ಬೆಂಗಳೂರು ಗ್ರಾಮಾಂತರ

ಕಾಣದ ಕೈನಿಂದ ಟಿಕೆಟ್ ತಪ್ಪಿತೆ ಯೋಗೇಶ್ವರ...

Published On :

ಕ.ಪ್ರ. ವಾರ್ತೆ  ,  ರಾಮನಗರ  ,  ಏ.16
ರಾಜಕೀಯ ಚದುರಂಗದಾಟದಲ್ಲಿ ಸೈನಿಕನಿಗೆ ಕಾಣದ ಕೈ ಚೆಕ್ ನೀಡಿದೆ. ಟಿಕೆಟ್ ಭರವಸೆ ಹಿನ್ನೆಲೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಬೊಂಬೆನಾಡು ಚನ್ನಪಟ್ಟಣದ ಸೈನಿಕ, ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅತಂತ್ರರಾಗಿದ್ದಾರೆ. ಅವರೀಗ ಸ್ವತಂತ್ರ ಸ್ಪರ್ಧೆಯೊಂದಿಗೆ ಅಗ್ನಿ ಪರೀಕ್ಷೆಗೆ ಇಳಿಯಲು ಹೊರಟಿದ್ದಾರೆ.
ಪೌರ ಸಂಸ್ಥೆಗಳ ಚುನಾವಣೆ ಸಂದರ್ಭದಲ್ಲಿ ಸಚಿವ, ಶಾಸಕ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಹುದ್ದೆ ತ್ಯಜಿಸಿದ್ದ ಯೋಗೇಶ್ವರ್ ತರಾತುರಿಯಲ್ಲೇ ಕಾಂಗ್ರೆಸ್ ಬಾವುಟ ಹಿಡಿದಿದ್ದರು. ಆ ಚುನಾವಣೆಗೆ ಪಕ್ಷದ ಸಾರಥ್ಯ ವಹಿಸಿದ್ದರು. ಈ ಬಾರಿ ಕಡೆ ಗಳಿಗೆವರೆಗೆ ತೀವ್ರ ಕಸರತ್ತು ನಡೆಸಿದ್ದರಾದರೂ ಕಾಂಗ್ರೆಸ್ ಟಿಕೆಟ್ ಕೈಗೂಡಲಿಲ್ಲ.
ಅಡ್ಡಿಯಾದ ಅಂಶಗಳು: ಆಪರೇಷನ್ ಕಮಲ ಕಾರ್ಯಾಚರಣೆಗೆ ಒಳಗಾದವರಿಗೆ ಕಾಂಗ್ರೆಸ್ ಟಿಕೆಟ್ ಇಲ್ಲ ಎನ್ನುವುದು ರಾಹುಲ್ ಗಾಂಧಿ ಸೂತ್ರಗಳಲ್ಲಿ ಒಂದಾಗಿದೆ. ಇಷ್ಟಾಗಿಯೂ ಯೋಗೇಶ್ವರ್ ಅಚಲ ವಿಶ್ವಾಸದೊಂದಿಗೆ ಅಂತಿಮ ಕ್ಷಣದವರೆಗೂ ಪಕ್ಷದ ಬಿ ಫಾರಂಗಾಗಿ ತೀವ್ರ ಲಾಬಿ ನಡೆಸಿದ್ದರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ. ಅವರೆದುರು ಸೆಣೆಸಲು ಯೋಗೇಶ್ವರ್ ಸಮರ್ಥ ಎನ್ನುವ ವರದಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಒಂದು ಹಂತದಲ್ಲಿ ರಾಹುಲ್ ಸೂತ್ರ ಸಡಿಲಗೊಳಿಸಿ, ಯೋಗೇಶ್ವರ್‌ಗೆ ಟಿಕೆಟ್ ನೀಡಲು ಮನಸು ಮಾಡಿತ್ತೆನ್ನಲಾಗಿದೆ.
