ಮದ್ಯದ ಅಮಲಿನಲ್ಲಿ ಪೊಲೀಸರ ಕಚ್ಚಿದ ಕುಡುಕರು

ಓರ್ವ ಯುವತಿ ಸೇರಿದಂತೆ ಮೂವರು ಮದ್ಯದ ಅಮಲಿನಲ್ಲಿ ರಾತ್ರಿ ಪಾಳಿಯಲ್ಲಿದ್ದ ಪೊಲೀಸ್ ಸಿಬ್ಬಂದಿಯನ್ನು ಕಚ್ಚಿ ಹಲ್ಲೆ ಮಾಡಿದ್ದಾರೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಓರ್ವ ಯುವತಿ ಸೇರಿದಂತೆ ಮೂವರು ಮದ್ಯದ ಅಮಲಿನಲ್ಲಿ ರಾತ್ರಿ ಪಾಳಿಯಲ್ಲಿದ್ದ ಪೊಲೀಸ್ ಸಿಬ್ಬಂದಿಯನ್ನು ಕಚ್ಚಿ ಹಲ್ಲೆ ಮಾಡಿದ್ದಾರೆ. ಹಲಸೂರಿನ ಜೋಗುಪಾಳ್ಯದ ನಾಲಾ ರಸ್ತೆಯಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಈ ಸಂಬಂಧ ಓರ್ವನನ್ನು ಪೊಲೀಸರು ಬಂಧಿಸಿದ್ದು, ಯುವತಿ ಹಾಗೂ ಮತ್ತೊಬ್ಬ ಯುವಕ ಪರಾರಿಯಾಗಿದ್ದಾರೆ. ತಮಿಳು ನಾಡು ಮೂಲದ ಅಪ್ರೊಜ್ ಅಲಿ (35)
ಬಂಧಿತ. ತನ್ವೀರ್ ಹಾಗೂ ರುಚಿಕಾ ಲಾಲ್ ತಲೆಮರೆಸಿಕೊಂಡಿದ್ದಾರೆ. ಆರೋಪಿಗಳು ಹಲಸೂರು ಠಾಣೆಯ ಪೊಲೀಸ್ ಪೇದೆ ಆನಂದ್ ಅವರ ಎಡಗೈಗೆ ಹಾಗೂ ಮುಖ್ಯಪೇದೆ ನಿಜಗುಣ ಪ್ರಸಾದ್ ಅವರ ಬಲಗೈಗೆ ಕಚ್ಚಿ, ಹಲ್ಲೆ ಮಾಡಿದ್ದಾರೆ.

ಜಗಳ ನಡೆಯುತ್ತಿದ್ದ ಕಾರಣ ಸ್ಥಳೀಯರ ದೂರಿನ ಮೇರೆಗೆ ಸ್ಥಳಕ್ಕೆ ಹೋದ ಪೊಲೀಸರನ್ನೂ  ಮೂವರೂ ನಿಂದಿಸಿ, ಇಲಾಖೆ ಬಗ್ಗೆ ನಿಕೃಷ್ಟವಾಗಿ ಮಾತನಾಡಿದ್ದಾರೆ. ನಂತರ ಸಮಾಧಾನಪಡಿಸಲು ಮುಂದಾದ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಆಗ ಆನಂದ್ ತಮ್ಮ ಮೊಬೈಲ್‍ನಿಂದ ಹಲ್ಲೆ ಮಾಡುತ್ತಿದ್ದ ಘಟನೆಯನ್ನು ಚಿತ್ರೀಕರಣ ಮಾಡಲು ಮುಂದಾದಾಗ ಆರೋಪಿಗಳು ಇಬ್ಬರ ಮೇಲೂ  ಇಬ್ಬರ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾತ್ರಿ ಸುಮಾರು 10.45ರ ವೇಳೆಗೆ ಡಸ್ಟರ್ ಕಾರಿನಲ್ಲಿ ಬಂದ ಮೂವರು ನಿರಂತರವಾಗಿ ಜಗಳ ಮಾಡುತ್ತಿದ್ದರು. ಇದರಿಂದ ಸುತ್ತಮುತ್ತಲಿನವರಿಗೆ ತೊಂದರೆಯಾಗುತ್ತಿತ್ತು. ಠಾಣೆಗೆ ಮಾಹಿತಿ ನೀಡಿದೆವು. ಸ್ಥಳಕ್ಕೆ ಬಂದ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಲ್ಲದೆ ಅವರ ಮೇಲೆ ಕಲ್ಲು ಎತ್ತಿ ಹಾಕಲು ಮುಂದಾದರು.
 ಶ್ರೀನಿವಾಸ್ ನಾಯ್ಡು ಸ್ಥಳೀಯರು


