ಪ್ರತ್ಯೇಕ ಅಪಘಾತ: 12 ಜನರ ಸಾವು

ರಾಜ್ಯದಲ್ಲಿ ಭಾನುವಾರ ಸಂಭವಿಸಿದ ಐದು ಪ್ರತ್ಯೇಕ ಅಪಘಾತದಲ್ಲಿ 12 ಜನರು ಮೃತಪಟ್ಟಿದ್ದು, 36 ಮಂದಿ ಗಾಯಗೊಂಡಿದ್ದಾರೆ.
ಕಂದಕಕ್ಕೆ ಉರುಳಿದ ಕೆಎಎಸ್ ಆರ್ ಟಿಸಿ ಬಸ್
ಕಂದಕಕ್ಕೆ ಉರುಳಿದ ಕೆಎಎಸ್ ಆರ್ ಟಿಸಿ ಬಸ್

ಬೆಂಗಳೂರು: ರಾಜ್ಯದಲ್ಲಿ ಭಾನುವಾರ ಸಂಭವಿಸಿದ ಐದು ಪ್ರತ್ಯೇಕ ಅಪಘಾತದಲ್ಲಿ 12 ಜನರು ಮೃತಪಟ್ಟಿದ್ದು, 36 ಮಂದಿ ಗಾಯಗೊಂಡಿದ್ದಾರೆ.

ಹರಿಹರ ತಾಲೂಕಿನ ಬ್ಯಾಲದಹಳ್ಳಿ- ಎಕ್ಕೆಗೊಂದಿ ಸಮೀಪ ಭಾನುವಾರ ಬೆಳಗಿನ ಜಾವ 2.30ರ ವೇಳೆಗೆ ಸೇತುವೆ ತಡೆಗೋಡೆಗೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದು ಹಳ್ಳಕ್ಕೆಉರುಳಿ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದು, 23 ಮಂದಿ ಗಾಯಗೊಂಡಿದ್ದಾರೆ. ಶಿವಮೊಗ್ಗದಿಂದ ದಾವಣಗೆರೆಗೆ ತೆರಳುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಬಳಿಕ ಹಳ್ಳಕ್ಕೆ ಉರುಳಿ ಬಿದ್ದಿದ್ದರಿಂದ ಇಬ್ಬರು ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ದಾವಣಗೆರೆ ಚಿಟಗೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಶಾಸಕ ಎಚ್.ಎಸ್. ಶಿವಶಂಕರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇನ್ನೊಂದು ಘಟನೆಯಲ್ಲಿ ಸಂಕೇಶ್ವರ ಸಮೀಪದ ರಾಷ್ಟ್ರೀಯ ಹೆದ್ದಾರಿ ನಂ.4ರ ಹಿಂದೂಸ್ತಾನ ಲೆಟೆಕ್ಸ್ ಕಾರ್ಖಾನೆ ಬಳಿ ಮುಂದೆ ಹೋಗುತ್ತಿದ್ದ ಅಲ್ಟೊ ಕಾರ್‍ಗೆ ಹಿಂದಿನಿಂದ ಟ್ರಕ್ ಜೋರಾಗಿ ಡಿಕ್ಕಿ ಹೊಡೆದಿದ್ದರಿಂದ ಮಲ್ಲೇಶ ಅನಾರ ಗಾಗಡೆ (44), ಮಂಗಲಾ ಮಲ್ಲೇಶ ಗಾಗಡೆ (31) ಕಲ್ಪನಾ ಅರವಿಂದ ಗಾಗಡೆ (32)

ಮೃತಪಟ್ಟಿದ್ದಾರೆ. ಮೃತರೆಲ್ಲರೂ ಗದಗ ಜಿಲ್ಲೆಯ ನರೇಗಲ್ ತಾಲೂಕಿನವರು ಎಂದು ತಿಳಿದು ಬಂದಿದೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಸಂಬಂಧಿಕರನ್ನು ನೋಡಲು
ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಮೃತರ ಪೈಕಿ ಮಲ್ಲೇಶ ಗಾಗಡೆ ಗದಗ ಜಿಲ್ಲೆಯಲ್ಲಿ ಪೊಲೀಸ್ ಪೇದೆಯಾಗಿದ್ದರು ಎಂದು ಗೊತ್ತಾಗಿದೆ. ಮತ್ತೊಂದು ಘಟನೆಯಲ್ಲಿ ಚನ್ನರಾಯಪಟ್ಟಣ ತಾಲೂಕಿನ ಮಟ್ಟನವಿಲೆ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸ್ಕೋಡಾ ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ಹಳಕ್ಕೆ ಉರುಳಿ ನಂತರ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟು , ಮೂವರು ಗಾಯಗೊಂಡಿದ್ದಾರೆ.

