ಬೆಂಗಳೂರು ಗ್ರಾಮಾಂತರ

ದಲಿತ ಪರ ಕಾಳಜಿ ಇದ್ದಿದ್ದೇ ಆದಲ್ಲಿ ಖರ್ಗೆಗೆ ಸ್ಥಾನ ಬಿಡಿ: ದೇವೇಗೌಡ

Published On :

ಚನ್ನಪಟ್ಟಣ:  ಅಹಿಂದ ಮೂಲಕ ದಲಿತರನ್ನು ಟ್ರಂಪ್ ಕಾರ್ಡ್ ಮಾಡಿಕೊಂಡು  ಮೇಲೆ ಬಂದಿರುವ ಸಿದ್ದರಾಮಯ್ಯಗೆ  ನಿಜವಾಗಿಯೂ ದಲಿತ ಪರ ಕಾಳಜಿ ಇದ್ದಿದ್ದೇ ಆದಲ್ಲಿ 9 ಬಾರಿ ಗೆದ್ದು ಮುಖ್ಯಮಂತ್ರಿ ಸ್ಥಾನ ವಂಚಿತವಾಗಿರುವ ಮಲ್ಲಿಕಾರ್ಜುನ ಖರ್ಗೆಅವರಿಗೆ ಅವಕಾಶ ನೀಡಲು ತಮ್ಮ ಸ್ಥಾನಕ್ಕೆ ಕೂಡಲೇ ರಾಜಿನಾಮೆ ನೀಡಲಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸವಾಲು ಹಾಕಿದರು.
ಇಲ್ಲಿನ ವಿಶ್ವಪ್ರೇಮಿ ಸಮಾರಂಭ ಭವನದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಮಾತು ಮಾತಿಗೂ ದಲಿತರ ಉದ್ದಾರಕ್ಕಾಗಿ ಇದ್ದೇವೆ ಎನ್ನುತ್ತಿದೆಯೇ ಹೊರತು ಪ್ರಮಾಣಿಕವಾಗಿ ದಲಿತರ ಪರವಾದ ಕಾಳಜಿ ಹೊಂದಿಲ್ಲ ಲೇವಡಿ ಮಾಡಿದರು.
ದೇಶಕ್ಕೆ ಸಂವಿಧಾನ ನೀಡಿದ ಅಂಬೇಡ್ಕರ್‌ರಂತಹ ಮಹನೀಯರನ್ನು ಲೋಕಸಭೆಗೆ ಕಳಿಸದಂತೆ ಕುತಂತ್ರ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ದಲಿತ ಸಮುದಾಯ ತಕ್ಕ ಪಾಠಕಲಿಸದ ಹೊರತು ದೇಶಕ್ಕೆ ಭವಿಷ್ಯವಿಲ್ಲ ಎಂದು ಕಿಡಿಕಾರಿದರು.
ಕಾಳಜಿ ತೋರಿಲ್ಲ: ಸ್ವಾತಂತ್ರ ಪೂರ್ವದಿಂದ ದಲಿತರ ಮತ ಕಬಳಿಸುತ್ತಾ ಬಂದಿರುವ ಕಾಂಗ್ರೆಸ್ ಪಕ್ಷ ದಲಿತರ ಅಭಿವೃದ್ಧಿಗೆ ಕನಿಷ್ಠ ಕಾಳಜಿಯನ್ನೂ ತೋರಿಲ್ಲ, ದಲಿತರ ಮತಪಡೆದು ನಿರಂತರವಾಗಿ ಅಧಿಕಾರ ಅನುಭವಿಸುತ್ತಾ ಬಂದಿರುವ ಕಾಂಗ್ರೆಸ್‌ನಂತಹ ಗೋಮುಖ ವ್ಯಾಘ್ರರ ಬಗ್ಗೆ ಸದಾಕಾಲ ಎಚ್ಚರದಿಂದಿರುವಂತೆ ಸಲಹೆ ಇತ್ತರು.
ನಮ್ಮ ಪಕ್ಷ ಅಧಿಕಾರದಲ್ಲಿ ಕೆಲವೇ ತಿಂಗಳು ಇದ್ದರೂ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಪ್ರಗತಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು ನಮ್ಮಲ್ಲಿನ ಅರ್ಧಪಾಲೂ ಕಾಂಗ್ರೆಸ್ ಕೊಡುಗೆ ನೀಡಿಲ್ಲ, ಮಂಡಲ್ ವರದಿಯನ್ನು ಜಾರಿಗೆ ತಂದು ಶೋಷಿತ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಿದ್ದು ನಮ್ಮ ಪಕ್ಷ ನಮ್ಮದು ಎಂದರು.
ಜೀವಾಳ: ರೈತರು, ಶೋಷಿತರು ಮತ್ತು ಅಲ್ಪಸಂಖ್ಯಾತರ ಹಿತಕ್ಕಾಗಿ ಸದಾಕಾಲ ಹೋರಾಡುತ್ತಿರುವ ಜೆಡಿಎಸ್ ಪಕ್ಷಕ್ಕೆ ಶೋಷಿತ ಸಮುದಾಯದ ಮತದಾರರೇ ಜೀವಾಳವಾಗಿದ್ದು ನೀವು ಕೈ ಬಿಟ್ಟರೆ ನಿಮ್ಮ ಹಕ್ಕುಭಾದ್ಯತೆಗಳಿಗಾಗಿ ಸದನದ ಹೊರಗೆ ಮತ್ತು ಒಳಗೆ ಹೋರಾಡುವವರು ಇಲ್ಲದಂತಾಗುತ್ತದೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ಜೆಡಿಎಸ್ ಮುಖಂಡರಾದ ಅಬ್ದುಲ್ ಅಜಿಂ, ವಿಧಾನ ಪರಿಷತ್ ಸದಸ್ಯ ಎ.ಕೃಷ್ಣಪ್ಪ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿಭಾಗದ ರಾಜ್ಯಾಧ್ಯಕ್ಷ ಅನ್ನದಾನಿ, ರಾಜ್ಯ ಉಪಾಧ್ಯಕ್ಷ ಸದಾನಂದ, ಮಾಜಿ ಶಾಸಕ  ಅಶ್ವತ್ಥ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.