ಬೆಂಗಳೂರು ಗ್ರಾಮಾಂತರ

ನಿಮ್ಮ ಸೇವಕನಾಗಿ ಕೆಲಸ ಮಾಡುವೆ: ಡಿ.ಕೆ.ಸುರೇಶ್

Published On :

ಮತ್ತೀಕೆರೆ ಜಯರಾಮ್
ರಾಮನಗರ: ಯಾವ ವ್ಯಕ್ತಿ ತನಗೆ ಬೇಡವೆಂದು ತಿರಸ್ಕರಿಸಿದ ಅಧಿಕಾರವನ್ನು ಈಗ ತನ್ನದೇ ಕುಟುಂಬಕ್ಕೆ ದಕ್ಕಿಸಿಕೊಡಲು ಕಸರತ್ತು ನಡೆಸುತ್ತಿದ್ದಾರೋ ಅವರನ್ನು ಧಿಕ್ಕರಿಸಿ ಈ ಬಾರಿ ನನಗೊಂದು ಅವಕಾಶ ಕೊಟ್ಟು ನೋಡಿ. ನಿಮ್ಮ ಸೇವಕನಾಗಿ ಕೆಲಸ ಮಾಡಿ ತೋರುವೆ...
ಇದು, ಚೊಚ್ಚಲ ಚುನಾವಣೆ ಎದುರಿಸುತ್ತಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರು ತಮ್ಮ ಪ್ರಚಾರದುದ್ದಕ್ಕೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಚಾಟಿ ಬೀಸುತ್ತಲೇ ಮತದಾರರನ್ನು ವಿನಂತಿಸಿದ ಪರಿ.
ರಾಮನಗರ ಮತ್ತು ಕನಕಪುರ ತಾಲೂಕಿನ ವಿವಿಧೆಡೆ ಸೋಮವಾರ ಪ್ರಚಾರ ಸಭೆಯಲ್ಲಿ ಮಾತನಾಡಿ, ಪ್ರತಿಪಕ್ಷವನ್ನು ಮೊನಚು ಮಾತುಗಳಿಂದ ಟೀಕಿಸುವ ಜತೆಗೆ ಕಾಂಗ್ರೆಸ್ ಸಾಧನೆ, ಬದ್ಧತೆಯನ್ನು ವಿವರಿಸುತ್ತಾ ಮತದಾರರ ಮನ ಗೆಲ್ಲಲು ಯತ್ನಿಸಿದರು.
ಕಣ್ಣೀರಿಗೆ ಕರಗಬೇಡಿ: ಸುಳ್ಳು ಹೇಳೋರಿಗೇ ಹೆಚ್ಚು ಮನ್ನಣೆ ನೀಡಿ, ಅವರ ಬಗ್ಗೆಯೇ ಜಾಸ್ತಿ ಕಾಳಜಿ ವಹಿಸುತ್ತಾ ಬಂದಿದ್ದೀರಿ. ಕಣ್ಣೀರಿಗೆ ಮತ್ತೆ ಮತ್ತೆ ಕರಗಬೇಡಿ. ಅನ್ಯರಿಗೆ ಅಧಿಕಾರ ಮುಖ್ಯವಾಗಿದೆ. ನಾವು ಹೊರಗೆಲ್ಲೋ ಹೋದಾಗ ಹಾಸನ, ಶಿವಮೊಗ್ಗ, ಹುಬ್ಬಳ್ಳಿಯವನೆಂದು ಹೇಳಿಕೊಳ್ಳುವುದಿಲ್ಲ. ನಾನು ಕನಕಪುರದ, ನಿಮ್ಮ ಮನೆ ಮಗನಾಗಿದ್ದೇನೆ. ಈ ತಾಲೂಕಿನ ಜನತೆ ನನಗೆ ಅತಿ ದೊಡ್ಡ ಅಂತರದ ಮುನ್ನಡೆ ನೀಡಿ ಸ್ವಾಭಿಮಾನ ಮೆರೆಯಬೇಕು ಎಂದು ಮನವಿ ಮಾಡಿದರು ಸುರೇಶ್ ಕುಮಾರ್.
ಯಾರಿಗೆ ಬೇಕಿತ್ತು ಹೇಳಿ?: ಚುನಾವಣೆ ಎದುರಾಗುವಂತೆ ಮಾಡಿದ್ದು ನಾವ್ಯಾರೂ ಅಲ್ಲ. ಚುನಾವಣೆ ತಂದೊಡ್ಡಿದವರೇ ಈಗ ಕಾಂಗ್ರೆಸ್ ಅನ್ನು ದೂಷಿಸುತ್ತಿದ್ದಾರೆ. ಅಲ್ಪಾವಧಿಗೆ ಎದುರಾಗಿರುವ ಈ ಚುನಾವಣೆ ಯಾರಿಗೂ ಬೇಕಿರಲಿಲ್ಲ ಎಂದು ಹೇಳಿದರು.
ಸಹೋದರ ಡಿ.ಕೆ.ಶಿವಕುಮಾರ್ ಅವರೆದುರಿಸಿದ ಎಲ್ಲ ಚುನಾವಣೆಗಳಲ್ಲೂ ಸಾರಥಿಯಾಗಿ ಕೆಲಸ ಮಾಡಿರುವ ಸುರೇಶ್ ಅಣ್ಣನಿಗಿಂತ ತಾನೇನೂ ಕಮ್ಮಿಯಿಲ್ಲ ಎನ್ನುವಂತೆ ಪ್ರಚಾರದಲ್ಲಿ ತೊಡಗಿದ್ದಾರೆ. ಸುರೇಶ್ ಅವರ ಭಾಷಣದಲ್ಲೂ ಅಣ್ಣನ ಗತ್ತು, ಗೈರತ್ತು ವಿಜೃಂಭಿಸುತ್ತಿದೆ.



