ಬೆಂಗಳೂರು ಗ್ರಾಮಾಂತರ

'ಸ್ವಾಮಿ'ಗಳು ರಾಜಿನಾಮೆ ನೀಡದೇ ಇದ್ದರೆ ಉಪ ಚುನಾವಣೆ ಬರ್ತಿರ್ಲಿಲ್ಲ

Published On :

ಕ.ಪ್ರ.ವಾರ್ತೆ ಟಿ ರಾಮನಗರ ಟಿ  ಆ.10
ಜೆಡಿಎಸ್ ಸಂಸದರ ರಾಜೀನಾಮೆಯಿಂದ ಲೋಕಸಭೆ ಉಭಯ ಕ್ಷೇತ್ರಗಳಿಗೆ ಮರು ಚುನಾವಣೆ ಎದುರಾಗಿದೆ. ಚುನಾವಣೆ ತಂದೊಡ್ಡುವಲ್ಲಿ ಕಾಂಗ್ರೆಸ್ ಪಾತ್ರವಿದೆ ಎನ್ನುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರೋಪ ಹುರುಳಿಲ್ಲದ್ದು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದರು.
ಚನ್ನಪಟ್ಟಣ ತಾಲೂಕಿನ ಕೆಂಗಲ್‌ನಲ್ಲಿ ಶ್ರಾವಣ ಶನಿವಾರದ ಪ್ರಯುಕ್ತ ಕೆಂಗಲ್ ಹನುಮಂತಯ್ಯ ಟ್ರಸ್ಟ್‌ವತಿಯಿಂದ ನಡೆದ ಹನುಮಂತಯ್ಯ ಸ್ಮರಣೆ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಎದುರಾದ ವಿಷಯದಲ್ಲಿ ಕುಮಾರಸ್ವಾಮಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದರು.
ಕುಮಾರಸ್ವಾಮಿ, ಚಲುವರಾಯಸ್ವಾಮಿ ರಾಜಿನಾಮೆ ನೀಡದಿದ್ದರೆ ಚುನಾವಣೆ ನಡೆಯುವ ಅಗತ್ಯವೇ ಇರಲಿಲ್ಲ. ಅವರಿಬ್ಬರೂ ಜನಾದೇಶವನ್ನು ಧಿಕ್ಕರಿಸಿ, ರಾಜಿನಾಮೆ ನೀಡಿದ ಫಲವಾಗಿ ಮರು ಚುನಾವಣೆ ಬಂದಿದೆ. ಕುಮಾರಸ್ವಾಮಿ ಹಿಂದೆಯೂ ರಾಮನಗರ ವಿಧಾನಸಭೆಗೆ ಮರು ಚುನಾವಣೆ ತಂದೊಡ್ಡಿದ್ದರು ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಸೋಲಿಸಲಾಗದು: ಬಿಜೆಪಿ ಮತ್ತು ಜೆಡಿಎಸ್, ಕಾಂಗ್ರೆಸ್ ಅನ್ನು ಶತ್ರುವಂತೆ ನೋಡುತ್ತಿವೆ. ಅವೆರಡೂ ಪಕ್ಷಗಳು ಒಗ್ಗೂಡಿರುವುದರಿಂದ ನಮಗೇನೂ ಚಿಂತೆಯಿಲ್ಲ. ಏನೇ ಸರ್ಕಸ್ ನಡೆಸಿದರೂ ಕಾಂಗ್ರೆಸ್‌ನ್ನು ಸೋಲಿಸಲಾಗದು. ಮತದಾರರು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.
