ಜೆಡಿಎಸ್ ಸೋಲಿಸುವ ಏಕೈಕ ಉದ್ದೇಶ ಕಾಂಗ್ರೆಸ್ ಜತೆ ಕೈ ಜೋಡಿಸಲು ನಿರ್ಧಾರ
ಚನ್ನಪಟ್ಟಣ: ತಾಲೂಕಿನಲ್ಲಿ ನಮ್ಮ ರಾಜಕೀಯ ಕಡುವೈರಿ ಪಕ್ಷ ಜೆಡಿಎಸ್ ಆಗಿದೆ. ಆ ಪಕ್ಷವನ್ನು ಸೋಲಿಸುವ ಏಕೈಕ ಉದ್ದೇಶದಿಂದ ಕಾಂಗ್ರೆಸ್ ಜತೆ ಕೈ ಜೋಡಿಸಲು ನಿರ್ಧರಿಸಿರುವುದಾಗಿ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಸಿ.ಪಿ.ಯೋಗೇಶ್ವರ್ ಬೆಂಬಲಿಗರ ಒಂದು ಗುಂಪು ನಿಲುವು ಪ್ರಕಟಿಸಿದೆ.
ಜಾನಪದ ಲೋಕದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜವಾದಿ ಪಕ್ಷದ ತಾ.ಪಂ. ಮಾಜಿ ಸದಸ್ಯ ಎಸ್.ಆರ್.ಪ್ರಮೋದ್, ಸ್ಥಳೀಯ ಕಾರಣಕ್ಕಾಗಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೇ ಕಾಂಗ್ರೆಸ್ ಬೆಂಬಲಿಸುವ ನಿರ್ಧಾರ ತಳೆದಿರುವುದಾಗಿ ಹೇಳಿದರು. ಈವರೆಗೆ ಕಾಂಗ್ರೆಸ್ ಪಕ್ಷದ ಯಾವ ಮುಖಂಡರೂ ನಮ್ಮನ್ನು ಸಂಪರ್ಕಿಸಿಲ್ಲ. ಬೆಂಬಲದ ವಿಷಯವಾಗಿ ನಮ್ಮ ನೇತಾರ ಸಿ.ಪಿ.ಯೋಗೇಶ್ವರ್ ಕೂಡ ಸ್ಪಷ್ಟ ಸೂಚನೆಯನ್ನೇನೂ ನೀಡಿಲ್ಲ. ನಾವಾಗಿಯೇ ಕಾಂಗ್ರೆಸ್ ಅಭ್ಯರ್ಥಿಯ ಬೆಂಬಲಕ್ಕೆ ನಿಲ್ಲುತ್ತಿದ್ದೇವೆ ಎಂದರು.
ಕಾಂಗ್ರೆಸ್ ನಮ್ಮದೇ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಮೂಲತಃ ನಾವೂ ಕಾಂಗೆಸ್ಸಿಗರೇ ಆಗಿದ್ದೇವೆ. ಆ ಪಕ್ಷದಲ್ಲಿ ನಾವೂ ಅಧಿಕಾರ ಅನುಭವಿಸಿದ್ದೇವೆ. ಸಿ.ಪಿ.ಯೋಗೇಶ್ವರ್ ಅವರ ಕೈ ಬಲಪಡಿಸಲಷ್ಟೇ ನಾವೀಗ ಸಮಾಜವಾದಿ ಪಕ್ಷದಲ್ಲಿದ್ದೇವೆ ಎಂದು ಪ್ರಮೋದ್ ಸ್ಪಷ್ಟಪಡಿಸಿದರು.
ಎಸ್ಪಿಗೆ ಸದಸ್ಯರೇ ಅಲ್ಲ: ಸಮಾಜವಾದಿ ಪಕ್ಷವು ರಾಜ್ಯದಲ್ಲಿ ಈಗಷ್ಟೇ ಕಣ್ಣು ಬಿಡುತ್ತಿದೆ. ನಾವು ಆ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೂ ಪಡೆದಿಲ್ಲ. ಪಕ್ಷಕ್ಕೆ ಇಲ್ಲಿವರೆಗೆ ಪದಾಧಿಕಾರಿಗಳೂ ಇಲ್ಲದ ಕಾರಣ ನಮ್ಮದೇ ನಿಲುವು ಕೈಗೊಳ್ಳಲು ಸ್ವತಂತ್ರರು ಎನ್ನುವಂತೆ ಪ್ರಮೋದ್ ಪ್ರತಿಕ್ರಿಯಿಸಿದರು.
ಸೋಲಿಸುವುದೇ ಗುರಿ: ಲೋಕಸಭೆ ಮರು ಚುನಾವಣೆಯಲ್ಲಿ ಜೆಡಿಎಸ್ ಸೋಲಿಸುವುದೇ ನಮ್ಮ ಗುರಿ. ಇದೇ ಕಾರಣಕ್ಕೆ ನಾವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದೇವೆ ಎಂದರು. ಗೋಷ್ಠಿಯಲ್ಲಿ ಜಿ.ಪಂ.ಮಾಜಿ ಸದಸ್ಯ ಸ್ವಾಮಿ, ತಾ.ಪಂ. ಮಾಜಿ ಸದಸ್ಯ ಬೋರೇಗೌಡ, ಮುಖಂಡರಾದ ಹುಲುವಾಡಿ ಶಿವಕುಮಾರ್, ಹರೂರು ರಾಜಣ್ಣ, ಎಸ್.ಕೃಷ್ಣಪ್ಪ, ಶಿವರಾಮು, ಚಂದ್ರು, ಭದ್ರಗಿರಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

