
ಬೆಂಗಳೂರು: ನಿಯಮ ಉಲ್ಲಂಘಿಸಿ ಕಾನೂನುಬಾಹಿರವಾಗಿ ಸಂಚರಿಸುತ್ತಿದ್ದ 300 ವಾಹನ ಚಾಲಕರು ಸಿಕ್ಕಿಬಿದ್ದಿದ್ದು, ಅವರಿಂದ ದಂಡ ವಸೂಲಿ ಮಾಡಲಾಗಿದೆ.
ರಾಜ್ಯ ಪ್ರಾದೇಶಿಕ ಸಾರಿಗೆ ಹಾಗೂ ಬಿಎಂಟಿಸಿ ಅಧಿಕಾರಿಗಳು ಮಂಗಳವಾರ ನಗರದ ವಿವಿಧೆಡೆ ಜಂಟಿ ಕಾರ್ಯಾಚರಣೆ ನಡೆಸಿದರು. ಈ ವೇಳೆ ಸುಮಾರು 5 ಸಾವಿರಕ್ಕೂ ಹೆಚ್ಚು ವಾಹನಗಳನ್ನು ತಪಾಸಣೆ ನಡೆಸಿದರು ಈ ವೇಳೆ ಪರ್ಮಿಟ್ ಉಲ್ಲಂಘನೆ, ದೋಷಪೂರಿತ ನಂಬರ್ ಪ್ಲೇಟ್, ತೆರಿಗೆ ಪಾವತಿ ಬಾಕಿ, ಹೊಗೆ ಪರೀಕ್ಷೆ, ಟಿಂಟೆಡ್ ಗಾಜು ಹೊಂದಿರುವುದು ಸೇರಿ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ 300 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಬೆಳಗ್ಗೆಯಿಂದಲೇ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಖಾಸಗಿ ಬಸ್‍ಗಳು, ಕಾರು, ಮಾ್ಯಕ್ಸಿಕ್ಯಾಬ್, ಸರಕು ಸಾಗಣೆ ವಾಹನಗಳು ಸೇರಿದಂತೆ ವಿವಿಧ ವಾಹನಗಳ ತಪಾಸಣೆ ನಡೆಸಿದರು. ಹೆಬ್ಬಾಳ, ಗೊರಗುಂಟೆಪಾಳ್ಯ, ನಾಯಂಡಹಳ್ಳಿ, ಟಿನ್ ಫ್ಯಾಕ್ಟರಿ, ಕೆಂಗೇರಿ, ಮೆಜೆಸ್ಟಿಕ್, ಪೀಣ್ಯ, ಎಲೆಕ್ಟ್ರಾನಿಕ್ ಸಿಟಿ, ಸಿಲ್ಕ್‍ಬೋರ್ಡ್ ಜಂಕ್ಷನ್, ಬನ್ನೇರುಘಟ್ಟ ರಸ್ತೆ, ಸುಮ್ಮನಹಳ್ಳಿ ಹಾಗೂ ಸುತ್ತಮುತ್ತಲ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಯಿತು.
ರು.10 ಲಕ್ಷ ಕಟ್ಟಿದ ಜನ್ಯ!
ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾರೆ. ಅಧಿಕಾರಿಗಳು ಅವರ ಜಾಗ್ವಾರ್ ಕಾರನ್ನು ವಶಕ್ಕೆ ಪಡೆದು ನಂತರ ದಂಡ ವಿಧಿಸಿದ್ದಾರೆ. ಕಾರು ಖರೀದಿಸಿ 6 ತಿಂಗಳಾಗಿದ್ದರೂ ನೋಂದಣಿ ಮಾಡಿಸಿರಲಿಲ್ಲ. ಸಾರಿಗೆ ಇಲಾಖೆ ಕಾಯ್ದೆ ಪ್ರಕಾರ ವಾಹನ ಖರೀದಿಸಿದ ಒಂದು ತಿಂಗಳೊಳಗೆ ನೋಂದಣಿ ಮಾಡಿಸಿ, ರಸ್ತೆ ತೆರಿಗೆ ಕಟ್ಟಬೇಕು.
ಫ್ಯಾನ್ಸಿ ನಂಬರ್ `5'ನ್ನು ವಾಹನದ ನೋಂದಣಿ ಸಂಖ್ಯೆಯಾಗಿ ಪಡೆಯಲು ಮನವಿ ನೀಡಿದ್ದರು. ಆದರೆ, ಆ ಸಂಖ್ಯೆ ಸಿಕ್ಕಿರಲಿಲ್ಲ. ಹಾಗಾಗಿ ಕಾರನ್ನು ನೋಂದಣಿ ಮಾಡಿಸಿರಲಿಲ್ಲ. ಮಂಗಳವಾರ ತಮ್ಮ ಜಾಗ್ವಾರ್ ಕಾರಿನಲ್ಲಿ ಕಂಠೀರವ ಸ್ಟುಡಿಯೋಗೆ ಹೋಗುತ್ತಿದ್ದರು. ಈ ವೇಳೆ ಗೊರಗುಂಟೆಪಾಳ್ಯದಲ್ಲಿ ಅಧಿಕಾರಿಗಳು ಜನ್ಯ ಅವರ ಕಾರನ್ನು ಹಿಡಿದಿದ್ದಾರೆ. ನಂತರ ಎಚ್ಚೆತ್ತ ಜನ್ಯ, ಕೂಡಲೇ ಡಿಡಿ ತೆಗೆದು ರಸ್ತೆ ತೆರಿಗೆ ಹಾಗೂ ದಂಡ ಸೇರಿ ರು.10.25 ಲಕ್ಷ ಪಾವತಿಸಿ ಕಾರನ್ನು ಬಿಡಿಸಿಕೊಂಡು ಹೋಗಿದ್ದಾರೆ.
Advertisement