ಮೋದಿ ಈ ದೇಶದ ಪ್ರಧಾನಿ ಹುದ್ದೆಗೇರಿದರೆ ಅದಕ್ಕೆ ಕಾಂಗ್ರೆಸ್ ಕಾರಣ
ಕ.ಪ್ರ.ವಾರ್ತೆ ಟಿ ರಾಮನಗರ ಟಿ ಆ. 16
ನರೇಂದ್ರ ಮೋದಿ ಅವರು ಈ ದೇಶದ ಪ್ರಧಾನಿ ಹುದ್ದೆಗೇರಿದರೆ ಅದಕ್ಕೆ ಕಾಂಗ್ರೆಸ್ ದುರಾಡಳಿತ ಮತ್ತು ಆ ಪಕ್ಷದ ಹಗರಣಗಳೇ ಕಾರಣವಾಗುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಶುಕ್ರವಾರ ನಡೆದ ಜೆಡಿಎಸ್ ಎಸ್ಸಿ, ಎಸ್ಟಿ ಘಟಕದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಎರಡು ಅವಧಿ ಸರ್ಕಾರ ನಡೆಸಿರುವ ಯುಪಿಎ ವರ್ಚಸ್ಸು ಕುಸಿದಿರುವುದನ್ನು ಸಮೀಕ್ಷೆಗಳೇ ಹೇಳುತ್ತಿವೆ ಎಂದು ತಿಳಿಸಿದರು.
ಎನ್ಡಿಎಗೆ 155 ಮತ್ತು ಯುಪಿಎಗೆ 135 ಸ್ಥಾನಗಳು ಬರಲಿವೆ ಎನ್ನುವುದು ಸಮೀಕ್ಷಾ ವರದಿ. ಈ ಅಂಕಿ-ಅಂಶ ಚುನಾವಣೆ ವೇಳೆಗೆ ಇನ್ನಷ್ಟು ಕುಸಿಯಲಿದೆ. ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಹೆಚ್ಚಲಿದ್ದು, ರಾಜ್ಯದಲ್ಲಿ ಜೆಡಿಎಸ್ 15-16 ಸ್ಥಾನ ಗಳಿಸಿದ್ದೇ ಆದರೆ ಪ್ರಮುಖ ಪಾತ್ರ ವಹಿಸಲಿದೆ ಎಂದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಉತ್ತಮ ಆಡಳಿತ ನೀಡಿದ್ದರೆ ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ಅವರ ಹೆಸರು ಪ್ರಸ್ತಾಪಕ್ಕೇ ಬರುತ್ತಿರಲಿಲ್ಲ. ಮೋದಿಯವರನ್ನು ಕಾಂಗ್ರೆಸ್ಸಿಗರೇ ವಿಜೃಂಭಿಸಿ, ಅವರಿಗೆ ರಹದಾರಿ ಮಾಡಿಕೊಡಲು ಹೊರಟಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ವಂಚನೆ: ಸ್ವಾತಂತ್ರ್ಯ ಬಂದಂದಿನಿಂದಲೂ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಹೆಸರೇಳಿಕೊಂಡೇ ರಾಜಕಾರಣ ಮಾಡಿಕೊಂಡು ಬಂದಿರುವ ಕಾಂಗ್ರೆಸ್ ಆ ಸಮುದಾಯಗಳಿಗೆ ಮೋಸ ಮಾಡಿದೆ. ದೇವರಾಜು ಅರಸು ಅವರನ್ನು ರಾಜಕೀಯವಾಗಿ ಮುಗಿಸಿದವರು ಮತ್ತು ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿದ್ದೇ ಕಾಂಗ್ರೆಸ್ ಎಂದು ಕುಮಾರಸ್ವಾಮಿ ಆರೋಪಿಸಿದರು.
ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಹೊಂದಿದ ದೇವೇಗೌಡರು ಈ ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಜಾರಿಗೊಳಿಸಿದ್ದಾರೆ. ಸಾಮಾನ್ಯ ದಲಿತನೊಬ್ಬ ಗ್ರಾಮ ಪಂಚಾಯಿತಿ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ, ಪೌರ ಸಂಸ್ಥೆಗಳ ವರಿಷ್ಠ ಸ್ಥಾನಕ್ಕೇರಲು ಸಾಧ್ಯವಾಗಿಸಿದ್ದೇ ದೇವೇಗೌಡ ಎನ್ನುವುದನ್ನು ಮರೆಯಲಾಗದು ಎಂದು ಬಣ್ಣಿಸಿದರು.
