ಪ್ರತ್ಯೇಕ ರಾಜ್ಯದ ದನಿಗೆ ಖಂಡನೆ
ದೊಡ್ಡಬಳ್ಳಾಪುರ: ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ಘೋಷಣೆಯ ಬೆನ್ನಲ್ಲೆ ರಾಜ್ಯದಲ್ಲಿ ತುಳುನಾಡು, ಕೊಡವ ಲ್ಯಾಂಡ್, ಹೈದ್ರಾಬಾದ್-ಕರ್ನಾಟಕ ಪ್ರಾಂತ್ಯಗಳಲ್ಲಿ ಕೆಲ ಒಕ್ಕೂಟ ವಿರೋಧಿ ಶಕ್ತಿಗಳು ಪ್ರತ್ಯೇಕ ರಾಜ್ಯದ ದನಿಯೆತ್ತಿರುವುದು ಖಂಡನೀಯ. ಹೈದ್ರಾಬಾದ್ ಕರ್ನಾಟಕ ಪ್ರದೇಶ ಹೋರಾಟ ಸಮನ್ವಯ ಸಮಿತಿ ಸ್ವಾತಂತ್ಯ್ರ ದಿನಾಚರಣೆಯಂದು ಪ್ರತ್ಯೇಕ ರಾಜ್ಯದ ಧ್ವಜಾರೋಹಣ ನಡೆಸಲಿದೆ ಎಂದು ಹೇಳಿರುವ ಸಮಿತಿ ಅಧ್ಯಕ್ಷ ಲಕ್ಷ್ಮಣ್ ದಸ್ತಿ ಹೇಳಿಕೆ ಖಂಡನೀಯ. ದಸ್ತಿ ಹೇಳಿಕೆ ಕೂಡಲೇ ವಾಪಸ್ ಪಡೆದು ಅಖಂಡ ಕರ್ನಾಟಕದ ಪರಿಕಲ್ಪನೆಗೆ ಬೆಂಬಲ ನೀಡಬೇಕು. ತಪ್ಪಿದಲ್ಲಿ ಆ.19ರಂದು ಪ್ರತಿಭಟನೆ ನಡೆಸುವುದಾಗಿ ಸ್ವಾಭಿಮಾನಿ ಕನ್ನಡಿಗರ ವೇದಿಕೆ ಎಚ್ಚರಿಕೆ ನೀಡಿದೆ.
ರಸ್ತೆ ಕಾಮಗಾರಿಗೆ
ನಾಗರಾಜ್ ಚಾಲನೆ
ಹೊಸಕೋಟೆ: ತಾಲೂಕಿನ ದೇವನಗೂಂದಿ ಗ್ರಾಮ ವ್ಯಾಪ್ತಿಯ ದೊಡ್ಡದುನ್ನಸಂದ್ರ ಗ್ರಾಮದಲ್ಲಿ ಸುವರ್ಣ ಗ್ರಾಮ ಯೋಜನೆಯಡಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ನಾಗರಾಜ್ ಚಾಲನೆ ನೀಡಿದರು. 37 ಲಕ್ಷ ರು. ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ತಾಲೂಕಿನಲ್ಲಿ 5 ಕೋಟಿ ರು. ವೆಚ್ಚದಲ್ಲಿ 13 ಗ್ರಾಮಗಳನ್ನು ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದ್ದು, ಉಳಿದ 12ಗ್ರಾಮಗಳಲ್ಲೂ ಕಾರ್ಯ ಪ್ರಗತಿಯಲ್ಲಿದೆ. ಯೋಜನೆಯಡಿ ಅವಶ್ಯವಿರುವೆಡೆ ಕಾಂಕ್ರಿಟ್ ರಸ್ತೆ , ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು. ತಾಲೂಕು ಪಂಚಾಯಿತಿ ಅಧ್ಯಕ್ಷೆ ಯಶೋಧಮ್ಮ, ಸದಸ್ಯ ಲಕ್ಷ್ಮಣಗೌಡ, ಜಿಪಂ ಉಪವಿಭಾಗದ ಎಇಇ ಕೃಷ್ಣಮೂರ್ತಿ ಮತ್ತಿತರರಿದ್ದರು.
ಹೃದಯ ಉಚಿತ
ತಪಾಸಣೆ ನಾಳೆ
ಹೊಸಕೋಟೆ: ಪಟ್ಟಣದ ತಮ್ಮೇಗೌಡ ಬಡಾವಣೆಯಲ್ಲಿರುವ ಶ್ರೀನಿವಾಸ ಆಸ್ಪತ್ರೆ ಆವರಣದಲ್ಲಿ ಬೆಂಗಳೂರು ಚಿನ್ಮಯ ನಾರಾಯಣ ಸೂಪರ್ ಸ್ಪೆಷಾಲಿಟಿ ಸೆಂಟರ್ ವತಿಯಿಂದ ಆ.12ರಂದು ಉಚಿತ ಹೃದಯ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ. ಉಚಿತ ರಕ್ತದೊತ್ತಡ, ಇಸಿಜಿ ತಪಾಸಣೆ ಮಾಡಲಾಗುವುದು. ನೋಂದಣಿ ಮತ್ತು ಹೆಚ್ಚಿನ ವಿವರಗಳಿಗೆ ದೂ.9880417317 ಸಂಪರ್ಕಿಸಬಹುದಾಗಿದೆ.
ಕ್ಷೀರಭಾಗ್ಯಕ್ಕೆ ಚಾಲನೆ
ದೊಡ್ಡಬಳ್ಳಾಪುರ: ತಾಲೂಕಿನ ಮಾಚಗೊಂಡನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಲಾಯಿತು. ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ಎಂ.ಕೃಷ್ಣಪ್ಪ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ರವಿಕುಮಾರ್, ಮುಖ್ಯಶಿಕ್ಷಕ ಮುನಿರಾಜು, ಶಿಕ್ಷಕರಾದ ಲಕ್ಷ್ಮೀನಾರಾಯಣ್, ಸುಜಾತ, ಗ್ರಾಮದ ಮುಖಂಡರಾದ ಜಗನ್ನಾಥ್, ವೆಂಕಟೇಶಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

