ಬೆಂಗಳೂರು ಗ್ರಾಮಾಂತರ

ಬೇಡಿಕೆ - ಸಂಧಾನ ನಡುವೆ ಸ್ವಾತಂತ್ರ್ಯೋತ್ಸವ

Published On :

ಕ.ಪ್ರ.ವಾರ್ತೆ   ದೊಡ್ಡಬಳ್ಳಾಪುರ   ಆ.14
ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಕಾರ್ಯನಿರ್ವಹಿಸಬೇಕು. ಉಪವಿಭಾಗಾಧಿಕಾರಿ ಕಚೇರಿ ಕೂಡಲೇ ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರವಾಗಬೇಕು ಎಂಬ ಕೂಗು ಪ್ರಬಲವಾಗಿರುವ ಬೆನ್ನಲ್ಲೇ ಸ್ವಾತಂತ್ರ್ಯೋತ್ಸವ ಬಂದಿದೆ.
ದೊಡ್ಡಬಳ್ಳಾಪುರಕ್ಕೆ ಅಧಿಕಾರದ ಸ್ವಾಯತ್ತತೆ ದೊರಕದ ಹೊರತು, ದೊಡ್ಡಬಳ್ಳಾಪುರದಲ್ಲಿ ಉಪವಿಭಾಗಾಧಿಕಾರಿಗಳು ಧ್ವಜಾರೋಹಣ ಮಾಡುವುದು ಬೇಡ ಎಂಬ ಪ್ರಬಲ ಆಗ್ರಹ ಕೇಳಿ ಬಂದಿತ್ತು. ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಈ ಆಗ್ರಹ ಮಾಡುತ್ತಲೇ ಎಚ್ಚಿತ್ತುಕೊಂಡ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳು ಮಧ್ಯೆ ಪ್ರವೇಶಿಸಿ ಸಂಧಾನ ಸಭೆ ಕೂಡ ನಡೆಸಿದ್ದಾರೆ. ಧ್ವಜಾರೋಹಣಕ್ಕೆ ಅಡ್‌ಡಿ ಪಡಿಸದಿರುವ ಸಲಹೆ ನೀಡಿದ್ದಾರೆ. ಕಾನೂನು ಭಂಗವಾಗದಂತೆ ನಡೆದುಕೊಳ್ಳಲು ಮನವಿ ಮಾಡಿದ್ದಾರೆ. ಇಷ್ಟಾಗಿಯೂ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ತನ್ನ ನಿರ್ಧಾರ ಪ್ರಕಟಿಸಿಲ್ಲ.
ಹೀಗಾಗಿ ಸಹಜವಾಗಿಯೇ ಈ ಸ್ವಾತಂತ್ರ್ಯೋತ್ಸವ ಗಮನ ಸೆಳೆದಿದೆ. ದೊಡ್ಡಬಳ್ಳಾಪುರದ ಜನರ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕಿದೆ. ಕಳೆದ 57ವರ್ಷಗಳಿಂದ ಬೆಂಗಳೂರಿನಲ್ಲೇ ಉಳಿದುಕೊಂಡಿರುವ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಗಳ ಕಚೇರಿ ಕೂಡಲೇ ಅದರ ಕೇಂದ್ರ ಸ್ಥಾನಕ್ಕೆ ಬರಬೇಕು. ಎಲ್ಲ ಹಂತದಲ್ಲೂ ತನ್ನದೇ ಆದ ಪ್ರತಿಷ್ಠೆ ಮತ್ತು ಘನತೆ ಹೊಂದಿರುವ ದೊಡ್ಡಬಳ್ಳಾಪುರವನ್ನು ಆಡಳಿತ ಯಂತ್ರ ಪದೇ ಪದೇ ನಿರ್ಲಕ್ಷಿಸುತ್ತಿರುವುದರ ವಿರುದ್ಧ ದೊಡ್ಡ ಆಕ್ರೋಶ ವ್ಯಕ್ತವಾಗುತ್ತಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೇಂದ್ರವನ್ನಾಗಿ ದೊಡ್ಡಬಳ್ಳಾಪುರ ನಗರವನ್ನು ಘೋಷಿಸಬೇಕು. ತನ್ಮೂಲಕ ಜಿಲ್ಲಾ ಕೇಂದ್ರವನ್ನು ಜಿಲ್ಲೆಯ ವ್ಯಾಪ್ತಿಯ ಹೊರಗೆ ಹೊಂದಿರುವ ಏಕೈಕ ನತದೃಷ್ಟ ಜಿಲ್ಲೆ ಎಂಬ ಹಣೆಪಟ್ಟಿಯಿಂದ ಹೊರಬರಬೇಕು. ಏಕೈಕ ಉಪವಿಭಾಗ ಕೇಂದ್ರದ ವ್ಯಾಪ್ತಿಯಲ್ಲೇ ಜಿಲ್ಲೆಯ 4 ತಾಲೂಕುಗಳು ಕಳೆದ ಅರ್ಧ ಶತಮಾನದಿಂದ ಇರುವುದು. ಒಂದು ಹಂತದಲ್ಲಿ ದೊಡ್ಡಬಳ್ಳಾಪುರ ಉಪವಿಭಾಗ ವ್ಯಾಪ್ತಿಯಲ್ಲಿ ಬೆಂಗಳೂರು ನಗರದ ಕೆಲ ಕಂದಾಯ ತಾಲೂಕುಗಳು ಸೇರಿದ್ದವು ಎಂಬುದು ಇತಿಹಾಸ.
ಹೀಗಿರುವಾಗ ದೊಡ್ಡಬಳ್ಳಾಪುರಕ್ಕೆ ಮಲತಾಯಿ ಧೋರಣೆ ಸರಿಯಲ್ಲ. ಸಲ್ಲಬೇಕಾದ ಘನತೆಯನ್ನು, ಅವಕಾಶಗಳನ್ನು ಕೇಳುತ್ತಿರುವುದು ನ್ಯಾಯ ಸಮ್ಮತವಾಗಿದೆ. ಇದನ್ನು ಆಧಿಕಾರಶಾಹಿ ಯಾವತ್ತೋ ಮಾಡಬೇಕಿತ್ತು. ಆದರೆ ಇಲ್ಲಿಯವರೆಗೆ ಮಾಡಿಲ್ಲ. ಈಗಲಾದರೂ ಮಾಡಿ ಎಂದು ಜನ ಒಕ್ಕೊರಲ ದನಿಯೆತ್ತಿದ್ದಾರೆ. ಜನ ಸಾಮಾನ್ಯರ ಹೋರಾಟ ಇದೀಗ ಬೆಂಗಳೂರು ವ್ಯಾಪ್ತಿಗೂ ವಿಸ್ತರಣೆಯಾಗಿದೆ. ಹೀಗಿರುವಾಗ ಈ ಬಾರಿಯ ಸ್ವಾತಂತ್ರ್ಯೋತ್ಸವದಲ್ಲಿ ದೊಡ್ಡಬಳ್ಳಾಪುರದ ಜನರ ಒಕ್ಕೊರಲ ಒತ್ತಾಯ ದೊಡ್‌ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಿ, ಉಪವಿಭಾಗಾಧಿಕಾರಿಗಳ ಕಚೇರಿಯನ್ನು ದೊಡ್‌ಡಬಳ್ಳಾಪುರದಲ್ಲಿ ಕಾರ್ಯಾರಂಭ ಮಾಡಿಸಿ ಎಂಬುದಾಗಿದೆ.
ನಿರೀಕ್ಷೆ: ಈಗಾಗಲೇ ಸಂಧಾನಕ್ಕೆ ಕರೆದಿದ್ದ ಜಿಲ್ಲಾಧಿಕಾರಿಗಳು ನ್ಯಾಯಯುತ ಬೇಡಿಕೆ ಸದ್ಯದಲ್ಲಿಯೇ ಈಡೇರಲಿದೆ ಎಂಬ ಭರವಸೆಯ ಮಾತುಗಳನ್ನಾಡಿದ್ದಾರೆ. ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಇದಕ್ಕೊಂದು ಸ್ಪಷ್ಟ ದಿಕ್ಕು-ದೆಸೆ ಪ್ರಾಪ್ತವಾಗುತ್ತದೆಯೇನೋ ಎಂಬ ನಿರೀಕ್ಷೆ ಎಲ್ಲರಲ್ಲಿದೆ.
ಉಪವಿಭಾಗಾಧಿಕಾರಿ ಧ್ವಜಾರೋಹಣ: ಈ ಮಧ್ಯೆ ಇಲ್ಲಿನ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ನೇತೃತ್ವದಲ್ಲಿ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ಆ.15ರ ಗುರುವಾರ ಬೆಳಗ್ಗೆ 9 ಗಂಟೆಗೆ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಆಯೋಜನೆಗೊಂಡಿದೆ. ಶಿಷ್ಟಾಚಾರದಂತೆ ಉಪವಿಭಾಗಾಧಿಕಾರಿ ಡಾ.ಎಂ.ಮಹೇಶ್ ಧ್ವಜಾರೋಹಣ ಮಾಡಲಿದ್ದಾರೆ. ಶಾಸಕ ಟಿ.ವೆಂಕಟರಮಣಯ್ಯ ಅಧ್ಯಕ್ಷತೆ ವಹಿಸಲಿದ್ದು, ಕೇಂದ್ರ ಸಚಿವ ಎಂ.ವೀರಪ್ಪಮೊಯ್ಲಿ, ವಿಧಾನಪರಿಷತ್ ಸದಸ್ಯ ಇ.ಕೃಷ್ಣಪ್ಪ, ಪುಟ್ಟಣ್ಣ, ಜಿ.ಪಂ ಉಪಾಧ್ಯಕ್ಷ ಎನ್.ಹನುಮಂತೇಗೌಡ, ತಾ.ಪಂ ಅಧ್ಯಕ್ಷ ಡಿ.ನಾಗರಾಜ್ ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.