ನೆರೆಹೊರೆಯವರಿಗೆ ತೊಂದರೆ
ದೆಹಲಿ ಮೂಲದ ರುಚಿಕಾ ಲಾಲ್ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ಜೋಗುಪಾಳ್ಯದಲ್ಲಿ ವಾಸಿಸುತ್ತಿದ್ದಳು. ಕಾಕ್ಸ್‍ಟೌನ್ ನಲ್ಲಿ  ವಾಸಿಸುತ್ತಿದ್ದ ತನ್ವೀರ್ ಸಹ ಆಕೆಯ ಕಂಪನಿಯಲ್ಲೇ ಕೆಲಸ ಮಾಡುತ್ತಿದ್ದ. ಅಪ್ರೋಜ್ ಆಲಿ ತಮಿಳು ನಾಡಿನಲ್ಲಿ ಸ್ವಂತ ಉದ್ಯೋಗ ನಡೆಸುತ್ತಿದ್ದ. ರುಚಿಕಾ ಲಾಲ್ ಹಾಗೂ ಅಪ್ರೋಜ್ ಪರಸ್ಪರ ಪ್ರೀತಿಸುತ್ತಿದ್ದರು. ಆತ ಆಗಾಗ  ರುಚಿಕಾ ಮನೆಗೆ ಬಂದು ಹೋಗುತ್ತಿದ್ದ. ಮಂಗಳವಾರ ರಾತ್ರಿ ತಮಿಳುನಾಡಿನಿಂದ ಅಪ್ರೋಜ್ ಆಗಮಿಸಿದ್ದು, ತನ್ವೀರ್ ಜೊತೆ ಮೂವರು ಮಧ್ಯ ಸೇವಿಸಿದ್ದಾರೆ. ನಂತರ ಮೂವರ ನಡುವೆ ಜಗಳ ಆರಂಭವಾಗಿದೆ. ತಡ ರಾತ್ರಿಯಾದರೂ ಗಲಾಟೆ ನಿಲ್ಲಿಸಿರಲಿಲ್ಲ. ಜಗಳದಿಂದ ಬೇಸತ್ತ ಶ್ರೀನಿವಾಸ ನಾಯ್ಡು ಹಲಸೂರು ಪೊಲೀಸರಿಗೆ ವಿಷಯ ತಿಳಿಸಿದರು. ರಾತ್ರಿ ಪಾಳಿಯಲ್ಲಿದ್ದ ಇಬ್ಬರು  ಸಿಬ್ಬಂದಿ ಚೀತಾ ವಾಹನದಲ್ಲಿ ಸ್ಥಳಕ್ಕೆ ಧಾವಿಸಿದ್ದಾರೆ. ಗಲಾಟೆ ನಿಲ್ಲಿಸಲೆಂದು ಮೂವರನ್ನು ಸಮಾಧಾನಪಡಿಸಲು ಮುಂದಾದಾಗ ಕೋಪಗೊಂಡ ಅವರು ಪೊಲೀಸರ ಕೈಗೆ ಕಚ್ಚಿದ್ದಾರೆ. ಸುದ್ದಿ ತಿಳಿದ ಇನ್ಸ್ ಪೆಕ್ಟರ್ ಎಂ.ಎಚ್. ನಾಗ್ತೆ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸುವಷ್ಟರಲ್ಲಿ ತನ್ವೀರ್ ಅಲ್ಲಿಂದ ಪರಾರಿಯಾಗಿದ್ದ. ಅಪ್ರೋಜ್ ನನ್ನು ಬಂಧಿಸಿದ ಪೊಲೀಸರು, ಮಹಿಳಾ ಸಿಬ್ಬಂದಿ ಇಲ್ಲವಾದ್ದರಿಂದ ರುಚಿಕಾಳನ್ನು ಮನೆಯಲ್ಲೇ ಬಿಟ್ಟು ಬಂದಿದ್ದರು. ಬೆಳಗ್ಗೆ ಬಂಧಿಸಲು ಮನೆ ಬಳಿ ಹೋದಾಗ ಆಕೆಯೂ ಪರಾರಿಯಾಗಿದ್ದಳು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com