ಸಾಮಾಜಿಕ ನ್ಯಾಯಕ್ಕಾಗಿ ಬಿಎಸ್ಆರ್ ಕಾಂಗ್ರೆಸ್ ಬದ್ಧ: ಶಂಕರ್
ಕ.ಪ್ರ. ವಾರ್ತೆ ಆನೇಕಲ್ಲು ಏ.2
ಸಮಾಜದ ಎಲ್ಲ ವರ್ಗದ ಜನರ ದನಿಯಾಗಿ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ಬಿಎಸ್ ಆರ್ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಕೆಂದು ಎಸ್ಸಿ, ಎಸ್ಟಿ ವಿಭಾಗದ ರಾಜ್ಯಾಧ್ಯಕ್ಷ ಜಿಗಣಿ ಶಂಕರ್ ಮನವಿ ಮಾಡಿದ್ದಾರೆ.
ಅವರು ತಾಲೂಕಿನ ಅತ್ತಿಬೆಲೆಯಲ್ಲಿ ನೂತನ ಪಕ್ಷದ ಕಚೇರಿಯ ಉದ್ಘಾಟನೆ ಹಾಗೂ ವಿವಿಧ ಪಕ್ಷಗಳಿಂದ ಮುಖಂಡರ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ ಹಿಂದುಳಿದ ವರ್ಗದವರು ರಾಜಕಾರಣದ ಮುಖ್ಯ ವಾಹಿನಿಗೆ ಬರಲು, ಶೋಷಿತ ಸಮುದಾಯದ ಜನರಿಗೆ ಬೆನ್ನೆಲುಬಾಗಿ ನಿಲ್ಲಲು ಬಿಎಸ್ಆರ್ ಕಾಂಗ್ರೆಸ್ ಕಟಿ ಬದ್ಧವಾಗಿದೆ. ರಾಜ್ಯಾದ್ಯಂತ ಪ್ರವಾಸದಲ್ಲಿ ಎಲ್ಲ ವರ್ಗದ ಜನರು ಅಪಾರ ಒಲವು ಹಾಗೂ ಬೆಂಬಲ ವ್ಯಕ್ತ ಪಡಿಸಿದ್ದಾರೆ. ವಂಶ ಪಾರಂಪರ್ಯ ಆಡಳಿತ ಇಲ್ಲದ, ದೆಹಲಿ ನಿರ್ಧಾರಕ್ಕೆ ವಾಲಬೇಕಾದ ಪ್ರಸಂಗ ಇಲ್ಲದ ನೇರವಾಗಿ ರಾಜ್ಯದಲ್ಲೇ ಪರಿಹಾರ ಕಂಡುಕೊಳ್ಳಬಹುದಾದಂತಹ ಪಕ್ಷಕ್ಕೆ ಆಶೀರ್ವಾದ ಮಾಡಬೇಕೆಂದು ಕೋರಿದರು.
ಜಾತಿ, ಮತ, ಪಂಗಡ ಧರ್ಮ ರಾಜಕಾರಣ ಇಲ್ಲದ ಸ್ವಾಭಿಮಾನಿ ಪಕ್ಷದ ಸದಸ್ಯರಾಗಿ ಜನ ಸಾಮಾನ್ಯರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಮನೋಭಾವ ರೂಡಿಸಿಕೊಳ್ಳಬೇಕೆಂದ ಅವರು ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸಿದೆ. ಬಿಎಸ್ಆರ್ ಲಾಂಛನವೂ ಗಾಳಿ ಬೀಸುವ ಫ್ಯಾನ್ ಆಗಿದೆ. ರಾಜ್ಯಾದ್ಯಂತ ಯುವ ಶಕ್ತಿಯು ಶ್ರೀರಾಮುಲು ಅವರ ಫ್ಯಾನ್ ಆಗಿದ್ದಾರೆ. ಷಡ್ಯಂತರದಿಂದ ಜನಾರ್ದನ ರೆಡ್ಡಿ ಅವರನ್ನು ಜೈಲಿನಲ್ಲಿಡಲಾಗಿದೆ ಎಂದರು.
ಸತ್ಯಕ್ಕಾಗಿ ಕಾಯಬೇಕು: ಆನೇಕಲ್ ಕ್ಷೇತ್ರವನ್ನು ಪ್ರತಿನಿಧಿಸುವ ನಾರಾಯಣಸ್ವಾಮಿ ಅವರು ಕ್ಷೇತ್ರದ ಅಭಿವೃದ್ಧಿಯಲ್ಲಿ ಶೂನ್ಯ ಸಂಪಾದನೆ ಮಾಡಿದ್ದು ಜನತೆ ನವ ನಾಯಕನನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಕಾಂಗ್ರೆಸ್, ಜೆಡಿಎಸ್ ಅಬ್ಯರ್ಥಿ ಘೋಷಿಸಲು ಮೀನ ಮೇಷ ಎಣಿಸುತ್ತಿದೆ. ಕೆಜೆಪಿ ಇದೇ ಹಾದಿ ಹಿಡಿದಿದೆ ಎಂದರು.
ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀನಿವಾಸ್ ಅವರು ತಾಲೂಕು ಬಿಎಸ್ಆರ್ ಅಧ್ಯಕ್ಷ ಶ್ರೀನಿವಾಸರೆಡ್ಡಿ ಅವರಿಗೆ ನೇಮಕಾತಿ ಪತ್ರವನ್ನು ನೀಡಿದರು. ಸೋಮು, ಮಂಜುನಾಥ, ಶಿವಕುಮಾರ್, ಮಧು, ಮಂಜುನಾಥ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಸೇರ್ಪಡೆಯಾದರು. ವೇಮನ ಟ್ರಸ್ಟ್ ಅಧ್ಯಕ್ಷ ರಾಮರೆಡ್ಡಿ, ಹರೀಶ್, ಮುನಿರಾಜು, ಕೃಷ್ಣಪ್ಪ ವೇದಿಕೆಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