ಪಟ್ಟಿ ಪ್ರಕಟ ತೊಡಕು: ಯೋಗೇಶ್ವರ್ ಪ್ರಯತ್ನ ಕೈಗೂಡುವ ಮಟ್ಟಕ್ಕೆ ತಲುಪುತ್ತಿದ್ದಂತೆಯೇ 177 ಅಭ್ಯರ್ಥಿಗಳ ಕಾಂಗ್ರೆಸ್ ಮೊದಲ ಪಟ್ಟಿ ಪ್ರಕಟಗೊಂಡಿತ್ತು. ಅದರಲ್ಲಿ ಚನ್ನಪಟ್ಟಣಕ್ಕೆ ಅಲ್ಪಸಂಖ್ಯಾತ ಸಮುದಾಯದ ಮುಖಂಡ, ಮಾಜಿ ಶಾಸಕ ಸಾದತ್ ಆಲಿಖಾನ್ ಹೆಸರನ್ನು ಪ್ರಕಟಿಸಲಾಗಿತ್ತು.
ಹೆಸರು ಪ್ರಕಟಣೆ ನಂತರವೂ ಯೋಗೇಶ್ವರ್, ಅವರಿಗೆ ಟಿಕೆಟ್ ಅಭಯ ನೀಡಿದ್ದವರು ಸಾಕಷ್ಟು ಕಸರತ್ತು ಮುಂದುವರಿಸಿದ್ದರು. ಟಿಕೆಟ್ ಬಿಟ್ಟುಕೊಡುವಂತೆ ಸಾದತ್ ಆಲಿಖಾನ್ ಅವರನ್ನೇ ಮನವೊಲಿಸುವ ಪ್ರಯತ್ನವೂ ಸಾಗಿತ್ತು. ಈ ಹಂತದಲ್ಲಿ ಯೋಗೇಶ್ವರ್ ವಿರೋಧಿ ನಾಯಕರೊಬ್ಬರು ಕೈ ಚಳಕ ತೋರಿದರೆಂದು ಹೇಳಲಾಗುತ್ತಿದೆ.
ತಿರುಗಿ ಬೀಳುವ ಭೀತಿ: ಅಂತಿಮವಾಗಿ ಯೋಗೇಶ್ವರ್ ಅವರಿಗೆ ಮುಳುವಾದದ್ದು ಮತಬ್ಯಾಂಕ್ ರಾಜಕಾರಣ. ಸಾದತ್ ಆಲಿಖಾನ್ ತಾವಾಗಿಯೇ ಬಿ ಫಾರಂ ತ್ಯಾಗ ಮಾಡಿದರೂ ಅಥವಾ ಪಕ್ಷವೇ ಅಭ್ಯರ್ಥಿಯನ್ನು ಬದಲಿಸಿದರೂ ಅಲ್ಪ ಸಂಖ್ಯಾತ ಸಮುದಾಯ ಕಾಂಗ್ರೆಸ್ ವಿರುದ್ಧ ತಿರುಗಿ ಬೀಳಬಹುದೆನ್ನುವ ಸಂದೇಶ ಹೈಕಮಾಂಡ್‌ಗೆ ರವಾನೆಯಾಯಿತು.  
ಅವಳಿ ಕ್ಷೇತ್ರಗಳಾದ ರಾಮನಗರ, ಚನ್ನಪಟ್ಟಣದಲ್ಲಿ ಅಲ್ಪ ಸಂಖ್ಯಾತರ ಮತಗಳೇ ನಿರ್ಣಾಯಕ. ಜಿಲ್ಲೆಯ ಮಾಗಡಿ, ಕನಕಪುರದಲ್ಲೂ ಅಲ್ಪಸಂಖ್ಯಾತ ಮತದಾರರು ಸಾಕಷ್ಟಿದ್ದಾರೆ. ಸಾದತ್ ಆಲಿಖಾನ್ ಅವರು ಮಂಡ್ಯದಲ್ಲೂ ಪ್ರಾಬಲ್ಯ ಹೊಂದಿದ್ದಾರೆ. ಈ ಭಾಗದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗುತ್ತದೆ ಎಂದು ವರಿಷ್ಠರು ದುಸ್ಸಾಹಸಕ್ಕೆ ಕೈ ಹಾಕಲಿಲ್ಲ.
