
ಬೆಂಗಳೂರು: ಗೃಹ ಕಾರ್ಮಿಕರನ್ನು ಅಂತರಾಷ್ಟ್ರೀಯ ಕಾರ್ಮಿಕರ ಸಂಸ್ಥೆಗೆ ಸೇರ್ಪಡೆಗೊಳಿಸುವ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಗೃಹ ಕಾರ್ಮಿಕರ ವೃತ್ತಿ ಸಂಘಟನೆ ಮತ್ತು ಕರ್ನಾಟಕ ಗೃಹ ಕಾರ್ಮಿಕರ ಚಳುವಳಿಯ ಸದಸ್ಯರು ನಾಳೆ ಧರಣಿ ಹಮ್ಮಿಕೊಂಡಿದ್ದಾರೆ.
ಗೃಹ ಕಾರ್ಮಿಕರಿಗೆ ಸಾಮಾಜಿಕ ರಕ್ಷಣೆ ಒದಗಿಸುವ ಕಾನೂನು ರಚಿಸಬೇಕು ಹಾಗೂ ಕನಿಷ್ಠ ವೇತನವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿ ನಾಳೆ ಮಧ್ಯಾಹ್ನ 2.30ಕ್ಕೆ ಪುರಭವನದ ಮುಂಭಾಗ ಧರಣಿ ಹಮ್ಮಿ ಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ಗೃಹ ಕಾರ್ಮಿಕರ ವೃತ್ತಿ ಸಂಘಟನೆಯ ಕಾರ್ಯದರ್ಶಿ ಲಲಿತಾ ತಿಳಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಕಾರ್ಮಿಕರ ಸಂಸ್ಥೆಯ ಕಾರ್ಮಿಕರ ಯೋಗ್ಯ ಕೆಲಸಕ್ಕೆ ಸಂಬಂಧಿಸಿದ ಒಪ್ಪಂದ 189ಕ್ಕೆ ಭಾರತ ಅನುಮೋದನೆ ನೀಡಬೇಕು. ಗೃಹ ಕಾರ್ಮಿಕರಿಗೆ ವಾರದ ರಜೆ, ನಿಗದಿತ ವೇತನ, ಆರೋಗ್ಯ ಯೋಜನೆ, ವಸತಿ, ಪಿಎಫ್, ಇಎಸ್ಐ ಮತ್ತಿತರ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಈ ಧರಣಿ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಗೃಹ ಕಾರ್ಮಿಕರಿಗೆ ಬಿಪಿಎಲ್ ಪಡಿತರ ಚೀಟಿ ವಿತರಿಸಬೇಕು. ಗೃಹ ಕಾರ್ಮಿಕರಿಗೆ ಅತಿ ಶೀಘ್ರದಲ್ಲಿ ಅಸಂಘಟಿತ ಕಾರ್ಮಿಕರ ಗುರುತಿನ ಚೀಟಿ ನೀಡಬೇಕು ಎಂದು ಅವರು ಒತ್ತಾಯಿಸಿದರು.
Advertisement