ಸಿಲಿಂಡರ್ ಸ್ಪೋಟ; ಮೂವರ ಸಾವು

ಸೋರಿಕೆಯಾಗಿದ್ದ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ದಂಪತಿ ಹಾಗೂ ಅವರ ನಾಲ್ಕೂವರೆ ವರ್ಷದ ಪುತ್ರ ಮೃತಪಟ್ಟಿರುವ ದಾರುಣ ಘಟನೆ ಕಾಡುಗೋಡಿಯಲ್ಲಿ ನಡೆದಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಸೋರಿಕೆಯಾಗಿದ್ದ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ದಂಪತಿ ಹಾಗೂ ಅವರ ನಾಲ್ಕೂವರೆ ವರ್ಷದ ಪುತ್ರ ಮೃತಪಟ್ಟಿರುವ ದಾರುಣ ಘಟನೆ ಕಾಡುಗೋಡಿಯಲ್ಲಿ ನಡೆದಿದೆ.

ಕಾಡುಗೋಡಿ ಬೇಳ್ತೂರು ಕಾಲೋನಿಯಲ್ಲಿ ವಾಸವಿದ್ದ ಕೇರಳ ಮೂಲದ ಶಿಬು (35) ಅವರ ಪತ್ನಿ ಅಂಜು ಥಾಮಸ್ (32) ಇವರ ಪುತ್ರ ಅಲ್ವಿನ್ ಮೃತರು.

ನ.7ರ ಬೆಳಗ್ಗೆ 8 ಗಂಟೆ ಸುಮಾರಿಗೆ ಶಿಬು ಚಹಾ ಮಾಡಲು ಅಡುಗೆ ಕೋಣೆಗೆ ಹೋಗಿದ್ದು, ಪತ್ನಿ ಆತನನ್ನು ಹಿಂಬಾಲಿಸಿಕೊಂಡು ಹೋಗಿದ್ದರು. ಈ ವೇಲೆ ಮಗ ಹಾಲ್ ನಲ್ಲಿ ಆಟವಾಡುತ್ತಿದ್ದ. ಚಹಾ ಮಾಡಲು ಸ್ಟೋವ್ ಹಚ್ಚುತ್ತಿದ್ದಂತೆ ಸೋರಿಕೆಯಾಗಿದ್ದ ಗ್ಯಾಸ್ ಸ್ಪೋಟಗೊಂಡಿದೆ. ಗಂಭೀರವಾಗಿ ಗಾಯಗೊಂಡಿದ್ದ ಮೂವರನ್ನೂ ವಿಕ್ಟೋರಿಯಾ ಆಸ್ಪತ್ರೆ ಸುಟ್ಟ ಗಾಯಗಳ ವಿಭಾಗಕ್ಕೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ, ನ.9ರಂದು ಶಿಬು ಮೃತಪಟ್ಟಿದ್ದರು. ನ.11 ರಂದು ಪತ್ನಿ ಅಂಜು ಮೃತ ಪಟ್ಟಿದ್ದರು. ತೀವ್ರ ನಿಗಾ ಘಟಕದಲ್ಲಿದ್ದ ಬಾಲಕ ಅಲ್ವಿನ್ ಕೂಡ ಗುರುವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾನೆ ಎಂದು ಕಾಡುಗೋಡಿ ಪೊಲೀಸರು ಹೇಳಿದ್ದಾರೆ.

ಮನೆಯಲ್ಲಿದ್ದ ಇಲಿಗಳು ಕೆಲ ದಿನಗಳ ಹಿಂದೆ ಗ್ಯಾಸ್ ಪೈಪ್ ಕಚ್ಚಿದ್ದವು. ಅದನ್ನು ಬದಲಿಸಿ ಹೊಸ ಪೈಪ್ ಹಾಕಿಸುವ ಬದಲು ಶಿಬು, ಇಲಿ ಕಚ್ಚಿದ್ದ ಭಾಗವನ್ನು ಕಟ್ ಮಾಡಿ ಹಾಗೆಯೇ ಸ್ಟೋವ್‍ಗೆ ಪೈಪ್ ಸಂಪರ್ಕ ನೀಡಿದ್ದರು. ಆದರೆ, ಸ್ಟೋವ್‍ಗೆ ಸರಿಯಾಗಿ ಕುಳಿತುಕೊಳ್ಳದ ಪೈಪ್ ನಿಂದ ಗ್ಯಾಸ್ ಸೋರಿಕೆಯಾಗಿತ್ತು. ಗ್ಯಾಸ್ ವಾಸನೆ ಗ್ರಹಿಸಲು ವಿಫಲವಾದ ಶಿಬು ಸ್ಟೋವ್ ಹಚ್ಚಿದ್ದೆ ದುರಂತಕ್ಕೆ ಕಾರಣವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಐದೂವರೆ ವರ್ಷಗಳ ಹಿಂದೆ ಶಿಬು ಹಾಗೂ ಅಂಜು ವಿವಾಹವಾಗಿದ್ದು ಉಪಜೀವನಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಶಿಬು ವೆಲ್ಡಿಂಗ್ ಕೆಲಸ ಮಾಡುತ್ತಿದ್ದು, ಅಂಜು ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಈ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com