ಸ್ವತಂತ್ರವಲ್ಲದೆ ಬೇರೆ ದಿಕ್ಕಿಲ್ಲ: ಯೋಗೇಶ್ವರ್ ಜೆಡಿಎಸ್ ಸೇರುವ ಪ್ರಶ್ನೆಯೇ ಇಲ್ಲ. ಬಿಜೆಪಿಗೆ ಮರಳುವ ಸಂಭವವೂ ಇಲ್ಲ. ಕ್ಷೇತ್ರದಲ್ಲಿ ಕೆಜೆಪಿ, ಬಿಎಸ್‌ಆರ್ ಪ್ರಭಾವ ಇಲ್ಲದ್ದರಿಂದ ಆ ಪಕ್ಷಗಳತ್ತ ಹೋಗಿಯೂ ಪ್ರಯೋಜನವಿಲ್ಲ. ಹೀಗಾಗಿ ಯೋಗೇಶ್ವರ್ ಅವರಿಗೆ ಸ್ವತಂತ್ರ ಸ್ಪರ್ಧೆಯೇ ಸೂಕ್ತ. ಸಭೆ ನಡೆಸಿರುವ ಬೆಂಬಲಿಗರ ಅಭಿಪ್ರಾಯವೂ ಅದೇ ಆಗಿದೆ.
ಪಟ್ಟು, ವರಸೆ ಕರಗತ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಸ್ಪರ್ಧೆಯ ಕಾರಣಕ್ಕೆ ಚನ್ನಪಟ್ಟಣ ಕ್ಷೇತ್ರ ಗಮನ ಸೆಳೆದಿದೆ. ಕ್ಷೇತ್ರಾಂತರಿ ಅನಿತಾ ಎದುರು ಪಕ್ಷಾಂತರಿ ಯೋಗೇಶ್ವರ್ ಅವರೇ ಸಮರ್ಥ ಹುರಿಯಾಳು ಎನ್ನುವ ವಾಸ್ತವ ಸಂಗತಿ ಅರಿತಿದ್ದರೂ ಅವರಿಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದೆ.
ಚುನಾವಣೆಯ ಎಲ್ಲ ಪಟ್ಟು, ವರಸೆಗಳನ್ನು ಕರಗತ ಮಾಡಿಕೊಂಡಿರುವ ಯೋಗೇಶ್ವರ್ ಅವರು ಚನ್ನಪಟ್ಟಣದ ಮತದಾರರ ನಾಡಿಮಿಡಿತವನ್ನು ಚೆನ್ನಾಗಿಯೇ ಅರಿತಿದ್ದಾರೆ. ಯಾವುದೇ ಪಕ್ಷ ಇಲ್ಲವೇ ಪಕ್ಷೇತರರಾಗಿ ಸ್ಪರ್ಧೆಗೆ ಇಳಿದರೂ ಅವರನ್ನು ಲಘುವಾಗಿ ಪರಿಗಣಿಸುವಂತೆಯೇ ಇಲ್ಲ.
ನೀರಾವರಿಯೇ ಅಸ್ತ್ರ
ಭೀಕರ ಬರದಿಂದ ಜಲಕ್ಷಾಮಕ್ಕೆ ಗುರಿಯಾಗಿರುವ ಚನ್ನಪಟ್ಟಣದಲ್ಲಿ ಈ ಬಾರಿ ನೀರಾವರಿ ಯೋಜನೆಗಳ ವಿಷಯವೇ  ಬ್ರಹ್ಮಾಸ್ತ್ರ. ಇಗ್ಗಲೂರು ಜಲಾಶಯ, ಗರಕಹಳ್ಳಿ ಏತ ನೀರಾವರಿ ಕೊಡುಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರದ್ದು ಎನ್ನುವ ವಿಷಯ ಜೆಡಿಎಸ್ ಪ್ರಚಾರದಲ್ಲಿ ಬಳಕೆಯಾಗುತ್ತಿದೆ.
