ಬೆಂಗಳೂರು ಗ್ರಾಮಾಂತರ

ಜೆಡಿಎಸ್, ದೇವೇಗೌಡರನ್ನು ಟೀಕಿಸುವುದರಲ್ಲೇ ಕಾಲ ಕಳೆಯುತ್ತಿರುವ ಸರ್ಕಾರ: ರೇವಣ್ಣ ವ್ಯಂಗ್ಯ

Published On :


ಕ.ಪ್ರ.ವಾರ್ತೆ ಟಿ ಬೆಂಗಳೂರು ಟಿ ಆ. 16
ರಾಜ್ಯದಲ್ಲಿ ಕಾಂಗ್ರೆಸ್ಗೆ ಅಧಿಕಾರ ನೀಡಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿರುವುದು ಜನರ ಕಲ್ಯಾಣ ಮಾಡಲೆಂದೋ ಅಥವಾ ಜೆಡಿಎಸ್ ಪಕ್ಷ ಮುಗಿಸಲೆಂದೋ?
ಜೆಡಿಎಸ್ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಪದೇ ಪದೆ ಟೀಕಿಸುತ್ತಿರುವ ಕಾಂಗ್ರೆಸ್ ಮುಖಂಡರನ್ನು ಜೆಡಿಎಸ್ ಹಿರಿಯ ನಾಯಕ ಎಚ್.ಡಿ. ರೇವಣ್ಣ ಅವರು ತರಾಟೆಗೆ ತೆಗೆದುಕೊಂಡಿದ್ದು ಹೀಗೆ.
ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ಕಾಂಗ್ರೆಸ್ ಸರ್ಕಾರ ಮತ್ತು ಅದರ ಮುಖಂಡರು ತಮ್ಮನ್ನು ಆಯ್ಕೆ ಮಾಡಿದ ಜನರಿಗೆ ಒಳಿತು ಮಾಡುವ ಬದಲು ಕೇವಲ ಜೆಡಿಎಸ್ ಮತ್ತು ದೇವೇಗೌಡರ ಮೇಲೆ ಆರೋಪಗಳನ್ನು ಮಾಡುತ್ತಾ ಕಾಲಹರಣ ಮಾಡುತ್ತಿದೆ ಎಂದು ಕಿಡಿ ಕಾರಿದರು.
ಕಾಂಗ್ರೆಸ್ ನಾಯಕರಿಗೆ ದಿನಬೆಳಗಾದರೆ ಜೆಡಿಎಸ್ ಮತ್ತು ದೇವೇಗೌಡರನ್ನು ನಿಂದಿಸುವುದೇ ಒಂದು ಕಾಯಕವಾಗಿದೆ. ಇಲ್ಲದೇ ಇದ್ದರೆ ಅವರಿಗೆ ತಿಂದ ಅನ್ನ ಜೀರ್ಣವಾಗುವುದಿಲ್ಲ, ಹೊಟ್ಟೆ ತುಂಬುವುದಿಲ್ಲ. 120ಕ್ಕೂ ಹೆಚ್ಚು ಸ್ಥಾನ ಪಡೆದು ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದರೂ ನಮ್ಮ ಬಸ್ ಖಾಲಿಯಾಗಿದೆ ಎಂದು ಹೇಳಿ ಜೆಡಿಎಸ್, ಬಿಜೆಪಿಯವರನ್ನು ಬನ್ನಿ ಬನ್ನಿ ಎಂದು ಕರೆದು ಬಸ್ ಹತ್ತಿಸಿಕೊಳ್ಳುತ್ತಿದ್ದಾರೆ. ಈ ರೀತಿ ಎಲ್ಲರನ್ನೂ ಕರೆಸಿ ಬಸ್ ಹತ್ತಿಸಿಕೊಂಡರೆ ಓವರ್ಲೋಡ್ ಆಗಿ ಅಪಘಾತವಾಗುವ ಸಾಧ್ಯತೆ ಇದೆ ಎಂದು ಹೇಳಿದ ಅವರು, ಅಧಿಕಾರಕ್ಕೆ ಬಂದ ಮೂರು ತಿಂಗಳಿಗೇ ಕಾಂಗ್ರೆಸ್ಗೆ ಈ ಸ್ಥಿತಿ ಬರಬಾರದಿತ್ತು ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಕ್ರಮ ಗಣಿಗಾರಿಕೆಯನ್ನು ಮಟ್ಟ ಹಾಕಲಾಗುವುದು ಎಂದು ಸಿದ್ದರಾಮಯ್ಯ ಬೊಬ್ಬಿಟ್ಟಿದ್ದರು. ಸದನದಲ್ಲಿ ತೊಡೆ ತಟ್ಟಿದ್ದರು. ಪಂಚೆ ಎತ್ತಿಕಟ್ಟಿಕೊಂಡು ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದರು. ಆದರೆ, ಅಧಿಕಾರಕ್ಕೆ ಬಂದ ಮೇಲೆ ಮಾಡಿದ್ದೇನು? ನಿಷ್ಠಾವಂತ ಮತ್ತು ಉತ್ತಮ ಅಧಿಕಾರಿಯಾಗಿರುವ ಎಚ್.ಆರ್. ಶ್ರೀನಿವಾಸ್ ಅವರನ್ನು ಗಣಿ ಇಲಾಖೆಯಿಂದ ಎತ್ತಂಗಡಿ ಮಾಡಿದರು. ಈ ಮೂಲಕ ಗಣಿ ಮಾಫಿಯಾಕ್ಕೆ ತಡೆಹಾಕುವ ಬದಲು ಅಕ್ರಮ ಗಣಿಗಾರಿಕೆ ನಡೆಸುವವರಿಗೆ ಪ್ರೋತ್ಸಾಹ ನೀಡಿದರು ಎಂದು ಆರೋಪಿಸಿದರು.
ಲೋಕಸಭೆ ಉಪ ಚುನಾವಣೆಯಲ್ಲಿ ಮತದಾರರಿಗೆ ಹಂಚಲು ದೇವೇಗೌಡರು ತಮ್ಮ ಬೆಂಬಲಿಗರ ಖಾತೆಗಳಿಗೆ ಹಣ ಹಾಕಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿರುವ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಕೇವಲ ಜೆಡಿಎಸ್ ಮಾತ್ರವಲ್ಲ, ಕಾಂಗ್ರೆಸ್ ನಾಯಕರ ಬ್ಯಾಂಕ್ ಖಾತೆಗಳ ಬಗ್ಗೆಯೂ ತನಿಖೆ ನಡೆಸಲಿ ಎಂದು ಸವಾಲು ಹಾಕಿದರು.
ಲೋಕಸಭೆ ಉಪ ಚುನಾವಣೆ ಘೋಷಣೆಯಾದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಸಚಿವರೂ ಪ್ರಚಾರದಲ್ಲಿ ನಿರತರಾಗಿದ್ದಾರೆ. ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ಒಬ್ಬಿಬ್ಬರು ಮಂತ್ರಿಗಳು, ಹೋಬಳಿಗೊಬ್ಬ ಶಾಸಕರನ್ನು ಚುನಾವಣಾ ಪ್ರಚಾರಕ್ಕೆ ಇಳಿಸಿ ಎಷ್ಟು ಹಣ ಖರ್ಚು ಮಾಡಲಾಗುತ್ತಿದೆ ಎಂಬುದನ್ನು ಕೂಡ ತನಿಖೆಗೆ ಒಳಪಡಿಸಲಿ ಎಂದು ಹೇಳಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.