ಬೆಂಗಳೂರು ಗ್ರಾಮಾಂತರ

ಅಪಘಾತ: ಮೂವರ ಸಾವು, ಇಬ್ಬರಿಗೆ ಗಾಯ

Published On :

ಬೆಂಗಳೂರು: ನಗರದ ವಿವಿಧ ಸ್ಥಳಗಳಲ್ಲಿ ಸೋಮವಾರ ಹಾಗೂ ಭಾನುವಾರ ರಾತ್ರಿ ಸಂಭವಿಸಿದ ಪ್ರತ್ಯೇಕ ನಾಲ್ಕು ಅಪಘಾತ ಪ್ರಕರಣಗಳಲ್ಲಿ ಮೂವರು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ.
ಕೆಂಗೇರಿ, ಫ್ರೇಜರ್ಟೌನ್, ಬಾಣಸವಾಡಿ ಹಾಗೂ ಕುಮಾರಸ್ವಾಮಿ ಬಡಾವಣೆ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿವೆ.
ಸಹಾಯಕ ಸಾವು: ಕೆಂಗೇರಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ನೈಸ್ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಟ್ರಕ್ನ ಕ್ಲೀನರ್ ಕುಮಾರ್(19) ಮೃತಪಟ್ಟಿದ್ದಾರೆ.
ತಮಿಳುನಾಡು ಮೂಲದ ಟ್ರಕ್ನಲ್ಲಿ ಬೆಂಗಳೂರಿಗೆ ಬಂದಿದ್ದ ಅಯ್ಯಪ್ಪ ಹಾಗೂ ಕುಮಾರ್ ಅವರು ಆರ್.ಎಂ.ಸಿ.ಯಾರ್ಡ್ನಲ್ಲಿ ಈರುಳ್ಳಿ ತುಂಬಿಕೊಂಡು ತಮಿಳುನಾಡಿಗೆ ಹೋಗುತ್ತಿದ್ದರು. ರಾತ್ರಿ ಮಳೆ ಬಂದ ಕಾರಣ ಚನ್ನಸಂದ್ರ ಮೇಲ್ಸೇತುವೆ ಬಳಿ ವಾಹನ ನಿಲ್ಲಿಸಿ ಟ್ರಕ್ಗೆ ಹೊದೆಸಿದ್ದ ಟಾರ್ಪಲ್ ಸರಿಪಡಿಸುತ್ತಿದ್ದರು. ಈ ವೇಳೆ ಚಾಲಕ ಅಯ್ಯಪ್ಪ ವಾಹನದ ಮೇಲೆ ಹತ್ತಿದ್ದರು. ಕೆಳಗೆ ನಿಂತಿದ್ದ ಕುಮಾರ್ ಹಗ್ಗವನ್ನು ಅವರಿಗೆ ಕೊಡುತ್ತಿದ್ದರು.
ಈ ವೇಳೆ ಅದೇ ಮಾರ್ಗವಾಗಿ ಬಂದ ಮಾರುತಿ ಸ್ವಿಫ್ಟ್ ಕಾರು ಕ್ಲೀನರ್ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಅಪಘಾತ ಸಂಭವಿಸಿದ ಸ್ಥಳದಿಂದ ಸುಮಾರು 220 ಅಡಿ ದೂರದಲ್ಲಿ ಬಿದ್ದಿತ್ತು.
ಕಾರಿನಲ್ಲಿದ್ದ ನಾಲ್ವರು ಅಪಾಯದಿಂದ ಪಾರಾಗಿದ್ದು, ಪೊಲೀಸರು ಕಾರು ವಶಕ್ಕೆ ತೆಗೆದುಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಆಟೋ ಚಾಲಕ ಸಾವು: ಆಟೋ ಪಲ್ಟಿ ಹೊಡೆದು ಚಾಲಕ ಮೃತಪಟ್ಟಿರುವ ಘಟನೆ ಫ್ರೇಜರ್ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಾಗಶೆಟ್ಟಿಹಳ್ಳಿ ನಿವಾಸಿ ಚಂದ್ರು ಮೃತರು. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಚಂದ್ರು ರಜೆ ದಿನಗಳಲ್ಲಿ ಆಟೋ ಓಡಿಸುತ್ತಿದ್ದರು. ಭಾನುವಾರ ರಾತ್ರಿ ಕೆಲಸಕ್ಕೆ ಹೋಗಿದ್ದ ವೇಳೆ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ತಲೆಗೆ ಪೆಟ್ಟುಬಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಉದ್ಯೋಗಿ ಸಾವು:  ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಕಂಪನಿ ಉದ್ಯೋಗಿ ಸ್ಥಳದಲ್ಲೇ ಮೃತಪಟ್ಟು, ಕಾರಿನಲ್ಲಿದ್ದ ಮತ್ತಿಬ್ಬರು ಗಾಯಗೊಂಡಿರುವ ಘಟನೆ ಬಾಣಸವಾಡಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಭಾನುವಾರ ರಜೆ ಇದ್ದ ಕಾರಣ ಸ್ನೇಹಿತರೆಲ್ಲ ಜಾಲಿರೈಡ್ ಹೋಗಿ ರಾತ್ರಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಹೆಣ್ಣೂರು ರಿಂಗ್ ರಸ್ತೆ ಬಿಎಂಟಿಸಿ ಡಿಪೋ ಬಳಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಾರು ಪಲ್ಟಿಹೊಡೆದ ಪರಿಣಾಮ, ವಾಹನ ಚಾಲನೆ ಮಾಡುತ್ತಿದ್ದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೊಮ್ಮನಹಳ್ಳಿ ನಿವಾಸಿಯಾದ ಹರ್ಷ(25) ಮೃತರು. ಅವರ ಸ್ನೇಹಿತರಾದ ರಾಹುಲ್ ರಘುನಾಥ್ ಹಾಗೂ ಅಶೋಕ್ ಬಿಸ್ವಾ ಗಾಯಗೊಂಡವರು. ಗಾಯಾಳುಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಹರ್ಷ ಮೂಲತಃ ಮೈಸೂರಿನವರಾಗಿದ್ದು, ನಗರದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಪಾದಚಾರಿ ಸಾವು: ಕುಮಾರಸ್ವಾಮಿ ಬಡಾವಣೆ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಪಾದಚಾರಿ ಮೃತಪಟ್ಟಿದ್ದಾರೆ. ಕನಕಪುರ ಮುಖ್ಯರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಕೋಣನಕುಂಟೆ ನಿವಾಸಿ ಈಶ್ವರಪ್ಪ(54) ಮೃತರು. ಭಾನುವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಹಿಂತಿರುಗುವಾಗ ರಸ್ತೆ ದಾಟುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.