
ಬೆಂಗಳೂರು: ಈಶಾನ್ಯ ವಿಭಾಗ ಪೊಲೀಸರು ಕಾರ್ಯಾಚರಣೆ ನಡೆಸಿ ವಿವಿಧ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ 19 ಆರೋಪಿಗಳನ್ನು ಬಂಧಿಸಿ ರು.79.52 ಲಕ್ಷ ಮೌಲ್ಯದ ರು.2 ಕೆಜಿಗೂ ಅಧಿಕ ಚಿನ್ನಾಭರಣ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮೋಜಿನ ಜೀವನಕ್ಕಾಗಿ ನಗರದ ವಿವಿಧೆಡೆ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಬೀಗ ಮುರಿದು ಕಳವು ಮಾಡುತ್ತಿದ್ದ ಕುಖ್ಯಾತ ಕಳ್ಳ ಜಾಲಹಳ್ಳಿ ವಿಲೇಜ್‍ನ ಪ್ರಕಾಶ(22) ಎಂಬಾತ
ನನ್ನು ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಈತನಿಂದ ಚಿನ್ನಾಭರಣ ಪಡೆದು ಮಾರಾಟ ಮಾಡುತ್ತಿದ್ದ ಚಿಕ್ಕಬಳ್ಳಾಪುರದ ಮೋಹನ್ ಬಾಬು(38) ಎಂಬಾತನನ್ನು ಬಂಧಿಸಲಾಗಿದೆ.
ಆರೋಪಿಗಳಿಂದ ರು.31.52 ಲಕ್ಷ ಮೌಲ್ಯದ 1 ಕೆಜಿ 126 ಗ್ರಾಂ ಚಿನ್ನಾಭರಣ, ರು.3.50 ಲಕ್ಷ ಮೌಲ್ಯದ 5 ಕೆಜಿ ಬೆಳ್ಳಿ ವಸ್ತುಗಳು, ರು.40 ಸಾವಿರ ಮೌಲ್ಯದ 1 ಎಲ್‍ಇಡಿ ಟಿವಿ ವಶಪಡಿಸಿಕೊಳ್ಳಲಾಗಿದ್ದು ಇವುಗಳ ಮೌಲ್ಯ ರು.35.42 ಲಕ್ಷ.
ಆರೋಪಿಗಳ ಬಂಧನದಿಂದ ಕೊಡಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ 3 ಕಳ್ಳತನ ಪ್ರಕರಣಗಳು, ವಿದ್ಯಾರಣ್ಯಪುರ 2, ಯಲಹಂಕ, ಸೋಲದೇವನಹಳ್ಳಿ, ಎಚ್‍ಎಸ್‍ಆರ್ ಬಡಾವಣೆ, ಪರಪ್ಪನ ಅಗ್ರಹಾರ ಮತ್ತು ಚಿಂತಾಮಣಿ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ 1 ಸೇರಿ 10 ಪ್ರಕರಣಗಳು ಪತ್ತೆಯಾಗಿವೆ. ಪ್ರಕರಣದಲ್ಲಿ ಇನ್ನು ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಶೋಧ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯಲಹಂಕ: ಪೊಲೀಸರು 8 ಆರೋಪಿಗಳನ್ನು ಬಂಧಿಸಿ ರು.19.78 ಲಕ್ಷ ಮೌಲ್ಯದ 2 ಕಾರುಗಳು, 1 ಟ್ರ್ಯಾಕ್ಟರ್, 1 ಗೂಡ್ಸ್ ವಾಹನ, 65 ಗ್ರಾಂ ಚಿನ್ನಾಭರಣ ಸೇರಿ ರು.21.40 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆಂಧ್ರಪ್ರದೇಶದ ಈರಪ್ಪ (19), ಕರಿ ನಾಗ (36), ಯಲಹಂಕ ಮಾರುತಿನಗರದ ಶ್ರೀನಿವಾಸ್(23), ಜಾಲಹಳ್ಳಿ ವಿಲೇಜ್‍ನ ಪ್ರಕಾಶ್ (22), ಅಳ್ಳಾಲಸಂದ್ರದ ಆನಂದ (19), ಕಿಶೋರ್(22), ಹನುಮಪ್ಪ ಬಡಾವಣೆಯ ನರಸಿಂಹ(22) ಹಾಗೂ ಯಲಹಂಕ ಎಲ್‍ಬಿಎಸ್ ನಗರದ ಗೋಪಿರಾಜ್(19) ಬಂಧಿತರು.
ದೇವನಹಳ್ಳಿ: ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ರು.7 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 1 ಸ್ಕಾರ್ಪಿಯೋ ವಾಹನ ವಶಪಡಿಸಿಕೊಂಡಿದ್ದಾರೆ. ಯಲಹಂಕ ಉಪನಗರ:ಪೊಲೀಸರು ಮೂವರು ಮನೆಗಳ್ಳರನ್ನು ಬಂಧಿಸಿ 105 ಗ್ರಾಂ ಚಿನ್ನಾಭರಣ, 3 ಕೆಜಿ ಬೆಳ್ಳಿ ಹಾಗೂ 2 ದ್ವಿಚಕ್ರ ವಾಹನ ಸೇರಿದಂತೆ ಒಟ್ಟು ರು.5.70 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಸಂಪಿಗೆಹಳ್ಳಿ: ಮೂವರು ಕನ್ನಗಳವು ಆರೋಪಿಗಳ ಬಂಧಿಸಿರುವ ಸಂಪಿಗೆಹಳ್ಳಿ ಪೊಲೀಸರು ರು.3.30 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ 1 ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ. ಅಪರಾಧ ಪ್ರಕರಣಗಳ ಪತ್ತೆ ಕಾರ್ಯದಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಠಾಣೆಗಳ `ಕ್ರೈಂ ಪೊಲೀಸ್' ಸಿಬ್ಬಂದಿಗೆ ಅಭಿನಂದಿಸಿ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ. ಹರಿಶೇಖರನ್ ಸೂಕ್ತ ಬಹುಮಾನ ಹಾಗೂ ಪ್ರಶಂಸನಾ ಪತ್ರ ವಿತರಿಸುವುದಾಗಿ ಹೇಳಿದರು.
Advertisement