ಅಖಾಡಕ್ಕೆ ಇಳಿದ ಅಭ್ಯರ್ಥಿಗಳು
ಕ.ಪ್ರ.ವಾರ್ತೆ , ಬೆಂಗಳೂರು , ಏ.15
ಮೊದಲಿಗೆ ಕ್ಷೇತ್ರದಲ್ಲಿನ ದೇವಸ್ಥಾನಕ್ಕೆ ಭೇಟಿ. ಪೂಜೆ, ಅರ್ಚನೆ, ಕಾಣಿಕೆ. ಬಳಿಕ ಕಾರ್ಯಕರ್ತರ ದಂಡಿನ ಜತೆ ಮೆರವಣಿಗೆ. ದಾರಿಯುದ್ದಕ್ಕೂ ಸಾರ್ವಜನಿಕರಿಗೆ ಕೈ ಬೀಸಿ ಮತಕ್ಕಾಗಿ ಅವ್ಯಕ್ತ ಕೋರಿಕೆ. ಕೊನೆಗೆ ಕೆಲ ಬೆಂಬಲಿಗರ ಜತೆ ಕ್ಷೇತ್ರ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಕೆ.
ಇದು ಬರಲಿರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳನೇಕರು ಸೋಮವಾರ ನಾಮಪತ್ರ ಸಲ್ಲಿಸುವ ವೇಳೆ ನಗರದಲ್ಲಿ ಕಂಡುಬಂದ ದೃಶ್ಯಾವಳಿ. ಸಚಿವ ಎಸ್.ಸುರೇಶ್‌ಕುಮಾರ್, ವಿ.ಸೋಮಣ್ಣ, ಸಂಸದ ಪಿ.ಸಿ.ಮೋಹನ್, ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ದಿನೇಶ್ ಗುಂಡೂರಾವ್, ಜಮೀರ್ ಅಹ್ಮದ್ ಖಾನ್, ಪಾಲಿಕೆ ಸದಸ್ಯ ಬಿ.ವಿ.ಗಣೇಶ್ ಮುಂತಾದವರು ತಮ್ಮ ಬೆಂಬಲಿಗರ ಜತೆ ಕ್ಷೇತ್ರ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಬಹುತೇಕ ಎಲ್ಲರೂ ನಾಮಪತ್ರ ಸಲ್ಲಿಕೆಗೆ ಮುನ್ನ ಕ್ಷೇತ್ರದಲ್ಲಿನ ದೇವಸ್ಥಾನಗಳಿಗೆ ಪೂಜೆ, ಕಾಣಿಕೆ ಸಲ್ಲಿಸಿ ಪ್ರಾರ್ಥಿಸಿದರು. ಆಗ ಅಭ್ಯರ್ಥಿಗಳಿಗೆ ಶುಭ ಹಾರೈಸಲು ನೂರಾರು ಮಂದಿ ಕಾರ್ಯಕರ್ತರು ದೇವಸ್ಥಾನಗಳ ಬಳಿ ನೆರೆದಿರುವುದು ಸಾಕಷ್ಟು ಕಡೆ ಕಂಡು ಬಂತು.
ಅಭ್ಯರ್ಥಿ ದೇವಸ್ಥಾನದಿಂದ ಹೊರಬರುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಜಯಘೋಷ ಕೂಗಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಂತರ ಅಭ್ಯರ್ಥಿ ಜತೆ ಹೆಜ್ಜೆ ಹಾಕಿ, ಕ್ಷೇತ್ರ ಚುನಾವಣಾಧಿಕಾರಿ ಕಚೇರಿಯತ್ತ ಸಾಗಿದರು. ಹೀಗೆ ಸಾಗುತ್ತಿದ್ದ ಅಭ್ಯರ್ಥಿಗಳು ದಾರಿಯುದ್ದಕ್ಕೂ ಸಿಕ್ಕ ಸಾರ್ವಜನಿಕರಿಗೆ ಕೈ ಬೀಸುವುದು, ನಮಸ್ಕರಿಸುವುದು ಸಾಮಾನ್ಯವಾಗಿತ್ತು. ಬಹಿರಂಗವಾಗಿ ಹೇ(ಕೇ)ಳದಿದ್ದರೂ ಅವರ ಕೈಬೀಸುವಿಕೆ, ನಮಸ್ಕಾರಗಳಲ್ಲಿ ಮತ ತಮಗೇ ಹಾಕಿ ಎಂಬ ರೀತಿಯ ಭಾವನೆ ವ್ಯಕ್ತವಾಗುತ್ತಿತ್ತು.
