ಕನ್ನಡ ಸಾಂಸ್ಕೃತಿಕ ಲೋಕದ ಅನಾವರಣ

ಅಲ್ಲಿ ನಾಡಿನ ವಿವಿಧ ಜಿಲ್ಲೆಗಳ ಸಾಂಸ್ಕೃತಿಕ ಕಲಾ ಲೋಕವೇ ನೆರೆದಿತ್ತು. ಕರುನಾಡು ಗ್ರಾಮೀಣ ಕಲೆಗಳಿಗೆ ಮನಸೋತ ಐಟಿ-ಬಿಟಿ ಜನರು ಜಾನಪದ ಕಲೆಗಳ ನೃತ್ಯ, ಕುಣಿತವನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿಯಲು..
ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ (ಸಂಗ್ರಹ ಚಿತ್ರ)
ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ (ಸಂಗ್ರಹ ಚಿತ್ರ)

ಬೆಂಗಳೂರು: ಅಲ್ಲಿ ನಾಡಿನ ವಿವಿಧ ಜಿಲ್ಲೆಗಳ ಸಾಂಸ್ಕೃತಿಕ ಕಲಾ ಲೋಕವೇ ನೆರೆದಿತ್ತು. ಕರುನಾಡು ಗ್ರಾಮೀಣ ಕಲೆಗಳಿಗೆ ಮನಸೋತ ಐಟಿ-ಬಿಟಿ ಜನರು ಜಾನಪದ ಕಲೆಗಳ ನೃತ್ಯ,  ಕುಣಿತವನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿಯಲು ಮುಗಿಬೀಳುತ್ತಿದ್ದರು. ಇನ್ನು ಮಕ್ಕಳು, ಯುವಕರು ಜಾನಪದ ಕಲಾವಿದರೊಂದಿಗೆ ಸೆಲ್ಫಿ ಫೋಟೊಗೆ ಪೋಸು ಕೊಡುವುದು ಸಾಮಾನ್ಯವಾಗಿತ್ತು.

ಚಾಮರಾಜಪೇಟೆ ನಾಡಹಬ್ಬ ಕನ್ನಡ ರಾಜ್ಯೋತ್ಸವ ಸಮಿತಿ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 45ಕ್ಕೂ ಹೆಚ್ಚು ಕಲಾತಂಡಗಳು ಸಾಂಸ್ಕೃತಿಕ, ಜಾನಪದ ಕಲಾಪ್ರಪಂಚವನ್ನು ಅನಾವರಣ ಮಾಡಿ ನೋಡುಗರಿಗೆ ಮುದ ನೀಡಿದವು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಶಾರದಾ ಆಟ್ರ್ಸ್‍ನ ಜಾನಪದ ಗೊಂಬೆ  ಆಟ, ಚೆಂಡೆ ಆಟ, ಹುಲಿ ಕುಣಿತ, ಕುದುರೆ ಕುಣಿತ, ಕರಗ ಕುಣಿತ, ನಾಗಿಣಿ ಕುಣಿತಗಳು ಮನ ತಣಿಸಿದವು.

ರಾಮಕಥೆಯ ವೇಷಧಾರಿಗಳ ಕಮಾಲ್: ಹನುಮನ ಪಾತ್ರಧಾರಿಯ ಚೇಷ್ಟೆಯನ್ನು ಚಾಮರಾಜಪೇಟೆ ಗಲ್ಲಿಗಲ್ಲಿಗಳ ಮಕ್ಕಳು ನೋಡಿ ನಕ್ಕು ನಲಿದರು. ರಾಕ್ಷಸಿ ಹಿಡಿಂಬೆ ನರ್ತನ, ವೇಷಭೂಷಣ  ಕಂಡು ಬೆರಗಾದ ಮಕ್ಕಳು, ಪಾತ್ರಧಾರಿಗಳು ಹತ್ತಿರ ಬರುತ್ತಿದ್ದಂತೆ ಕಾಲಿಗೆ ಬುದ್ಧಿ ಹೇಳುವುದು ಸಾಮಾನ್ಯವಾಗಿತ್ತು. ಲಕ್ಷ್ಮಣನಿಂದ ಹಿಡಿಂಬೆಗೆ ಅವಮಾನ, ಹನುಮಂತ ಮತ್ತು ಸುಗ್ರೀವನ ನಡುವೆ  ಗದಾಯುದ್ಧ, ರಾವಣ, ರಾಮ, ಮೇಘನಾಥ್ ಹೀಗೆ ಇಡೀ ರಾಮಾಯಣ ಕಥಾ ಪ್ರಪಂಚ ಅಬಿsನಯ ನಯನ ಮನೋಹರವಾಗಿತ್ತು.

ಉತ್ತರ ಕರ್ನಾಟಕ ಭಾಗದ ಸಾಂಸ್ಕೃತಿಕ ಕಲಾ ಮೇಳಗಳಲ್ಲಿ ಒಂದಾದ ಜಗ್ಗಲಗಿ ಶಬ್ದ ಕಿವಿ ಗುರುಗುಟ್ಟುವಂತೆ ಮಾಡಿತು. ಕರಗ ಕುಣಿತ, ವೀರಗಾಸೆ, ಜಾಂಜ್ ಮೇಳ, ವಾದ್ಯ, ಕಂಸಾಳೆ ಕುಣಿತ, ಡೊಳ್ಳು ಕುಣಿತ ಜೊತೆಗೆ ಲಲನೆಯರ ನವಿಲಿನ ನರ್ತನ ಸದಾ ಒತ್ತಡದಲ್ಲಿರುವ ನಗರದ ಜನತೆಗೆ ನಾಡಿನ ಸಂಸ್ಕೃತಿ ಕಲಾ ಹಿರಿಮೆ ಪರಿಚಯ ಮಾಡಿಸಿತು.

ಕಾಡು ಜನರ ಮೋಡಿ:
ನಾಗರಹೊಳೆ ಅಭಯಾರಣ್ಯದ ಕಾಡು ಜನರ ನೃತ್ಯ, ವೇಷಭೂಷಣ, ಕುಣಿತ, ನಾದಕ್ಕೆ ತಕ್ಕ ಹೆಜ್ಜೆ, ಕಾಡುಜನರ ಸಂಸ್ಕೃತಿ ಪರಿಚಯ ಮಾಡಿಸಿತು. ಸಾರಿಗೆ ಸಚಿವ  ರಾಮಲಿಂಗಾರೆಡ್ಡಿ, ಮೇಯರ್ ಮಂಜುನಾಥರೆಡ್ಡಿ, ಯೂತ್ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಆರ್ಷದ್, ಬಿಬಿಎಂಪಿ ಸದಸ್ಯ ಕೋಕಿಲ್ ಚಂದ್ರಶೇಖರ್ ಅವರು ರಾಜರಾಜೇಶ್ವರಿ ಅಮ್ಮ, ಮಲೆಮಹದೇಶ್ವರ ಸ್ವಾಮಿ ಮತ್ತು ಆದಿಪರಾಶಕ್ತಿ ಅಮ್ಮನವರ ರಥಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಚಾಮರಾಜಪೇಟೆಯ 3 ಮತ್ತು 4ನೇ ಕ್ರಾಸ್‍ನಲ್ಲಿ ವಿವಿಧ  ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ಸಾಗಿ ನಾಡಹಬ್ಬ ರಾಜ್ಯೋತ್ಸವನ್ನು ಸಂಭ್ರಮದಿಂದ ಆಚರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com