ಕನಕಪುರದಲ್ಲಿ ಲೂಟಿ: ಸಾಕ್ಷಿ ಗುಡ್ಡೆಗಳ ಬಗ್ಗೆ ಪ್ರಸ್ತಾಪಿಸಿಕೊಂಡೇ ಕನಕಪುರದ ಗಡಿಯಂಚಿನ ಬೆಟ್ಟ, ಗುಡ್ಡೆಗಳನ್ನೆಲ್ಲಾ ಕರಗಿಸಿ ವಿದೇಶಕ್ಕೆ ರಫ್ತು ಮಾಡುವಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಪಟಾಲಂ ನಿರತವಾಗಿದೆ. ಕನಕಪುರ ಬಸ್ ನಿಲ್ದಾಣಕ್ಕೆ ಸ್ವಾಧೀನಪಡಿಸಿದ ಜಾಗದ ಮೌಲ್ಯ ರು.14 ಲಕ್ಷದಿಂದ ರು.7.5 ಕೋಟಿಗೇರಲು ಕಾರಣರಾದವರು ಅಭಿವೃದ್ಧಿ ವಿಷಯವಾಗಿ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದರು.
ಅಭಿವೃದ್ಧಿ ವಿಚಾರದಲ್ಲಿ ರಾಮನಗರದಲ್ಲಿ ನಿರ್ಮಾಣವಾಗಿರುವ ಎಂಜಿನಿಯರಿಂಗ್ ಕಾಲೇಜು ಕಟ್ಟಡ ಹಾಗೂ ಸರ್ಕಾರಿ ಕಟ್ಟಡಗಳೇ ಸಾಕ್ಷಿಯಾಗಿವೆ. ಕಾಂಗ್ರೆಸ್ ನಾಯಕರು ಏನು ಮಾಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಜೆಡಿಎಸ್ ಹೊರತಾದ ಪಕ್ಷಗಳಿಗೆ ರೈತರು, ಶೋಷಿತರ ಬಗ್ಗೆ ಕಾಳಜಿ ಇಲ್ಲ ಎಂದು ಹೇಳಿದರು.
ಸಿಪಿವೈ ದ್ವಂಧ್ವ ನಿಲುವು: ಬಿಜೆಪಿ ಸರ್ಕಾರದಲ್ಲಿ ಅರಣ್ಯ ಮಂತ್ರಿಯಾಗಿದ್ದ ಸಿ.ಪಿ.ಯೋಗೇಶ್ವರ್ ಕನಕಪುರದಲ್ಲಿ ಕಲ್ಲು
ಗಣಿಗಾರಿಕೆ ವಿರುದ್ಧ ಕೂಗಾಡಿ, ಹಾರಾಡಿದ್ದರು. ಭಾರಿ ಮಟ್ಟದ ಗಣಿ ಸಂಪತ್ತು ಲೂಟಿಯಾಗಿದೆ ಎಂದು ಖುದ್ದು ತನಿಖೆ ನಡೆಸುವುದಕ್ಕೂ ಹೊರಟಿದ್ದರು. ಆಗ ಯಾರ ವಿರುದ್ಧ ಆರೋಪ ಮಾಡಿ, ಜೈಲಿಗಟ್ಟುವ ಶಪಥ ಮಾಡಿದ್ದರೋ ಈಗ ಅದೇ ವ್ಯಕ್ತಿ ಜತೆ ಕೈ ಕುಲುಕಿ, ಬೆಂಬಲ ಘೋಷಿಸಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಭೆಯಲ್ಲಿ ಜೆಡಿಎಸ್ ಎಸ್ಸಿ, ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಡಾ.ಕೆ.ಅನ್ನದಾನಿ, ಮಾಜಿ ಸಚಿವರಾದ ಬಸವರಾಜ ಹೊರಟ್ಟಿ, ಎಂ.ಸಿ.ನಾಣಯ್ಯ, ಶಾಸಕರಾದ ಮಧು ಬಂಗಾರಪ್ಪ, ಅಪ್ಸರ್ ಆಗಾ, ಮಾಜಿ ಶಾಸಕ ಕೆ.ರಾಜು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

