
ಬೆಂಗಳೂರು: ಪ್ರಸಕ್ತ ವರ್ಷ ಗುಂಡಿ ಮುಚ್ಚುವುದು ಸೇರಿದಂತೆ ರಸ್ತೆ ನಿರ್ವಹಣೆಗೆ ರು.20.43 ಕೋಟಿ ಖರ್ಚು ಮಾಡಿದ್ದು, ಇನ್ನು 2 ವಾರಗಳಲ್ಲಿ ಎಲ್ಲ ಗುಂಡಿ ಮುಚ್ಚಲು ಸಜ್ಜಾಗಿದೆ. ಈ ಸಾಲಿನಲ್ಲಿ ರಸ್ತೆ ನಿರ್ವಹಣೆಗೆ ರು.20.43 ಕೋಟಿ ವೆಚ್ಚವಾಗಿದೆ.
ರಸ್ತೆ ನಿರ್ವಹಣೆಗೆ ಪ್ರತಿ ವಾರ್ಡ್‍ಗೆ ರು.1 ಲಕ್ಷ, ಪೈಥಾನ್ ಯಂತ್ರ ಸೇರಿದಂತೆ ಇತರೆ ಖರ್ಚುಗಳಿಗೆ ರು.2.4 ಕೋಟಿ, ರು.1.56 ಕೋಟಿ ಆನ್‍ಲೈನ್ ಪಾವತಿ, ಮುಖ್ಯರಸ್ತೆಗಳ ನಿರ್ವಹಣೆಗೆ ರು.1.56 ಕೋಟಿ ವೆಚ್ಚ ಮಾಡಲಾಗಿದೆ. ಇನ್ನೂ ರು.3.96 ಕೋಟಿ ರಸ್ತೆ ಕಾಮಗಾರಿಗೆ ಬಿಡುಗಡೆಯಾಗಬೇಕಿದೆ. ಮಳೆ ಬಂದಿದ್ದರಿಂದ ಗುಂಡಿ ಮುಚ್ಚುವ ಕಾಮಗಾರಿ ತಡವಾಗಿದೆ. ಆದರೆ ಇನ್ನೂ ಎರಡು ವಾರಗಳಲ್ಲಿ ಎಲ್ಲ ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿ ಪೂರ್ಣಗೊಳ್ಳಲಿದೆ. ಈಗಾಗಲೇ 40ಕ್ಕೂ ಅಧಿಕ ರಸ್ತೆಗಳಲ್ಲಿ ಕಾಮಗಾರಿ ಮಾಡುತ್ತಿದ್ದು, ಕ್ರಿಯಾ ಯೋಜನೆಯೊಂದನ್ನು ಸಿದ್ಧಪಡಿಸಲಾಗಿದೆ. ನಿತ್ಯ ಯಾವ ರಸ್ತೆಗಳಲ್ಲಿ ಗುಂಡಿ ಮುಚ್ಚಬೇಕು ಎಂದು ಪಟ್ಟಿ ತಯಾರಿಸಲಾಗುತ್ತಿದೆ.
ಸುದ್ದಿಗೋಷ್ಠಿಯಲ್ಲಿ ಶನಿವಾರ ಈ ವಿಷಯ ತಿಳಿಸಿದ ಬಿಬಿಎಂಪಿ ಆಯುಕ್ತ ಕುಮಾರ್ ನಾಯಕ್ ಅವರು, ಅಂದಾಜು 1 ಸಾವಿರ ಕಿ.ಮೀ. ಉದ್ದ ರಸ್ತೆಗಳ ದುರಸ್ತಿ ಕಾರ್ಯವನ್ನು ಬಿಬಿಎಂಪಿ ಮಾಡಲಿದೆ. 8 ವಲಯಗಳ ಜಂಟಿ ಆಯುಕ್ತರು ಗುಂಡಿಗಳನ್ನು ಪತ್ತೆ ಹಚ್ಚಿದ್ದು, ಮುಚ್ಚಲು ರು.10.64 ಕೋಟಿ ವೆಚ್ಚವಾಗುತ್ತದೆ ಎಂದು ಅಂದಾಜಿಸಿದ್ದಾರೆ. ಪೂರ್ವ ವಲಯದ ರಸ್ತೆಗಳಲ್ಲಿ ಹೆಚ್ಚಿನ ಗುಂಡಿ ಕಾಣಿಸಿಕೊಂಡಿದ್ದು, ಅವುಗಳನ್ನು ಮುಚ್ಚಲು ರು.4.74 ಕೋಟಿ ಖರ್ಚಾಗಲಿದೆ.
ಗುತ್ತಿಗೆದಾರರ ಅವಧಿ ಪೂರ್ಣಗೊಳ್ಳದ ಒಟ್ಟು 375 ಕಿ.ಮೀ ಉದ್ದದ ರಸ್ತೆಗಳ ಗುಂಡಿಗಳನ್ನು ಗುತ್ತಿಗೆದಾರರಿಂದಲೇ ಮುಚ್ಚಿಸಲಾಗುತ್ತಿದೆ. 350 ಕಿ.ಮೀ ಉದ್ದದ ರಸ್ತೆಗಳ ದುರಸ್ತಿಗೆ ಗುತ್ತಿಗೆ
ಕರೆಯಲಾಗುವುದು. ನಗರೋತ್ಥಾನದಡಿಯ ರು.417 ಕೋಟಿಯನ್ನು 725 ಕಿ.ಮೀ ಉದ್ದದ ರಸ್ತೆ ದುರಸ್ತಿಗೆ ವೆಚ್ಚ ಮಾಡಲಾಗುವುದು ಎಂದರು.
ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿ ರು.600 ಕೋಟಿ ಖರ್ಚು ಮಾಡಿದೆ ಎಂದು ಆರೋಪಿಸಲಾಗಿದೆ. ಈ ವರ್ಷ ಕೇವಲ ರು.20.43 ಕೋಟಿಯನ್ನು ಗುಂಡಿ ಮುಚ್ಚಲು ಬಳಸಲಾಗಿದೆ. ಪ್ರಸಕ್ತ ವರ್ಷದ ಹಾಗೂ ಹಿಂದಿನ ವರ್ಷದ ರು.979 ಕೋಟಿ ಮೊತ್ತದ 4,024 ಕಾಮಗಾರಿಗಳ ಬಿಲ್ ನೀಡಲು ಬಾಕಿಯಿತ್ತು. ಇದರಲ್ಲಿ 3,066 ಕಾಮಗಾರಿಗಳ ರು.539 ಕೋಟಿ ಪಾವತಿಸಲಾಗಿದೆ. ರು.68 ಕೋಟಿ ರಸ್ತೆ ನಿರ್ವಹಣೆಗೆ ಸಂಬಂಧಿಸಿದ್ದಾಗಿದೆ ಎಂದರು.
Advertisement