ಮಾಗಡಿಯನ್ನು ಮಾದರಿ ಮಾಡುವೆ
ಕ.ಪ್ರ.ವಾರ್ತೆ,ಮಾಗಡಿ,ಏ.27
ಕೆಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಮಾದರಿ ಮಾಗಡಿಯನ್ನಾಗಿ ಮಾಡಿ ತೋರಿಸುತ್ತೇನೆ. ಇದನ್ನು ಇಲ್ಲಿನ ಮಹಾಜನತೆಗೆ ನಾನು ರಕ್ತದಲ್ಲಿ ಬರೆದು ಕೊಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಘೋಷಿಸಿದರು.
ಅವರು ಮಾಗಡಿ ಪಟ್ಟಣದ ಕೆಂಪೇಗೌಡ ಬಯಲು ರಂಗಮಂದಿರದಲ್ಲಿ ಕೆಜೆಪಿ ಅಭ್ಯರ್ಥಿ ಎಚ್.ಎಂ. ಕೃಷ್ಣಮೂರ್ತಿ ಪರ ಮತಯಾಚಿಸುವ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಕೆಜೆಪಿ ಅಭ್ಯರ್ಥಿ ಎಚ್.ಎಂ.ಕೃಷ್ಣಮೂರ್ತಿಯನ್ನು ಜನತೆ ಗೆಲ್ಲಿಸಿದರೆ ಮಾಗಡಿ ತಾಲೂಕನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುತ್ತೇನೆ. ಸಹಕಾರಿ ಸಂಘಗಳಲ್ಲಿ ರೈತರು ಮಾಡಿರುವ 1 ಲಕ್ಷದ ವರೆಗೆ ಸಾಲ ಮನ್ನಾ ಮಾಡುತ್ತೇನೆ. ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ 2 ಸಾವಿರ ಕೋಟಿ ರು, ಹಜ್ ಭವನಕ್ಕೆ 10 ಎಕರೆ ಜಮೀನು ಮಂಜೂರಾತಿ, ಶೋಷಿತ ದಲಿತರಿಗೆ 5 ಸಾವಿರ ಕೋಟಿ ರು. ಗಳನ್ನು ಬಜೆಟ್ನಲ್ಲಿ ಮೀಸಲಿಡುತ್ತೇನೆ. ಗುಡಿಸಲು ರಹಿತ ರಾಜ್ಯವನ್ನಾಗಿಸಲು ಎಲ್ಲಾ ಕುಟುಂಬಕ್ಕೂ ಸೂರು ನೀಡುವುದು ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳನ್ನು ಕೊಡುತ್ತೇನೆ ಎಂದರಲ್ಲದೆ ಪ್ರತಿಯೊಬ್ಬರಿಗೂ ಶಿಕ್ಷಣ ಸಿಗುವಂತಾಗಬೇಕು. ಜಾನಪದ ವಿಶ್ವವಿದ್ಯಾಲಯ ಸ್ಥಾಪಿಸಿದ ಕೀರ್ತಿ ನನ್ನದು ಎಂದು ಮುಖ್ಯಮಂತ್ರಿಯಾಗಿದ್ದಾಗ ಕೊಟ್ಟಂತಹ ಯೋಜನೆ ಹಾಗೂ ಸಾಧನೆಯ ಕುರಿತು ಬಿಎಸ್ವೈ ತಿಳಿಸಿದರು.
ನಾನು ವ್ಯಕ್ತಿ ವಿರೋಧಿಯಲ್ಲ, ನಾನು ಜಾತಿ ಕುಲ ನೋಡಲ್ಲ, ನಾವೆಲ್ಲ ಒಂದೇ ತಾಯಿಯ ಮಕ್ಕಳಿದ್ದಂತೆ. ರಾಜ್ಯದ ಪ್ರತಿಯೊಬ್ಬರಿಗೂ ಸಮಪಾಲು, ಸಮಬಾಳು ನೀಡಬೇಕೆಂಬುದು ನನ್ನ ಧ್ಯೇಯ ಎಂದು ಬಿಎಸ್ವೈ ತಿಳಿಸಿದರು.
ಕೈ ಕೊಟ್ಟರು: ಮಾಗಡಿ ವಿಧಾನ ಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಎಚ್.ಎಂ. ಕೃಷ್ಣಮೂರ್ತಿ ಮಾತನಾಡಿ ಕಳೆದ 2 ಬಾರಿ ಕಾಂಗ್ರೆಸ್ ನಾಯಕರು ಟಿಕೇಟ್ ನೀಡುವುದಾಗಿ ಹೇಳಿ ಕೈಕೊಟ್ಟರು. ಕೊನೆಗೆ ನನ್ನನ್ನು ಖಳ ನಾಯಕನ್ನನಾಗಿ ಬಿಂಬಿಸಿ ನನ್ನ ಹೆಂಡತಿ ಮಕ್ಕಳ ಕಣ್ಣೀರು ಹಾಕಿಸಿದರು. ಜನತೆ ಆಶೀರ್ವಾದದಿಂದ ಗೆದ್ದು, ಮಾಗಡಿಯಲ್ಲಿ ಮತ್ತೆ ಕಂಪೇಗೌಡ ನಾಡನ್ನು ಕಟ್ಟುವ ಉತ್ಸಾಹ ತುಂಬಿದ್ದಾರೆ. ಕೆಂಪೇಗೌಡರ ಆದರ್ಶ ಮತ್ತು ಮಠಮಾನ್ಯಗಳ ಗುರುಗಳ ಆಶೀರ್ವಾದದಿಂದ ಹಾಗೂ ತಾಲೂಕಿನ ಮಹಾಜನತೆ ಆಶೀರ್ವಾದಿಂದ ಈ ಬಾರಿ ಬಹುಮತದಿಂದ ಗೆದ್ದು ಕ್ಷೇತ್ರಕ್ಕೆ ಹೇಮಾವತಿ ಯೋಜನೆ ತರುತ್ತೇನೆ, ನಿರುದ್ಯೋಗಿಗಳ ಸಮಸ್ಯೆ ಬಗೆಹರಿಸುತ್ತೇನೆ, ಕ್ಷೇತ್ರವನ್ನು ರಾಮರಾಜ್ಯವನ್ನಾಗಿಸುತ್ತೇನೆ ಎಂದರು.
ಕಂಠೀರವ ಸ್ಟುಡಿಯೋ ಅಧ್ಯಕ್ಷ ಎಂ. ರುದ್ರೇಶ್, ಬಿ.ಎಸ್.ಪರಮಶಿವಯ್ಯ, ಬಿ.ಎಚ್. ಮಹೇಶಯ್ಯ, ಹನುಮಂತರಾಯಪ್ಪ, ಮಧುಗೌಡ, ಪುಷ್ಪ ಕೃಷ್ಣಮೂರ್ತಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

