
ಬೆಂಗಳೂರು: ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನಲೆಯಲ್ಲಿ ಬಿಬಿಎಂಪಿ ಕೌನ್ಸಿಲ್ ಸಭೆಯನ್ನು ಮುಂದೂಡಲಾಯಿತು.
ಸೋಮವಾರ ನಡೆದ ಸಭೆಯಲ್ಲಿ ಇತ್ತೀಚಿಗೆ ನಿಧನರಾದ ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಲ್ಲಿ, ಶಾಸಕ ಜಗದೀಶ್ ಕುಮಾರ್, ಹಿರಿಯ ಐಎಎಸ್ ಅಧಿಕಾರಿ ಸತ್ಯಮೂರ್ತಿ ಅವರಿಗೆ ಸಂತಾಪ ಸೂಚಿಸಲಾಯಿತು. ಬಳಿಕ ಸಭೆ ಮುಂದೂಡಿರುವು ದಾಗಿ ಮೇಯರ್ ಬಿ.ಎನ್. ಮಂಜುನಾಥ ರೆಡ್ಡಿ ತಿಳಿಸಿದರು.
ಮೊದಲಿಗೆ ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಸತ್ಯನಾರಾಯಣ ಅವರು ಗುರುಪಾದಪ್ಪ ನಾಗಮಾರಪಲ್ಲಿ, ಜಗದೀಶ್ ಕುಮಾರ್ ಹಾಗೂ ಸತ್ಯಮೂರ್ತಿ ಅವರ ಆಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇವರ ನಿಧನದಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ. ಕುಟುಂಬದವರಿಗೆ ಅವರ ಸಾವಿನ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು. ಬಳಿಕ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಸತ್ಯನಾರಾಯಣ, ಶಾಸಕ ರವಿ ಸುಬ್ರಹ್ಮಣ್ಯ ಸೇರಿದಂತೆ ಅನೇಕರು ಸಂತಾಪ ಸೂಚಿಸಿದರು.
ಗದ್ದಲಕ್ಕೆ ಕಾರಣವಾದ ಟಿಪ್ಪು: ಸಭೆಯಲ್ಲಿ ಮೇಯರ್ ತಮ್ಮ ಸ್ಥಾನದಲ್ಲಿ ಕೂರುತ್ತಿದ್ದಂತೆ, ಕಾಂಗ್ರೆಸ್‍ನ ಸಂಪತ್ ರಾಜ್ ಅವರು ಟಿಪ್ಪು ಜಯಂತಿ ಆಚರಿಸಿದ್ದಕ್ಕೆ ಮುಖ್ಯಮಂತ್ರಿಗಳು ಹಾಗೂ ಮೇಯರ್‍ಗೆ ಅಭಿನಂದನೆ ಸಲ್ಲಿಸಿದರು. ಈ ವೇಳೆ ಬಿಜೆಪಿಯ ಅನೇಕ ಸದಸ್ಯರು `ಸಭೆ ಆರಂಭದಲ್ಲೇ ಈ ರೀತಿ ವಿವಾದ ಸೃಷ್ಟಿಸುವುದು ಸರಿಯಲ್ಲ' ಎಂದು ಖಂಡಿಸಿದರು. ಸಭೆಗೆ ಗೌರವ ಕೊಡದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಸಂಪತ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು. ಸಭೆ ಆರಂಭದಲ್ಲೇ ಗದ್ದಲ ಉಂಟಾಯಿತು. ಮಧ್ಯ ಪ್ರವೇಶಿಸಿದ ಮೇಯರ್ ಪರಿಸ್ಥಿತಿ ತಿಳಿಗೊಳಿಸಿದರು.
Advertisement