಲಕೃಷ್ಣ ಅವರ ಮನೆಯಲ್ಲಿ ರು.3.75 ಲಕ್ಷ ನಗದು ಪತ್ತೆಯಾಗಿದ್ದು, ಮನೆ ಹಾಗೂ ಬ್ಯಾಂಕ್ ಲಾಕರ್‍ನಲ್ಲಿ ಇಟ್ಟಿದ್ದ ಚಿನ್ನಾಭರಣ, ಎಸ್‍ಬಿಐ ಮತ್ತು ಎಸ್‍ಬಿಎಂ ಬ್ಯಾಂಕ್ ಖಾತೆಗಳ ಉಳಿತಾಯದ ಬಗ್ಗೆಯೂ ಮಾಹಿತಿ ಪಡೆದುಕೊಳ್ಳಲಾಗಿದೆ. ಅಲ್ಲದೆ ಒಂದು ತಂಡವು ಬಾಲಕೃಷ್ಣ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಸಂಪಾಜೆಯ ಕಚೇರಿಗೂ ತೆರಳಿ ಶೋಧ ಕಾರ್ಯ ನಡೆಸಿದೆ. ಬಾಲಕೃಷ್ಣ ಅವರು ಪಂಜ ಮತ್ತು ನರಿಮೊಗರು ಕಡೆಗಳಲ್ಲಿ ಆಸ್ತಿ ಹೊಂದಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆಯೂ ಅಧಿಕಾರಿಗಳು ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ. ಪ್ರಸ್ತುತ ಮಡಿಕೇರಿ ವಿಭಾಗದ ಸಂಪಾಜೆ ವಲಯದ ಅರಣ್ಯ ಅಧಿಕಾರಿಯಾಗಿರುವ ಬಾಲಕೃಷ್ಣ ಅವರು ಕಳೆದ ಒಂದು ವರ್ಷದಿಂದೀಚೆಗೆ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com