ಸುಳ್ಳು ಹೇಳೋರಿಗೇ ಹೆಚ್ಚು ಮನ್ನಣೆ ನೀಡಿ, ಅವರ ಬಗ್ಗೆಯೇ ಜಾಸ್ತಿ ಕಾಳಜಿ ವಹಿಸುತ್ತಾ ಬಂದಿದ್ದೀರಿ. ಕಣ್ಣೀರಿಗೆ ಮತ್ತೆ ಮತ್ತೆ ಕರಗಬೇಡಿ. ಅನ್ಯರಿಗೆ ಅಧಿಕಾರ ಮುಖ್ಯವಾಗಿದೆ. ನಾವು ಹೊರಗೆಲ್ಲೋ ಹೋದಾಗ ಹಾಸನ, ಶಿವಮೊಗ್ಗ, ಹುಬ್ಬಳ್ಳಿಯವನೆಂದು ಹೇಳಿಕೊಳ್ಳುವುದಿಲ್ಲ. ನಾನು ಕನಕಪುರದ, ನಿಮ್ಮ ಮನೆ ಮಗನಾಗಿದ್ದೇನೆ. ಈ ತಾಲೂಕಿನ ಜನತೆ ನನಗೆ ಅತಿ ದೊಡ್ಡ ಅಂತರದ ಮುನ್ನಡೆ ನೀಡಿ ಸ್ವಾಭಿಮಾನ ಮೆರೆಯಬೇಕು
ಟಿ  ಡಿ.ಕೆ. ಸುರೇಶ್



