ಬೆಂಗಳೂರು ಗ್ರಾಮಾಂತರ

ಬಿಜೆಪಿ, ಕೆಜೆಪಿ ಜತೆ ಜೆಡಿಎಸ್ ಅಪವಿತ್ರ ಮೈತ್ರಿ: ಅಬ್ದುಲ್

Published On :

ಕ.ಪ್ರ.ವಾರ್ತೆ , ರಾಮನಗರ , ಆ.18
ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ಸೋಷಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ನಿರ್ಧರಿಸಿದೆ ಎಂದು ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ತಿಳಿಸಿದರು.
ಈ ಸಂಬಂಧ ಭಾನುವಾರ ನಡೆದ ಪಕ್ಷದ ಕಾರ್ಯದರ್ಶಿ ಮಂಡಳಿ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು ಎಂದು ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಹೇಳಿದರು.
ಕೋಮುವಾದಿ ಬಿಜೆಪಿ ಮತ್ತು ಕೆಜೆಪಿ ಪಕ್ಷಗಳೊಂದಿಗೆ ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡಿರುವುದು ಜಾತ್ಯತೀತ ವ್ಯವಸ್ಥೆಗೆ ಧಕ್ಕೆ ತರುವಂತಿದೆ. ಈ ಮೈತ್ರಿಗೆ ವಿರುದ್ಧವಾಗಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುವ ನಿಲುವು ತೆಗೆದುಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ಜೆಡಿಎಸ್ ಅಭ್ಯರ್ಥಿಗಳಾದ ಎಚ್.ಡಿ.ಕುಮಾರಸ್ವಾಮಿ ಮತ್ತು ಚಲುವನಾರಾಯಣಸ್ವಾಮಿ ಲೋಕಸಭೆಯಲ್ಲಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಯಾವುದೇ ಧನಾತ್ಮಕ ಪಾತ್ರ ನಿರ್ವಹಿಸಿಲ್ಲ. ಇವರು ಸ್ವಹಿತಾಸಕ್ತಿಗಾಗಿ ಎಂಪಿ ಮತ್ತು ಎಂಎಲ್‌ಎ ಚುನಾವಣೆಯಲ್ಲಿ ಸ್ಪರ್ಧಿಸಿ ರಾಜಿನಾಮೆ ನೀಡುತ್ತಿದ್ದಾರೆ. ಇದರಿಂದಾಗಿ ಪದೇ ಪದೇ ಚುನಾವಣೆಗಳು ಎದುರಾಗುತ್ತಿದೆ. ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ ಎಂದು ಆರೋಪಿಸಿದರು.
ಸಂಸದರ ನಿಧಿ ಬಳಸಿಕೊಳ್ಳುವಲ್ಲಿಯೂ ಕೂಡ ಇಬ್ಬರೂ ನಾಯಕರು ವಿಫಲರಾಗಿದ್ದು, ಕ್ಷೇತ್ರಗಳನ್ನು ಕಡೆಗಣಿಸಿದ್ದಾರೆ. ಅಹಿಂದ ವರ್ಗದ ಪ್ರತಿನಿಧಿಯಾಗಿರುವ ಸಿದ್ದರಾಮಯ್ಯ ಅವರ ವೈಯಕ್ತಿಕ ವರ್ಚಸ್ಸನ್ನು ಕುಗ್ಗಿಸುವ ಸಲುವಾಗಿ ಈ ಮೈತ್ರಿ ನಡೆದಿದೆಯೇ ಹೊರತು ಜನತೆಯ ಹಿತಾಸಕ್ತಿಯಿಂದಲ್ಲ. ಇದನ್ನು ಎಸ್‌ಡಿಪಿಐ ವಿರೋಧಿಸುತ್ತದೆ ಎಂದರು.
ರಾಜ್ಯದ ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ತತ್ವ, ಸಿದ್ಧಾಂತಗಳನ್ನು ಸಮಾನವಾಗಿ ವಿರೋಧಿಸುತ್ತೇವೆ.
ಎಲ್ಲವೂ ಕೂಡ ಅಪಾಯಕಾರಿ ಪಕ್ಷಗಳೇ ಆಗಿವೆ. ಇದರಲ್ಲಿ ಕಡಿಮೆ ಅಪಾಯಕಾರಿಯಾದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲೇ ಬೇಕಾದ ಅನಿವಾರ್ಯತೆ ಇದೆ ಎಂದು ಅಬ್ದುಲ್ ಮಜೀದ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಹಸನ್ ಉಳ್ಳಾಲ್, ರಾಜ್ಯ ಸಮಿತಿ ಸದಸ್ಯ ದೇವನೂರು ಪುಟ್ಟನಂಜಯ್ಯ, ಮುಖಂಡರಾದ ಫಾರೂಕ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.