ಬೆಂಗಳೂರಿನ ಮಲ್ಲಸಂದ್ರದ ಶರತ್ (25), ಮಮತಾ (24) ಹಾಗೂ ಪುತ್ರ ಧನುಷ್ (ಎರಡೂವರೆ ವರ್ಷ) ಮತಪಟ್ಟ ದುರ್ಧೈವಿಗಳು. ಕಾರಿನಲ್ಲಿದ್ದ ಸಿದ್ದರಾಜು, ಉಮೇಶ್ ಹಾಗೂ ನಂದಿನಿ ತೀವ್ರ ಗಾಯಗೊಂಡಿದ್ದು, ಮಟ್ಟನವಿಲೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ ಎಂದು ಹಿರೀಸಾವೆ ಸಬ್‍ಇನ್ಸ್‍ಪೆಕ್ಟರ್ ಸುರೇಶ್ ತಿಳಿಸಿದ್ದಾರೆ.

ಬೆಂಗಳೂರಿನಿಂದ ಚನ್ನರಾಯಪಟ್ಟಣದಲ್ಲಿ ನಡೆಯುತ್ತಿದ್ದ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆಂದು ಕಾರಿನಲ್ಲಿ ತೆರಳುತ್ತಿರುವಾಗ ಈ ಅಪಘಾತ ನಡೆದಿದೆ. ನಾಗಮಂಗಲ ತಾಲೂಕಿನ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಟಾಟಾ ಸುಮೋ ಟೈರ್ ಸಿಡಿದು, ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟು, 8 ಮಂದಿ ತೀವ್ರಗಾಯಗೊಂಡಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆ ವಾಸಿಗಳಾದ ರಾಮೇಗೌಡ (65) ಸ್ಥಳದಲ್ಲಿಯೇ ಮೃತಪಟ್ಟಿದ್ದು, ಪತ್ನಿ ಸುಮಿತ್ರಾ(55) ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಅದೇ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಮೇಘನಾ, ನಾಗರತ್ನ, ರಂಜಿತಾ, ಹರ್ಷಿತಾ, ಸತೀಶ್, ನಂದೀಶ್, ಕುಮಾರ್, ಗಗನ್ ತೀವ್ರವಾಗಿ ಗಾಯಗೊಂಡಿದ್ದು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಲೂಕಿನ ಆದಿಚುಂಚನಗಿರಿ ಮತ್ತು ಮುಳುಕಟ್ಟೆಯ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆದು ಹಿಂದಿರುಗುವಾಗ ಈ ಘಟನೆ ಸಂಭವಿಸಿದೆ. ಮಾಣಿ- ಮೈಸೂರು ರಾಜ್ಯ ಹೆದ್ದಾರಿಯ ಪುತ್ತೂರು ತಾಲೂಕಿನ ಕೌಡಿಚ್ಚಾರು ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಎರಡು ಕಾರುಗಳಿಗೆ ಡಿಕ್ಕಿ ಹೊಡೆದು ಒಂದೇ ಕುಟುಂಬದ ಇಬ್ಬರು ಮೃತಪಟ್ಟಿದ್ದು, ಇಬ್ಬರು
ಗಾಯಗೊಂಡಿದ್ದಾರೆ. ಬೆಂಗಳೂರಿನ ಉತ್ತರಹಳ್ಳಿ ನಿವಾಸಿಗಳಾದ ಸೂರ್ಯನಾರಾಯಣ (64) ಮತ್ತು ಗೋಪಿನಾಥ್ (45) ಮೃತರು. ಕಾರ್ತಿಕ್, ವಿಠಲ್ ಗಂಭೀರ ಗಾಯಗೊಂಡಿದ್ದು
ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರು ತಾಲೂಕಿನ ಬನ್ನೂರು ಎಂಬಲ್ಲಿರುವ ವೆಂಕಟ್ರಮಣ ರಾವ್ ಎಂಬವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಪುತ್ತೂರಿಗೆ
ತೆರಳುತ್ತಿದ್ದರು.

ಕೌಡಿಚ್ಚಾರ್ ಸಮೀಪ ಮಳೆ ನೀರಿನಿಂದಾಗಿ ಮಣ್ಣು ರಸ್ತೆಯನ್ನು ಆಕ್ರಮಿಸಿದ್ದು, ಈ ಮಣ್ಣಿನ ಮೇಲೆಯೇ ಚಾಲಕ ಕಾರು ಚಲಾಯಿಸಿದ ಪರಿಣಾಮ ಕಾರಿನ ಚಕ್ರದಲ್ಲಿ ಮಣ್ಣು ಮೆತ್ತಿಕೊಂಡು ನಿಯಂತ್ರಣ ತಪ್ಪಿದೆ. ಎದುರಿಗೆ ಬರುತ್ತಿದ್ದ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಇದೇ ಸಂದರ್ಭ ಹಿಂಭಾಗದಿಂದ ಆಗಮಿಸುತ್ತಿದ್ದ ಮತ್ತೊಂದು ಕಾರಿಗೂ ಕಾರು ಸವರಿಕೊಂಡು ಹೋಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com