ಸಿದ್ದರಾಮಯ್ಯ ಅವಧಿ ಪೂರ್ಣಗೊಳಿಸಿದರೆ ಪ್ರತಿಪಕ್ಷಗಳು ನಿರ್ನಾಮ: ಸೊರಕೆ
ಕ.ಪ್ರ.ವಾರ್ತೆ ಟಿ ರಾಮನಗರ ಟಿ ಆ. 16
ಜನಪರ ಆಡಳಿತ ನೀಡುತ್ತಿರುವ ಸಿದ್ದರಾಮಯ್ಯ ಅವರೇನಾದರೂ 5 ವರ್ಷದ ಅವಧಿ ಪೂರ್ಣಗೊಳಿಸಿದರೆ ಪ್ರತಿಪಕ್ಷಗಳು ನಿರ್ನಾಮ ಆಗುವುದು ಖಚಿತ. ಆ ಭೀತಿಯಿಂದಲೇ ಕಾಂಗ್ರೆಸ್ಸೇತರ ಪಕ್ಷಗಳ ನಡುವೆ ಅಪವಿತ್ರ ಮೈತ್ರಿ ಏರ್ಪಟ್ಟಿದೆ ಎಂದು ಸಚಿವ ವಿನಯಕುಮಾರ ಸೊರಕೆ ಆರೋಪಿಸಿದರು.
ಜಾತ್ಯತೀತ ತತ್ವ, ಸಿದ್ಧಾಂತದ ಮೇಲೆ ನಂಬಿಕೆಯಿಟ್ಟ ಎಲ್ಲ ಮತದಾರರು ಪ್ರತಿಪಕ್ಷಗಳ ಅಪವಿತ್ರ ಮೈತ್ರಿಯನ್ನು ವಿರೋಧಿಸುತ್ತಿದ್ದಾರೆ. ಅಂತಹವರ ಸಾರಾಸಗಟು ಬೆಂಬಲದೊಂದಿಗೆ ಲೋಕಸಭೆ ಉಭಯ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲವು ನಿಶ್ಚಿತ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಗೆ ಶಕ್ತಿಯಿಲ್ಲ: ರಾಷ್ಟ್ರೀಯ ಪಕ್ಷವಾದ ಬಿಜೆಪಿಗೆ 2 ಕ್ಷೇತ್ರಗಳ ಮರು ಚುನಾವಣೆಗೆ ಅಭ್ಯರ್ಥಿಗಳನ್ನು ಹಾಕಲು ಶಕ್ತಿ ಇಲ್ಲದಂತಾಗಿದೆ. ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳನ್ನು ಸಹಿಸದ ಪ್ರತಿಪಕ್ಷಗಳು ಒಳ ಒಪ್ಪಂದ ಮಾಡಿಕೊಂಡು ಕುತಂತ್ರ ರಾಜಕಾರಣ ಮಾಡುತ್ತಿವೆ. ಇವರ ಆಟಕ್ಕೆ ಮರು ಚುನಾವಣೆಯಲ್ಲೇ ತಕ್ಕಪಾಠವಾಗಲಿದೆ ಎಂದರು.
ಚುನಾವಣೆಗೆ ಕಾರಣ: ಜಿಲ್ಲೆಯಲ್ಲಿ ಪದೇ ಪದೇ ಮರು ಚುನಾವಣೆ ನಡೆಯಲು ಜೆಡಿಎಸ್ ಕಾರಣವಾಗಿದೆ. ಮಾದರಿ ನೀತಿ ಸಂಹಿತೆ ಜಾರಿಯಾಗುವುದರಿಂದ ಸರ್ಕಾರಿ ಆಡಳಿತ ಯಂತ್ರ ಸ್ಥಗಿತಗೊಂಡು, ಜನ ಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಸಿಗದಂತಾಗಿದೆ. ಕ್ಷೇತ್ರದ ಅಭಿವೃದ್ಧಿಯೂ ಹಿನ್ನಡೆಯಾಗುತ್ತಿದೆ ಎಂದು ಸೊರಕೆ ಆರೋಪಿಸಿದರು.
ಜನರ ಸಮಸ್ಯೆಗಳನ್ನು ಅರಿತು, ಪರಿಹರಿಸಲು ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರಿಂದ ಸಾಧ್ಯವಿಲ್ಲ. ಜನರ ಮಧ್ಯೆ ಇದ್ದು ಕೆಲಸ ಮಾಡುವ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು. ಗೋಷ್ಠಿಯಲ್ಲಿ ಕೆಪಿಸಿಸಿ ಉಪಾಧ್ಯಕ್ಷೆ ರಾಣಿ ಸತೀಶ್, ಕೆಂಚೇಗೌಡ, ನವೀನ್ ಭಂಡಾರಿ ಹಾಜರಿದ್ದರು.
ತೇಜಸ್ವಿನಿಗೌಡ ದೂರವಿಡಲಾಗಿದೆ
ಮಾಜಿ ಸಂಸದೆ ತೇಜಸ್ವಿನಿಗೌಡ ಅವರೇನಾದರೂ ಪ್ರಚಾರಕ್ಕೆ ಬಂದರೆ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಮತಗಳು ಕಡಿಮೆಯಾಗುತ್ತವೆ. ಆ ಭಯದಿಂದಲೇ ಅವರನ್ನು ಪ್ರಚಾರದಿಂದ ದೂರವಿಡಲಾಗಿದೆ ಎಂದು ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಹೇಳಿದರು.
ಸುದ್ದಿಗಾರರು ವಿನಯಕುಮಾರ ಸೊರಕೆ ಅವರಿಗೆ ಹಾಕಿದ ಪ್ರಶ್ನೆಗೆ ಉತ್ತರಿಸಿದ ಲಿಂಗಪ್ಪ, ಬೆಂಗಳೂರು ದಕ್ಷಿಣದಲ್ಲಿ ಕಾಂಗ್ರೆಸ್ 1 ಲಕ್ಷಕ್ಕೂ ಅಧಿಕ ಮತ ಹೊಂದಿದೆ. ತೇಜಸ್ವಿನಿಗೌಡ ಅವರೇನಾದರೂ ಬಂದರೆ ಮತಗಳ ಪ್ರಮಾಣ ಕುಸಿಯಲಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