ನಿಷೇಧಾಜ್ಞೆ, ನೂಕುನುಗ್ಗಲು: ಎಲ್ಲ ಕ್ಷೇತ್ರಗಳ ಚುನಾವಣಾಧಿಕಾರಿ ಕಚೇರಿ ಸುತ್ತ ನಿಷೇಧಾಜ್ಞೆ ಹೇರಿದ್ದರಿಂದ ಅಭ್ಯರ್ಥಿಗಳ ಬೆಂಬಲಿಗರು ಗುಂಪು ಕಚೇರಿವರೆಗೆ ಬರದಂತೆ ನಿರ್ಬಂಧಿಸಲಾಗಿತ್ತು. ಹಾಗಾಗಿ ನಿರ್ಬಂಧಿತ ಪ್ರದೇಶದೊಳಕ್ಕೆ ಬರಲೆತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ತಡೆದಾಗ ಸಣ್ಣಪ್ರಮಾಣದ ನೂಕುನುಗ್ಗಲು ಉಂಟಾಗಿತ್ತು. ಜತೆಗೆ ಅಭ್ಯರ್ಥಿ ಸಾಗುತ್ತಿದ್ದ ರಸ್ತೆ, ಕ್ಷೇತ್ರ ಚುನಾವಣಾಧಿಕಾರಿ ಕಚೇರಿ ಸುತ್ತಮುತ್ತಲಿನ ರಸ್ತೆಗಳಲ್ಲಿ ಕೆಲಕಾಲ ಸಂಚಾರದಟ್ಟಣೆ ಆಗಿತ್ತು. ಪ್ರತಿಷ್ಠಿತ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಸ್ಪರ್ಧಿ ಎಸ್.ಸುರೇಶ್‌ಕುಮಾರ್ ಬೆಳಗ್ಗೆ ರಾಮಮಂದಿರ ಮೈದಾನ ಪಕ್ಕದ ರಾಮದೇವರು ಹಾಗೂ ಅಲ್ಲಿಯೇ ಹತ್ತಿರದ ಆಂಜನೇಯ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದು ಪ್ರಾರ್ಥಿಸಿದರು. ನಂತರ ಪಾಲಿಕೆಯ ಕೆಲ ಸದಸ್ಯರು ಹಾಗೂ ನೂರಾರು ಕಾರ್ಯಕರ್ತರ ಜತೆ ಮೆರವಣಿಗೆಯಲ್ಲಿ ಸಾಗಿ, ಕ್ಷೇತ್ರ ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಅವರ ಪ್ರತಿಸ್ಪರ್ಧಿ ಶೋಭಾ ಕರಂದ್ಲಾಜೆ ರಾಮದೇವರು, ಆಂಜನೇಯ ದೇವಸ್ಥಾನಕ್ಕೆ ತೆರಳಿ ಬಳಿಕ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಿದರು.
ಗಾಂಧಿನಗರ ಅಭ್ಯರ್ಥಿಗಳಾದ ಶಾಸಕ ದಿನೇಶ್ ಗುಂಡೂರಾವ್ ಬಳೆಪೇಟೆ ಕಾಶಿ ವಿಶ್ವನಾಥ ದೇವಸ್ಥಾನ ಹಾಗೂ ಸಂಸದ ಪಿ.ಸಿ.ಮೋಹನ್ ಅಕ್ಕಿಪೇಟೆ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಬಳಿಕ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರ ಪತ್ನಿ, ಕುಟುಂಬ ಸದಸ್ಯರೂ ಕಚೇರಿ ಬಳಿ ಹಾಜರಿದ್ದರು. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಪಾಲಿಕೆ ಸದಸ್ಯ ಬಿ.ವಿ.ಗಣೇಶ್ ಚಾಮರಾಜಪೇಟೆಯ ಶಿವಾಲಯದಲ್ಲಿ ದೇವರ ದರ್ಶನ ಪಡೆದ ನಂತರ ನಾಮಪತ್ರ ಸಲ್ಲಿಸಿದರು. ಜಮೀರ್ ಅಹ್ಮದ್ ಖಾನ್ ಅವರು ತಾಯಿ ಹಾಗೂ ಪುತ್ರನ ಸಮೇತ ಆಗಮಿಸಿ ನಾಮಪತ್ರ ಸಲ್ಲಿಸಿದರು. ಅದೇ ರೀತಿ ವಿ.ಸೋಮಣ್ಣ ಅವರು ಕೂಡ ವಿಜಯನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಪಾಲಿಕೆ ಸದಸ್ಯರು ಹಾಗೂ ಮಾಜಿ ಉಪಮೇಯರ್ ಲಕ್ಷ್ಮೀನಾರಾಯಣ್ ಅವರ ಜತೆ ತೆರಳಿ ನಾಮಪತ್ರ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