ನಾನು ಕೆಂಪೇಗೌಡನ ಮಗ
ಕನಕಪುರ ತಾಲೂಕಿನಲ್ಲಿ ಕೊಟ್ಟ ಮಾತಿನಂತೆ ಕೆರೆ ತುಂಬಿಸುವ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಮಾವತ್ತೂರು ಕೆರೆ ತುಂಬಿಸುವ ವಿಷಯದಲ್ಲಿ ಸಂಶಯವೇ ಬೇಡ. ಕೆರೆ ತುಂಬಿಸದಿದ್ದರೆ 'ನಾನು ಕೆಂಪೇಗೌಡನ ಮಗನೇ ಅಲ್ಲ' ಎಂದು ಸುರೇಶ್ ಶಪಥ ಮಾಡಿದರು.
ಕನಕಪುರ ತಾಲೂಕಿನ ತೋಕಸಂದ್ರದ ಪ್ರಚಾರ ಸಭೆ ವೇಳೆ ರೈತರೊಬ್ಬರು ಮಾವತ್ತೂರು ಕೆರೆ ತುಂಬಿಸುವುದು ಯಾವಾಗ ಎಂದು ಹಾಕಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಸಂಸದ ಆಗುತ್ತೇನೋ ಇಲ್ಲವೋ ಮಾವತ್ತೂರು ಕೆರೆಯಂತೂ ತುಂಬಿಯೇ ತುಂಬುತ್ತದೆ ಎಂದು ಭರವಸೆ ನೀಡಿದರು.
ಅಕ್ಕಿ ವಿತರಣೆ ವಿಚಾರಣೆ
ನಿಮ್ಗೆ ಅಕ್ಕಿ ಕೊಟ್ರಾ? ಎಷ್ಟು ಕೆ.ಜಿ. ಕೊಟ್ರು? ಎಷ್ಟು ಕಾಸು ಈಸ್ಕೊಂಡ್ರು ಎಂದು ಪ್ರಚಾರದುದ್ದಕ್ಕೂ ಸುರೇಶ್ ಮಹಿಳೆಯರತ್ತ ಪ್ರಶ್ನೆ ಹಾಕಿ, ಉತ್ತರ ಪಡೆದುಕೊಳ್ಳುವುದರೊಂದಿಗೆ ಮತ ಬೇಟೆ ನಡೆಸುತ್ತಿದ್ದಾರೆ.
ಅಕ್ಕಿ ವಿತರಣೆಯಲ್ಲಿನ ಲೋಪದ ಬಗ್ಗೆ ಅಷ್ಟಾಗಿ ದೂರುಗಳು ಕೇಳಿಬರಲಿಲ್ಲ. ಆದರೆ, ನಮ್ಗೆ ಬಿಪಿಎಲ್ ಕಾರ್ಡ್ ಕೊಟ್ಟಿಲ್ಲವೆಂದು ಹಲವೆಡೆ ಆರೋಪ ವ್ಯಕ್ತವಾಯಿತು. ಎಲೆಕ್ಷನ್ ಮುಗಿದ ಮೇಲೆ ಅದನ್ನೆಲ್ಲಾ ನಾನೇ ಸರಿಪಡಿಸಿಕೊಡ್ತೇನೆ ಎಂದು ಸುರೇಶ್ ಭರವಸೆ ನೀಡಿದರು.
ಸದ್ದಿಲ್ಲದೆ ಸಂಘಟನೆ
ಅಭ್ಯರ್ಥಿ ಡಿ.ಕೆ.ಸುರೇಶ್ ತಮ್ಮ ಒಡ್ಡೋಲಗದ ಸಮೇತ ಗ್ರಾಪಂ ಕೇಂದ್ರ ಸ್ಥಾನಗಳಲ್ಲಿ ಪ್ರಚಾರ ಸಭೆಯೊಂದಿಗೆ ಮತದಾರರಿಗೆ ಲಗ್ಗೆಯಿಡುತ್ತಿದ್ದರೆ, ಇತ್ತ ಅವರ ಸಂಬಂಧಿ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ರವಿ ಸದ್ದಿಲ್ಲದೆ ಸಂಘಟನೆಯಲ್ಲಿ ತೊಡಗಿದ್ದರು.
ಸುರೇಶ್ ಅವರನ್ನೇ ಹಿಂಬಾಲಿಸಿಕೊಂಡು ಹೋದರೂ ಅವರ ಜತೆ ಎಲ್ಲೂ ವೇದಿಕೆ ಏರುವ ಗೋಜಿಗೆ ರವಿ ಹೋಗಲಿಲ್ಲ. ಪಕ್ಷದ ಮುಖಂಡರ ಜತೆ ಸಮಾಲೋಚಿಸಿ ಕಾರ್ಯತಂತ್ರ ಹೆಣೆಯುವುದು, ಅನ್ಯ ಪಕ್ಷಗಳ ಮುಖಂಡರಿಗೆ ಗಾಳ ಹಾಕುವುದರೊಟ್ಟಿಗೆ ಚುನಾವಣಾ ಉಸ್ತುವಾರಿಯನ್ನು ರವಿ ನಿಭಾಯಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.