ಪೇದೆ ಟ್ರಾಫಿಕ್ ಎಸ್ ಐ ಅಮಾನತು
ಬೆಂಗಳೂರು: ಪ್ರತ್ಯೇಕ ಪ್ರಕರಣಗಳಲ್ಲಿ ಕರ್ತವ್ಯ ಲೋಪ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಚಿಕ್ಕಪೇಟೆ ಠಾಣೆ ಪೊಲೀಸ್ ಪೇದೆ ಮತ್ತು ವಿಜಯನಗರದ ಸಂಚಾರ ಠಾಣೆ ಸಬ್ ಇನ್ಸ್ ಪೆಕ್ಟರ್ ಅಮಾನತುಗೊಂಡಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಅಂಗಡಿ ಮಾಲೀಕನ ಮೇಲೆ ಹಲ್ಲೆ ಮಾಡಿದ ಚಿಕ್ಕಪೇಟೆ ಪೊಲೀಸ್ ಠಾಣೆಯ ಪೇದೆ ಮಹಂತೇಶ್ ಹಾಗೂ ಲಂಚ ಪಡೆದ ವಿಜಯನಗರ ಸಂಚಾರ ಠಾಣೆಯ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ನಾರಾಯಣ ಗೌಡ ಅಮಾನತುಗೊಂಡವರು.
ಪೊಲೀಸ್ ಪೇದೆ ಮಹಂತೇಶ್ ಹಿರೇಮಠ್ ಚಿಕ್ಕಪೇಟೆ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕಳೆದ ಶುಕ್ರವಾರ ಅಂಗಡಿ ಮಾಲೀಕರೊಬ್ಬರ ಮೇಲೆ ಹಲ್ಲೆ ಮಾಡಿದ್ದರು. ಈ ಸಂಬಂಧ ಅಂಗಡಿ ಮಾಲೀಕರು ಚಿಕ್ಕಪೇಟೆ ಠಾಣೆಯಲ್ಲಿ ದೂರು ನೀಡಿದ್ದರು.ಘಟನೆ ಪರಿಶೀಲನೆ ನಡೆಸಿದಾಗ ಪೇದೆ ತಪ್ಪು ಮಾಡಿರುವುದು ಸ್ಪಷ್ಟವಾಗಿತ್ತು.
ಪ್ರಕರಣ ಸಂಬಂಧ ಇಲಾಖಾ ವಿಚಾರಣೆ ನಡೆಸಿದ ಡಿಸಿಪಿ ಲಾಬೂರಾಮ್ ಅವರು ಪೇದೆಯನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಂಚದ ಆರೋಪ
ವಿಜಯನಗರ ಸಂಚಾರ ಠಾಣೆಯ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ನಾರಾಯಣ ಗೌಡ ಅವರನ್ನು ಅಮಾನತುಗೊಳಿಸಿ ಪಶ್ಚಿಮ ವಿಭಾಗದ (ಸಂಚಾರ) ಡಿಸಿಪಿ ಗಿರೀಶ್ ಆದೇಶಿಸಿದ್ದಾರೆ.
ನಾರಾಯಣ ಗೌಡ ಅವರು ವ್ಯಕ್ತಿಯೊಬ್ಬರಿಂದ ಲಂಚ ಕೇಳಿದ್ದಾಗ ಅದನ್ನು ಕೊಡಲು ಅವರು ನಿರಾಕರಿಸಿದ್ದರು. ಈ ವಿಚಾರವಾಗಿ ಪೊಲೀಸ್ ಸಿಬ್ಬಂದಿ ಧಮಕಿ ಹಾಕಿ ಹಣ ನೀಡುವಂತೆ ಸೂಚಿಸಿದ್ದರು. ಬಳಿಕ ಹಣ ಕೊಡುವ ನೆಪದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಪಿಎಸ್‌ಐ ಲಂಚ ಪಡೆಯುತ್ತಿರುವುದು ಸೆರೆ ಸಿಕ್ಕಿದೆ. ಈ ಸಂಬಂಧ ಇಲಾಖಾ ವಿಚಾರಣೆ ನಡೆಸಿದ ಡಿಸಿಪಿ ಗಿರೀಶ್ ಅಮಾನತು ಆದೇಶ ಹೊರಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