ಬಿಬಿಎಂಪಿ ಮೂರು, ಬೆಂಗಳೂರು ಚೂರು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಬೆಂಗಳೂರು ವಿಶ್ವವಿದ್ಯಾಲಯವನ್ನು ಆಡಳಿತಾತ್ಮಕವಾಗಿ ಮೂರು ವಿಭಾಗ ಮಾಡುವುದೂ...
ಬಿಬಿಎಂಪಿ (ಸಂಗ್ರಹ ಚಿತ್ರ)
ಬಿಬಿಎಂಪಿ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಬೆಂಗಳೂರು ವಿಶ್ವವಿದ್ಯಾಲಯವನ್ನು ಆಡಳಿತಾತ್ಮಕವಾಗಿ ಮೂರು ವಿಭಾಗ ಮಾಡುವುದೂ ಸೇರಿದಂತೆ 62 ಮಹತ್ವದ ನಿರ್ಧಾರಗಳಿಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಿಬಿಎಂಪಿ ವಿಭಜನೆಗೆ ಕೊನೆಗೂ ಒಪ್ಪಿಗೆ ನೀಡಲಾಗಿದೆ. ಈ ಸಂಬಂಧ ಮೂವರು ನಿವೃತ್ತ ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ರಚಿಸಿದ್ದ ಅಧ್ಯಯನ ಸಮಿತಿ ನೀಡಿದ ಎರಡನೇ ವರದಿ ಆಧರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಿಬಿಎಂಪಿಯನ್ನು ಮೂರು ಭಾಗವಾಗಿ ವಿಭಜಿಸುವಂತೆ ನಗರಾಭಿವೃದ್ಧಿ ಇಲಾಖೆ ಈಗಾಗಲೇ ವರದಿ ಸಲ್ಲಿಸಿತ್ತು. ಆದರೆ ವಿಭಜನೆಯ ಸ್ವರೂಪ ಏನು, ಯಾವ ವಿಭಾಗದಲ್ಲಿ ಎಷ್ಟು ವಾರ್ಡ್ ಇರಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ.

ಸಂಪುಟದ ಇತರೆ ಪ್ರಮುಖ ನಿರ್ಧಾರಗಳು ಹೀಗಿವೆ
ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳು, ಎಲ್ಲ ಖಾಸಗಿ ಸಂಸ್ಥೆಗಳಲ್ಲಿ 1ರಿಂದ 10ನೇ ತರಗತಿ ವರೆಗೆ ಕನ್ನಡವನ್ನು ಒಂದು ಭಾಷೆಯಾಗಿ ಕಲಿಯುವುದು ಕಡ್ಡಾಯ. ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಿಗೂ ಈ ನಿಯಮ ಅನ್ವಯ. ಅದರ ಜತೆಗೆ 1ರಿಂದ 5ನೇ ತರಗತಿವರೆಗೆ ಕನ್ನಡ ವನ್ನು ಮಾಧ್ಯಮವಾಗಿ ಕಲಿಯುವುದನ್ನು ಕಡ್ಡಾಯವಾಗಿಸಲು ಆರ್ ಟಿಇ ಕಾನೂನಿಗೆ ತಿದ್ದುಪಡಿ. ಕಾಯ್ದೆಯಲ್ಲಿರುವ ಆಸ್ ಫಾರ್ ಆಸ್ ಪ್ರಾಕ್ಟಿಕೇಬಲ್ ಎಂಬ ಶಬ್ದದ ಬದಲು ಕನ್ನಡ ಎಂದು ಸೇರಿಸಲು ನಿರ್ಧಾರ. ಇದಕ್ಕೆ ಸಂಬಂ„ಸಿದ ವಿಧೇಯಕವನ್ನು ಪ್ರಸ್ತುತ ಅಧಿವೇಶನದಲ್ಲಿ ಮಂಡಿಸಲು ನಿರ್ಧಾರ.

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಅಸ್ತು. ಪತಿ-ಪತ್ನಿ ಮತ್ತು ಪರಸ್ಪರ ವರ್ಗಾವಣೆ ಪ್ರಮಾಣ ಜ್ಯೇಷ್ಠತಾ ಘಟಕ ಆಧಾರದ ಮೇಲೆ ಶೇ.5ರಿಂದ ಶೇ.8ಕ್ಕೆ ಹೆಚ್ಚಳ. 17000ಕ್ಕೂ ಹೆಚ್ಚು ಅರ್ಜಿಗಳು ಬಾಕಿ ಇದ್ದು, ಶೀಘ್ರ ವಿಲೇವಾರಿಗೆ ನಿರ್ಧಾರ.

ಬೆಂಗಳೂರು ವಿಶ್ವವಿದ್ಯಾಲಯ ಮೂರು ಭಾಗವಾಗಿ ವಿಭಜನೆ. ಬೆಂಗಳೂರು ವಿವಿ ವ್ಯಾಪ್ತಿಯಲ್ಲಿ 600ಕ್ಕೂ ಹೆಚ್ಚು ಕಾಲೇಜುಗಳಿವೆ. ಆದರೆ 100 ಕಾಲೇಜುಗಳಿಗೆ 1 ವಿವಿ ಸ್ಥಾಪನೆ ಮಾಡುವಂತೆ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಸಚಿವರಾದ ಆರ್.ವಿ.ದೇಶಪಾಂಡೆ, ಟಿ.ಬಿ.ಜಯಚಂದ್ರ, ಯು.ಟಿ.ಖಾದರ್ ನೇತೃತ್ವದ ಸಂಪುಟ ಉಪಸಮಿತಿ ನೀಡಿದ ವರದಿ ಆಧರಿಸಿ 200 ಕಾಲೇಜುಗಳಿಗೆ 1ರಂತೆ ಮೂರು ವಿಶ್ವವಿದ್ಯಾಲಯ ಸ್ಥಾಪನೆಗೆ ನಿರ್ಧಾರ. ವಿಶ್ವವಿದ್ಯಾಲಯದ ಹೆಸರು ಹಾಗೂ ಇನ್ನಿತರ ಅಂಶಗಳ ಬಗ್ಗೆ ಉನ್ನತ ಶಿಕ್ಷಣ ಇಲಾಖೆಯಿಂದ ರೂಪುರೇಷೆ.

ಎಲ್‍ಒಸಿ ಮಾರಾಟಕ್ಕೆ!
ಗುತ್ತಿಗೆದಾರರಿಂದ ಎಲ್‍ಒಸಿ ನೀಡಲು ಅಧಿಕಾರಿಗಳು ಹಣ ಪಡೆಯುತ್ತಿದ್ದಾರೆ. ಸಿಇಒ ಹಾಗೂ ಇತರ ಅಧಿಕಾರಿಗಳು ಎಲ್‍ಒಸಿ ಮಾರುತ್ತಿದ್ದು, ಲೋಕಾಯುಕ್ತ ತನಿಖೆಯಾಗಬೇಕು. ವಾರ್ಡ್ ಮಟ್ಟದಲ್ಲಿ ನೀಡಿದ ಎಲ್‍ಒಸಿ ಹಾಗೂ  ಬಿಡುಗಡೆಯಾದ ಮೊತ್ತದ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿ, ಕಾಂಗ್ರೆಸ್‍ನ ರಿಜ್ವಾನ್ ಮೇಯರ್ ಪೀಠದ ಮುಂದೆ ಪ್ರತಿಭಟಿಸಿದರು. ಬಜೆಟ್ ಚರ್ಚೆ ನಂತರ ಈ ಕುರಿತು ಚರ್ಚಿಸಿ ಎಂದು ಮೇಯರ್ ಸೂಚಿಸಿದರು. ಚರ್ಚೆಯ ವೇಳೆ ಮಾತನಾಡಿದ ಬಿಜೆಪಿಯ ಸಿದ್ದಲಿಂಗಯ್ಯ, ಸಿಇಒ ಜೊತೆಗೆ ಶಾಮೀಲಾಗಿ ಗುತ್ತಿಗೆದಾರರಿಂದ ಕಮಿಷನ್ ಪಡೆಯುತ್ತಿರುವ ಅಧಿಕಾರಿ ನಾರಾಯಣಸ್ವಾಮಿ ಅವರನ್ನು ಕೂಡಲೇ ವರ್ಗಾಯಿಸಬೇಕು ಎಂದು ಆಗ್ರಹಿಸಿದರು.

ಬಜೆಟ್ ಮರುಮಂಡಿಸಿ
ಸಾಲ ಹಾಗೂ ಬಡ್ಡಿ ಮೂಲಕ ಬಿಬಿಎಂಪಿಯನ್ನು ಅಧೋಗತಿಗೆ ತಳ್ಳಿರುವ ಆಯವ್ಯಯವನ್ನು ಸರಿಪಡಿಸಿ ಮತ್ತೊಮ್ಮೆ ಮಂಡಿಸಬೇಕು ಎಂದು ಕಾಂಗ್ರೆಸ್ ನಾಯಕ ಮಂಜುನಾಥ ರೆಡ್ಡಿ ಆಗ್ರಹಿಸಿದರು. ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಬಿಬಿಎಂಪಿಯಲ್ಲಿ ವರ್ಷಾಂತ್ಯಕ್ಕೆ ರು.4,930 ಕೋಟಿ ಕಡ್ಡಾಯ ಪಾವತಿ, ಮಾರ್ಚ್ ಅಂತ್ಯಕ್ಕೆ ರು.54 ಕೋಟಿ ಸಾಲ ಮರುಪಾವತಿ, ರು.1,500 ಕೋಟಿ ಬಿಲ್ ಪಾವತಿ ಮಾಡಬೇಕಿದೆ. ಹಲವು ಆಸ್ತಿಗಳನ್ನು ಸಾಲದ ಕಾರಣಕ್ಕೆ ಅಡಮಾನ ಇಡಲಾಗಿದೆ. ಕಲ್ಯಾಣ ಕಾರ್ಯಕ್ರಮಗಳಲ್ಲಿ ಶೇ.90 ರಷ್ಟು ವಿಫಲವಾಗಲಿದ್ದು, ಬಾಕಿ ಇನ್ನೂ ಪಾವತಿಯಾಗಿಲ್ಲ ಎಂದು ಟೀಕಿಸಿದರು. ಜೆಡಿಎಸ್‍ನ ಆರ್.ಪ್ರಕಾಶ್, ಬಿಜೆಪಿ ಆಡಳಿತ ಅವಾಸ್ತವ ಬಜೆಟ್ ಮಂಡಿಸಿದೆ. ನಗರದಲ್ಲಿ ಹೆಚ್ಚಿರುವ ಅಪಘಾತ ತಡೆಯಲು ಕ್ರಮ ಕೈಗೊಂಡಿಲ್ಲ. ಬಜೆಟ್‍ನಲ್ಲಿ ಸ್ಕೈವಾಕ್ ಉಲ್ಲೇಖವಿಲ್ಲ ಎಂದು ಖಂಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com