ಈ ಮರು ಚುನಾವಣೆಯಿಂದಾಗಿ ಜೆಡಿಎಸ್ ಮತ್ತು ಬಿಜೆಪಿಯ ಮುಖವಾಡ ಕಳಚಿದೆ. ಅತ್ತ ಮುಸ್ಲಿಮರ ಜತೆ ಹೋಗಿ ರಂಜಾನ್ ಶುಭಾಶಯ ವಿನಿಮಯ ಮಾಡಿಕೊಳ್ಳುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇತ್ತ ಕೋಮುವಾದಿಗಳ ಜತೆ ಹೊಂದಾಣಿಕೆಯನ್ನೂ ಮಾಡಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಜೆಡಿಎಸ್ ದ್ವಂದ್ವ ನಿಲುವು: ಒಂದು ಕಡೆ ತೃತೀಯ ರಂಗ ಸ್ಥಾಪನೆ ಬಗ್ಗೆ ಜಪಿಸುತ್ತಿರುವ ಜೆಡಿಎಸ್ ನಾಯಕರು ರಾಜ್ಯದಲ್ಲಿ ಎನ್‌ಡಿಎ ಅಂಗ ಪಕ್ಷವಾದ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳುತ್ತಿರುವುದು ದ್ವಂದ್ವ ನಿಲುವಾಗಿದೆ. ಈ ವಿಷಯದಲ್ಲಿ ಅವರೇ ನಿಲುವು ಸ್ಪಷ್ಟಪಡಿಸಬೇಕು ಎಂದು ಹೇಳಿದರು.
ಶ್ರೀನಿವಾಸ್ ಕ್ಷಮೆಯಾಚಿಸಲಿ: ಮಂಡ್ಯದ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ವಿರುದ್ಧ ಜೆಡಿಎಸ್ ಮಾಜಿ ಶಾಸಕ ಎಂ.ಶ್ರೀನಿವಾಸ್ ಕೀಳು ಮಟ್ಟದಿಂದ ಮಾತನಾಡಿರುವುದು ಸರಿಯಲ್ಲ. ಸಮಾಜದ ಬಗ್ಗೆ ಅವರಿಗೇನಾದರೂ ಗೌರವ ಇದ್ದಲ್ಲಿ ತಕ್ಷಣ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಪರಮೇಶ್ವರ್ ಒತ್ತಾಯಿಸಿದರು.
ಕಳಂಕಿತ ಎಂದು ಹೇಳಿಲ್ಲ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ ಎಲ್ಲಿಯೂ ಕಳಂಕಿತ ಎಂದು ಹೇಳಿಲ್ಲ. ಸಚಿವ ಸ್ಥಾನ ನಿಭಾಯಿಸಲು ಸಮರ್ಥರಾದ ಅವರಿಗೆ ಸಂಪುಟ ಸೇರಲು ವರಿಷ್ಠರು ಸೂಕ್ತ ಸಮಯದಲ್ಲಿ ಅವಕಾಶ ನೀಡುತ್ತಾರೆ. ಇದು, ಪಕ್ಷದ ಆಂತರಿಕ ವಿಷಯ ಎಂದು ಪರಮೇಶ್ವರ್ ಸಮರ್ಥಿಸಿಕೊಂಡರು.
ಸಮರ್ಥ ಅಭ್ಯರ್ಥಿಗೆ ಮನ್ನಣೆ: ಡಿ.ಕೆ.ಸುರೇಶ್ ಅವರಿಗೆ ಶಿವಕುಮಾರ್ ಸಹೋದರ ಎನ್ನುವ ಕಾರಣದಿಂದ ಪಕ್ಷ ಟಿಕೆಟ್ ನೀಡಿಲ್ಲ. ಯುವ ನಾಯಕರಾದ ಅವರು ಸಮರ್ಥ ಅಭ್ಯರ್ಥಿ ಎನ್ನುವ ಕಾರಣಕ್ಕೆ ಪಕ್ಷ ಮನ್ನಣೆ ನೀಡಿದೆ. ಅವರ ಗೆಲವು ನಿಸ್ಸಂಶಯ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಗೋಷ್ಠಿಯಲ್ಲಿ ರಘುನಂದನ್ ರಾಮಣ್ಣ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.