
ಕೆ ಆರ್ ಪುರ : ಸೊಳ್ಳೆ ಕಾಟದಿಂದ ತಪ್ಪಿಸಲು ಹಚ್ಚಿದ್ದ ಬತ್ತಿಯೇ ಈತನ ಜೀವವನ್ನೇ ಬಲಿ ಪಡೆದಿದೆ. ಹಾಗೆಂದು ಈತ ಸೊಳ್ಳೆ ಬತ್ತಿಯ ಹೊಗೆಯಿಂದ ಮೃತಪಟ್ಟಿಲ್ಲ. ಬದಲಾಗಿ, ಸೊಳ್ಳೆ ಬತ್ತಿಗೆ ಹಚ್ಚಿದ್ದ ಬೆಂಕಿ, ಹಾಸಿಗೆಗೆ ತಗುಲಿ, ಅದರಿಂದ ಉಂಟಾದ ಹೊಗೆಯನ್ನು ಕುಡಿದು ಈತ ಅಸುನೀಗಿದ್ದಾನೆ.
ಈ ಘಟನೆ ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ. ಕುವೆಂಪುನಗರ ನಿವಾಸಿ ಮಾಧವನ್ (55) ಮೃತಪಟ್ಟವರು. ಮೂಲತಃ ತಮಿಳುನಾಡಿನವರಾಗಿರುವ ಇವರು ಕೆಲ ವರ್ಷಗಳಿಂದ ಮೂವರು ಮಕ್ಕಳೊಂದಿಗೆ ಕುವೆಂಪುನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಮಂಗಳವಾರ ಬೆಳಗ್ಗೆ ಇಬ್ಬರು ಮಕ್ಕಳು ಅಕ್ಕನ ಮನೆಗೆ ಹೋಗಿದ್ದರು. ಮತ್ತೊಬ್ಬ ಮಗ ಕೆಲಸ ನಿಮಿತ್ತ ಹೊರ ಹೋಗಿದ್ದ. ಈ ವೇಳೆ ಮನೆಯಲ್ಲಿ ಏಕಾಂಗಿಯಾಗಿದ್ದ ಮಾಧವನ್ ಅವರು ರಾತ್ರಿ ಊಟ ಮಾಡಿದ ಬಳಿಕ ಹಾಸಿಗೆ ಪಕ್ಕದಲ್ಲೇ ಸೊಳ್ಳೆ ಬತ್ತಿ ಹಚ್ಚಿಟ್ಟು ನಿದ್ದೆಗೆ ಜಾರಿದ್ದರು.
ಮಧ್ಯರಾತ್ರಿ ಸುಮಾರು 12 ಗಂಟೆ ವೇಳೆಗೆ ಸೊಳ್ಳೆಬತ್ತಿಯ ಬೆಂಕಿ ಆಕಸ್ಮಿಕವಾಗಿ ಹಾಸಿಗೆಗೆ ತಾಗಿ ಮನೆ ತುಂಬಾ ದಟ್ಟ ಹೊಗೆ ಆವರಿಸಿದೆ. ಇದರಿಂದ ಉಸಿರಾಟದ ಸಮಸ್ಯೆಗೆ ಸಿಲುಕಿದ ಮಾಧವನ್ ನಿದ್ರೆಯಿಂದ ಎಚ್ಚರಗೊಂಡಿದ್ದಾರೆ. ಈ ವೇಳೆಗಾಗಲೇ ಮನೆಯ ಒಳ ಭಾಗದ ವಸ್ತುಗಳು ಬೆಂಕಿಗೆ ತುತ್ತಾಗಿ ಹೊತ್ತಿ ಉರಿಯಲು ಆರಂಭಿಸಿವೆ. ಬೆಂಕಿಯ ತೀವ್ರತೆ ಹೆಚ್ಚಾಗುತ್ತಿದ್ದಂತೆ ಮಾಧವನ್ ಸಹಾಯಕ್ಕೆ ಕಿರುಚಾಡಿ ಹೊರ ಬರಲು ಪ್ರಯತ್ನಿಸಿದ್ದಾರೆ. ಆದರೆ ಹೊಗೆಯಿಂದ ಹೊರಬರಲಾರದೇ ಕೆನ್ನಾಲಿಗೆಗೆ ಸಿಲುಕಿದ್ದಾರೆ.
ಮಾಧವನ್ ಚೀರಾಟ ಕೇಳಿ ಹೊರಬಂದ ಅಕ್ಕಪಕ್ಕದ ಮನೆಯವರು ಧಗ ಧಗ ಉರಿಯುತ್ತಿದ್ದ ಬೆಂಕಿ ಕಂಡು ಹೌಹಾರಿದ್ದಾರೆ. ಅಲ್ಲದೇ ತಕ್ಷಣ ಅಗ್ನಿ ಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ಬರುವತನಕ ಸ್ಥಳೀಯರೇ ಬೆಂಕಿ ನಂದಿಸಲು ಪ್ರಯತ್ನ ಪಟ್ಟಿದ್ದಾರೆ. ಆದರೆ, ಅದು ವಿಫಲವಾಗಿದೆ. ನತಂರ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಈ ವೇಳೆಗೆ ಮಾಧವನ್ ಸುಟ್ಟಗಾಯಗಳಿಂದ ಕೊನೆಯುಸಿರೆಳೆದಿದ್ದರು. ಬೆಂಕಿ ಅವಘಡದಿಂದ ಮನೆಗೆ ದೊಡ್ಡ ಪ್ರಮಾಣದ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement