ಯೋಗೇಶ್ವರ್ಗೆ ಅಧಿಕಾರದಲ್ಲಿರುವ ಪಕ್ಷದ ಕಡೆ ಹೋಗುವ ಚಾಳಿ
ರಾಮನಗರ: ಅಧಿಕಾರದಲ್ಲಿರುವ ಪಕ್ಷದ ಕಡೆ ಹೋಗುವ ಹಳೆಯ ಚಾಳಿಯನ್ನೇ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಮುಂದುವರೆಸಿದ್ದಾರೆ. ಬಿಜೆಪಿಗೆ ಹೋದಾಗ ಆದಷ್ಟು ಲಾಭ ಅವರಿಗೆ ಕಾಂಗ್ರೆಸ್ ಬೆಂಬಲಿಸುವುದರಿಂದ ಸಿಗದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ರಾಮನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಿಕ್ಕಮುದವಾಡಿ, ದೊಡ್ಡಮುದವಾಡಿ, ರೇವಣಸಿದ್ದೇಶ್ವರ ಬೆಟ್ಟ, ರಾಮನಗರ ನಗರಸಭಾ ವ್ಯಾಪ್ತಿಯಲ್ಲಿ ಗುರುವಾರ ಮತಯಾಚನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಾಲಿಗೆ ಯೋಗೇಶ್ವರ್ ನ್ಯಾಪ್ಕಿನ್ ಆಗುತ್ತಾರಷ್ಟೇ ಎಂದರು.
ಎಳ್ಳು ನೀರು: ಮರು ಚುನಾವಣೆಯಲ್ಲಿ ಯೋಗೇಶ್ವರ್ ಅವರನ್ನು ಬಳಸಿಕೊಂಡು, ಅದಾದ ಬಳಿಕ ಕೊಟ್ಟ ಭರವಸೆಗಳಿಗೆ ಕಾಂಗ್ರೆಸ್ ನಾಯಕರು ಎಳ್ಳು ನೀರು ಬಿಡುತ್ತಾರೆ. ಕ್ಷೇತ್ರದ ಅಭಿವೃದ್ಧಿ ಮತ್ತು ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಬೆಂಬಲ ನೀಡುವ ಕಾಂಗ್ರೆಸ್ ಭರವಸೆ ಅನುಷ್ಠಾನ ಅನುಮಾನ ಎಂದು ತಿಳಿಸಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ಆ ಪಕ್ಷ ಸೇರಿಕೊಂಡ ಯೋಗೇಶ್ವರ್ ಅಧಿಕಾರ ಗಿಟ್ಟಿಸಿ, ರಾಜಕೀಯ ಮತ್ತು ಆರ್ಥಿಕವಾಗಿ ಸದೃಢರಾದರು. ಈಗಲೂ ಅದೇ ಗತವೈಭವ ಮರುಕಳಿಸುತ್ತದೆ ಎಂದು ಅವರೇನಾದರೂ ಭಾವಿಸಿದ್ದರೆ ಅದು ಭ್ರಮೆ ಆಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.
ಗೆಲವಿಗೆ ಅಡ್ಡಿಯಿಲ್ಲ: ರಾಮನಗರ ಜಿಲ್ಲೆಯನ್ನು ಒಳಗೊಂಡ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳನ್ನು ತನ್ನ ತೆಕ್ಕೆಯಲ್ಲೇ ಉಳಿಸಿಕೊಳ್ಳುವಲ್ಲಿ ಜೆಡಿಎಸ್ ಯಶಸ್ವಿಯಾಗಲಿದೆ. ಕಾಂಗ್ರೆಸ್ ನಾಯಕರ ಯಾವ ಕಸರತ್ತೂ ಈ ಬಾರಿ ಫಲಿಸುವುದಿಲ್ಲ ಎಂದು ಅವರು ಪ್ರಚಾರ ಸಭೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕರು ಲಜ್ಜೆಗೇಡಿ ರಾಜಕಾರಣ ನಡೆಸುತ್ತಿದ್ದಾರೆ. ಉಭಯ ಕ್ಷೇತ್ರಗಳ ಮತದಾರರು ಜೆಡಿಎಸ್ ಕೈ ಹಿಡಿಯುವ ಮೂಲಕ ಕುಟಿಲ ರಾಜಕಾರಣಕ್ಕೆ ತಕ್ಕ ಉತ್ತರ ನೀಡಲಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲವಿಗೆ ಯಾವುದೇ ಅಡ್ಡಿ ಇಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು. ಮಾಜಿ ಶಾಸಕ ಮರಿಲಿಂಗೇಗೌಡ, ಜಿ.ಪಂ. ಅಧ್ಯಕ್ಷ ಎಚ್.ಸಿ.ರಾಜು, ಎಚ್.ಎಲ್.ಚಂದ್ರ, ಕೆ.ದೇವೇಗೌಡ ಮತ್ತಿತರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

