ಯೋಗೇಶ್ವರ್ಗೆ ಟಿಕೆಟ್ ಕೊಡಿಸಲು ನಗರಸಭಾ ಸದಸ್ಯರು ಅಖಾಡಕ್ಕೆ
ಚನ್ನಪಟ್ಟಣ: ಯೋಗೇಶ್ವರ್ಗೆ ಟಿಕೆಟ್ ಕೊಡಿಸಲು ನಗರಸಭಾ ಸದಸ್ಯರು ಅಖಾಡಕ್ಕಿಳಿದಿದ್ದು, ಹೈಕಮಾಂಡ್ ಮೇಲೆ ಒತ್ತಡ ತರುವ ತಂತ್ರಕ್ಕೆ ಮುಂದಾಗಿದ್ದಾರೆ.
ಯೋಗೇಶ್ವರ್ ನಿವಾಸದಲ್ಲಿ ಸುದ್ದಿ ಗೋಷ್ಠಿ ನಡೆಸಿದ ಕಾಂಗ್ರೆಸ್ನ 11 ನಗರಸಭಾ ಸದಸ್ಯರು, ಕಾಂಗ್ರೆಸ್ ಪಕ್ಷದ ಮಾತನ್ನು ನಂಬಿ ಎಲ್ಲವನ್ನೂ ತ್ಯಾಗ ಮಾಡಿ ಬಂದ ಯೋಗೇಶ್ವರ್ಗೆ ಟಿಕೆಟ್ ಕೊಡದಿದ್ದರೆ ಪಕ್ಷ ತೊರೆಯುವುದಾಗಿ ಪ್ರಕಟಿಸಿದರು.
ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ ಸಂಘಟಿಸುವ, ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ಗೆ ಸಮರ್ಥವಾಗಿ ಪೈಪೋಟಿ ನೀಡಿ ಗೆದ್ದು ಬರುವ ಸಾಮರ್ಥ್ಯವಿರುವುದು ಯೋಗೇಶ್ವರ್ಗೆ ಮಾತ್ರ, ಆದರೆ ಕಾಂಗ್ರೆಸ್ ಹೈಕಮಾಂಡ್ ಯೋಗೇಶ್ವರ್ ಕಡೆಗಣಿಸಿರುವುದು ಒಳ್ಳೆಯ ಬೆಳವಣಿಗೆಯಲ್ಲ, ಇದಕ್ಕೆ ವಿರೋಧವಿದೆ ಎಂದರು.
ಸಾದತ್ ಆಲಿಖಾನ್ ಬೇಡ: 15ವರ್ಷಗಳಿಂದ ತಾಲೂಕಿನ ಸಕ್ರಿಯ ರಾಜಕಾರಣದಿಂದ ಸಾದತ್ ಆಲಿಖಾನ್ ದೂರವಾಗಿದ್ದು ಯಾವ ಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿಪರ ಕೆಲಸ ಮಾಡಿಲ್ಲ, 15 ವರ್ಷಗಳಿಂದ ಕಾರ್ಯಕರ್ತರ ಸುಖ ದುಃಖಗಳಿಗೆ ಸ್ಪಂದಿಸಿಲ್ಲ. ಇಂತಹವರಿಗೆ ಟಿಕೆಟ್ ನೀಡಿದರೆ ಪಕ್ಷ ಗೆಲವು ಸಾಧಿಸುವುದು ಸಾಧ್ಯವಿಲ್ಲ ಎಂದರು.
ಸಾದತ್ ಆಲೀಖಾನ್ಗೆ ಆರೋಗ್ಯ ಸರಿ ಇಲ್ಲ, ಅವರು ಚುನಾವಣೆಯನ್ನು ಎದುರಿಸಲು ಸಾಧ್ಯವಿಲ್ಲ. ಅವರಿಗೆ ಟಿಕೆಟ್ ನೀಡಿದರೆ ನಾವು ಯಾವುದೇ ಕಾರಣಕ್ಕೂ ಕೆಲಸ ಮಾಡುವುದಿಲ್ಲ. ಹೈಕಮಾಂಡ್ ನಿಲುವು ಬದಲಿಸಿ ಕೊಳ್ಳದೆ ಇದ್ದಲ್ಲಿ ಎಲ್ಲಾ ಸದಸ್ಯರು ಸಾಮೂಹಿಕವಾಗಿ ಕಾಂಗ್ರೆಸ್ ಪಕ್ಷವನ್ನು ತೊರೆಯುವುದಾಗಿ ತಿಳಿಸಿದರು.
ಯೋಗೇಶ್ವರ್ ನಮ್ಮ ನಾಯಕ: ಯೋಗೇಶ್ವರ್ ಬಿಜೆಪಿ ತೊರೆದು ಬಂದ ಹಿನ್ನೆಲೆಯಲ್ಲಿ ನಗರಸಭೆಯಲ್ಲಿ ಕಾಂಗ್ರೆಸ್ ಗೆಲವು ಸಾಧಿಸಲು ಸಾಧ್ಯವಾಯಿತು. ನಾವೆಲ್ಲ ಯೋಗೇಶ್ವರ್ರಿಂದ ಗೆಲವು ಸಾಧಿಸಿದ್ದೇವೆ. ಅವರು ಎಲ್ಲಿರುತ್ತಾರೋ ಅಲ್ಲೇ ಇರುತ್ತೇವೆ ಎಂದು ಸ್ಪಷ್ಟಪಡಿಸಿದರು. ಗೋಷ್ಠಿಯಲ್ಲಿ ನಗರಸಭಾ ಸದಸ್ಯರಾದ ಬಿ.ಪಿ.ಮುದ್ದುಕೃಷ್ಣ, ರಾಮು, ವೆಂಕಟೇಶ್, ಜಕೀರ್ ಅಹ್ಮದ್, ಲಿಯಾಖತ್ ಆಲಿಖಾನ್, ಅಜಂ ಉನ್ನೀಸಾ, ಅಖೀಲಾಭಾನು ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