ಬಿಜೆಪಿ ಸರ್ಕಾರದಲ್ಲಿ 198 ಕೋಟಿ ವೆಚ್ಚದಲ್ಲಿ ಕಣ್ವ ಏತ ನೀರಾವರಿ ಯೋಜನೆಗೆ ಅಡಿಗಲ್ಲು ಹಾಕಿಸಿರುವ ಯೋಗೇಶ್ವರ್ ಶಾಶ್ವತ ನೀರಾವರಿ ಅನುಷ್ಠಾನಕ್ಕಾಗಿ ಇನ್ನೊಂದು ಬಾರಿ ಅವಕಾಶ ಕೊಡಿ ಎಂದು ಮತಯಾಚಿಸುತ್ತಿದ್ದಾರೆ. ಪಕ್ಷೇತರರಾಗಿಯೂ ಗೆಲ್ಲುವ ವಿಶ್ವಾಸ ಅವರಲ್ಲಿದೆ.

ಬದಲು, ಬದಲು, ಬದಲು
2009ರಲ್ಲಿ ಆಪರೇಷನ್ ಕಮಲ ಕಾರ್ಯಾಚರಣೆಗೆ ಒಳಗಾಗಿದ್ದನ್ನು ತಾಲೂಕಿನ ಸಮಗ್ರ ನೀರಾವರಿಗಾಗಿ ಈ ಪ್ರಯತ್ನವೆಂದು ಸಮರ್ಥಿಸಿಕೊಂಡಿದ್ದರು. ಈಚೆಗೆ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಮರಳಿದಾಗ ಚನ್ನಪಟ್ಟಣದ ಹಸಿರು ಕ್ರಾಂತಿಗಾಗಿ ಈ ಪಕ್ಷಾಂತರವೆಂದು ಬಣ್ಣಿಸಿದ್ದರು. 
ಚುನಾವಣೆ ಘೋಷಣೆಗೆ ನಾಲ್ಕೈದು ದಿನ ಇದ್ದಂತೆಯೇ ಚನ್ನಪಟ್ಟಣ ತಾಲೂಕಿನಾದ್ಯಂತ ಯೋಗೇಶ್ವರ್ ಭಾವಚಿತ್ರ, ಹಸ್ತದ ಚಿಹ್ನೆ ಸಮೇತ ಇದ್ದ ಭಿತ್ತಿಪತ್ರದಲ್ಲಿ ನೀರಾವರಿಗಾಗಿ ಕಾಂಗ್ರೆಸ್ ಬೆಂಬಲಿಸಿ ಎನ್ನುವ ಘೋಷಣೆ ಇತ್ತು. ಇದೀಗ ಪಕ್ಷೇತರ ಸ್ಪರ್ಧೆಗೆ ಅವರು ಅಣಿಯಾಗುತ್ತಿದ್ದಾರೆ.

ಮೊದಲೂ ಪಕ್ಷೇತರ
1999ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಯೋಗೇಶ್ವರ್ ಗೆಲವು ಸಾಧಿಸಿದ್ದರು. 2004 ಮತ್ತು 2008ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದರು. 2009ರ ಲೋಕಸಭೆ ಚುನಾವಣೆ ವೇಳೆ ಆಪರೇಷನ್ ಕಮಲಕ್ಕೆ ಒಳಗಾಗಿ ಲೋಕಸಭೆಗೆ ಸ್ಪರ್ಧಿಸಿ ಕುಮಾರಸ್ವಾಮಿ ಎದುರು ಸೋಲುಂಡರು. ಅದೇ ವರ್ಷ ವಿಧಾನಸಭೆ ಮರು ಚುನಾವಣೆಯಲ್ಲೂ ಸೋಲಾಯ್ತು. ಆಗ ಗೆದ್ದ ಜೆಡಿಎಸ್‌ನ ಅಶ್ವತ್ ಕೂಡ ಆಪರೇಷನ್ ಕಮಲಕ್ಕೆ ಒಳಗಾದ ಪರಿಣಾಮ 2011ರಲ್ಲಿ ನಡೆದ ಮರು ಚುನಾವಣೆಯಲ್ಲಿ ಯೋಗೇಶ್ವರ್ ಮತ್ತೆ ಗೆಲವಿನ ಲಯ ಕಂಡುಕೊಂಡರು.  


-ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.