
ಬೆಂಗಳೂರು: `ಹಲೋ ನಾನು ಮೇಯರ್ ಮಾತನಾಡುತ್ತಿದ್ದೀನಿ. ನಿಮ್ಮ ಸಮಸ್ಯೆ, ವಾರ್ಡ್ ಸಂಖ್ಯೆ ಹಾಗೂ ಕಾರ್ಪೊರೇಟರ್ ಹೆಸರು ಹೇಳಿ' ಬಿಬಿಎಂಪಿ ಕೇಂದ್ರ ಕಚೇರಿಯ ನಿಯಂತ್ರಣ ಕೊಠಡಿಯಲ್ಲಿ ಮಂಗಳವಾರ ಮೇಯರ್ ಮಂಜುನಾಥ ರೆಡ್ಡಿ ಅವರ ಧ್ವನಿ ಕೇಳಿಬಂದಿದ್ದು ಹೀಗೆ. ಹಿಂದಿನ ದಿನ ಮಳೆಯಿಂದಾದ ಹಾನಿಯನ್ನು ದೂರವಾಣಿ ಮೂಲಕ ಕೇಳಿ ಅಧಿಕಾರಿಗಳಿಗೆ ತಿಳಿಸಲು ನಿಯಂತ್ರಣ ಕೊಠಡಿಯ ನಿರ್ವಹಣೆಯನ್ನು ಮೇಯರ್ ಅವರೇ ವಹಿಸಿಕೊಂಡಿದ್ದರು.
ಮಳೆಯಿಂದಾಗಿ ಕೆಲವು ಕಡೆ ಮರಗಳ ಕೊಂಬೆ ಬಿದ್ದಿದ್ದರೆ, ಮತ್ತೆ ಕೆಲವೆಡೆ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿತ್ತು. ಕೆಲವು ಪ್ರದೇಶ ಗಳಲ್ಲಿ ಹಾನಿಯಾಗಿ ಅಧಿಕಾರಿ ಗಳಿಗೆ ತಿಳಿಸಿದ್ದರೂ, ಪ್ರಯೋಜನವಾಗಿರಲಿಲ್ಲ. ನಿಯಂತ್ರಣ ಕೊಠಡಿಗೆ ನಿರಂತರವಾಗಿ ಕರೆಗಳು ಬರುತ್ತಿದ್ದು, ಸಿಬ್ಬಂದಿ ಎಲ್ಲವನ್ನೂ ಸ್ವೀಕರಿಸಿ ನಿರ್ವಹಣೆ ಮಾಡಲು ಪರದಾಡುತ್ತಿದ್ದರು. ಮಳೆಯಿಂದ ಮನೆಯ ಬಳಿ ಹಾನಿಯಾಗಿದೆ ಎಂದು ಹಿರಿಯ ನಾಗರಿಕರೊಬ್ಬರು ಕರೆ ಮಾಡಿ ಸಮಸ್ಯೆ ತೋಡಿಕೊಂಡರು. ಈ ಕರೆಗೆ ಉತ್ತರಿಸಿದ ಮೇಯರ್ ಮಂಜುನಾಥ ರೆಡ್ಡಿ, ನಿಮ್ಮ ವಾರ್ಡ್ ಸಂಖ್ಯೆಯನ್ನು ಸರಿಯಾಗಿ ತಿಳಿದುಕೊಂಡು ಹೇಳಿದರೆ ಕೂಡಲೇ ಸಮಸ್ಯೆ ಪರಿಹರಿಸಲಾಗುವುದು ಎಂದರು.
ನಂತರ ಬಂದ ಕರೆಗಳನ್ನು ಸ್ವೀಕರಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ನಂತರ ವಲಯ ಜಂಟಿ ಆಯುಕ್ತರನ್ನು ವಾಕಿಟಾಕಿ ಮೂಲಕ ಸಂಪರ್ಕಿಸಿ ಸೂಚನೆಗಳನ್ನು ನೀಡಲಾಯಿತು. ಪ್ರತಿ ವಲಯದ ನಿಯಂತ್ರಣ ಕೊಠಡಿಗಳಿಗೂ ಕರೆ ಮಾಡಿ ಮಳೆಯಿಂದಾದ ಸಮಸ್ಯೆಗಳ ಕರೆಯನ್ನು ರವಾನಿಸಲಾಯಿತು. ವಾರ್ಡ್ ಮಟ್ಟದಲ್ಲಾದ ಸಮಸ್ಯೆಗಳನ್ನು ಆಯಾವಲಯಗಳ ನಿಯಂತ್ರಣ ಕೊಠಡಿಗಳಿಗೆ ಕರೆ ಮಾಡಿ ತಿಳಿಸಬೇಕು. ಎಲ್ಲ ಸಮಸ್ಯೆಗಳನ್ನು ಕೇಂದ್ರ ಕಚೇರಿಗೆ ತಿಳಿಸಬಾರದು ಎಂದು ಮೇಯರ್ ಕರೆ ಮಾಡಿದವರಿಗೆ ತಿಳಿಸಿದರು.
ಮೇಯರ್ ಪರಿಶೀಲನೆ
ಶಾಂತಿನಗರದಲ್ಲಿ ಮಳೆಹಾನಿ ಪರಿಶೀಲಿಸಿದ ಮೇಯರ್ ಮಂಜುನಾಥರೆಡ್ಡಿ, 2-3 ಮೂರು ದಿನಗಳ ಕಾಲ ಮಳೆ ಮುಂದುವರಿಯಲಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಇಲ್ಲಿನ ಹಾನಿ ಪರಿಶೀಲನೆ ವೇಳೆ ಅಧಿಕಾರಿಗಳು ಹಾರಿಕೆ ಉತ್ತರ ನೀಡಿದಾಗ, `ಇಂತಹ ಸಂದರ್ಭಗಳಲ್ಲಿ ಅಧಿಕಾರಿಗಳು ಒಬ್ಬರ ಮೇಲೊಬ್ಬರು ದೂರು ಹೇಳುತ್ತಾರೆ, ಮೊದಲು ಸಮಸ್ಯೆ ಪರಿಹರಿಸಿ ನಂತರ ದೂರು ನೀಡಿ' ಎಂದು ಎಚ್ಚರಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಮಳೆ ಬಂದಾಗ ನಗರದಲ್ಲಿ ನೂರಕ್ಕೂ ಹೆಚ್ಚು ಪ್ರದೇಶಗಳಲ್ಲಿ ಹಾನಿಯಾಗುತ್ತಿತ್ತು. ಬಿಬಿಎಂಪಿ ಕೈಗೊಂಡ ಕ್ರಮಗಳಿಂದ ಈ ಪ್ರದೇಶಗಳ ಸಂಖ್ಯೆ 26ಕ್ಕೆ ಇಳಿದಿದೆ. ಹಂತಹಂತವಾಗಿ ಕ್ರಮ ಕೈಗೊಳ್ಳುತ್ತಿದ್ದು, ಹಾನಿಯಾಗುವ ಪ್ರದೇಶಗಳ ಸಂಖ್ಯೆ ಕ್ರಮೇಣವಾಗಿ ಕಡಿಮೆಯಾಗುತ್ತಿದೆ ಎಂದರು.
Advertisement