ಬೆಂಗಳೂರು ಗ್ರಾಮಾಂತರ

ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ; ಎಗ್ಗಿಲ್ಲದೆ ಸಾಗಿದ ಮದ್ಯ ಮಾರಾಟ

Published On :

ರಾಮನಗರ: ಅಲ್ಪಾವಧಿಗಾಗಿ ನಡೆಯುತ್ತಿರುವ ಲೋಕಸಭೆ ಉಪ ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆ ಪಾಲನೆ ಕೆಲಸವೂ ಕಾಟಾಚಾರದ್ದಾಗಿದೆ. ಒಣ ದಿನ ಘೋಷಿಸಿ, ಮದ್ಯದಂಗಡಿಗಳಿಗೆ ಬೀಗ ಮುದ್ರೆಯನ್ನೇನೋ ಹಾಕಲಾಗಿದೆ. ಆದರೆ, ಹಳ್ಳಿ-ಗಲ್ಲಿಗಳ ಪೆಟ್ಟಿ ಅಂಗಡಿಗಳಲ್ಲಿ ಮದ್ಯ ಮಾರಾಟ ಎಗ್ಗಿಲ್ಲದೆ ನಡೆದಿದೆ.
ನಿಂತಿಲ್ಲ ಮದ್ಯದ ಹೊಳೆ: ಗ್ರಾಮೀಣ ಭಾಗದಲ್ಲಿ ಅಬಕಾರಿ ಇಲಾಖೆ ಕುಮ್ಮಕ್ಕಿನಿಂದಲೇ ಮಾಂಸಾಹಾರಿ ಹೋಟೆಲ್, ಪೆಟ್ಟಿ ಅಂಗಡಿ, ದಿನಸಿ ಅಂಗಡಿಗಳಲ್ಲಿ ಮದ್ಯ ಮಾರಾಟ ನಿರಂತರವಾಗಿ ನಡೆದುಕೊಂಡು ಬಂದಿದೆ. ಚುನಾವಣೆಯ ಒಣ ದಿನದ ಮಟ್ಟಿಗೂ ಅನಧಿಕೃತ ಮಾರಾಟ ಕೇಂದ್ರಗಳಲ್ಲಿ ಮದ್ಯದ ಹೊಳೆ ತಪ್ಪಿಸಲಾಗಿಲ್ಲ.
ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದ ಬೆನ್ನಲ್ಲೇ ಮದ್ಯದ ಅಂಗಡಿಗಳಿಗೆ ಅಬಕಾರಿ ಅಧಿಕಾರಿಗಳು ಬೀಗ ಜಡಿದರು. ಕೆಲ ಮಾರಾಟಗಾರರು ತಮ್ಮ ದೈನಂದಿನ ಗ್ರಾಹಕರ ಅಗತ್ಯ ಪೂರೈಸುವಷ್ಟು ಮದ್ಯದ ಸರಕನ್ನು ಗುಪ್ತ ಸ್ಥಳದಲ್ಲಿಟ್ಟುಕೊಂಡು, ಮಾರಾಟ ಮಾಡುವುದನ್ನು ಮುಂದುವರೆಸಿದರು.
ದುಪ್ಪಟ್ಟು ಬೆಲೆ ವಸೂಲಿ: ಸತತ ಮೂರು ದಿನ ಒಣ ದಿನ ಘೋಷಣೆಯಾಗಿದ್ದರಿಂದ ಸಹಜವಾಗಿಯೇ ಮದ್ಯಕ್ಕೆ ಎಲ್ಲಿಲ್ಲದ ಬೇಡಿಕೆ ಬಂದಿತ್ತು. ಹೀಗಾಗಿ ಕೆಲ ಮಾರಾಟಗಾರರು ದುಪ್ಪಟ್ಟು ಬೆಲೆಗೆ ಮದ್ಯವನ್ನು ಮಾರಾಟ ಮಾಡಿ, ಗ್ರಾಹಕರ ಕಿಸೆಗೆ ಕತ್ತರಿ ಹಾಕಿರುವ ನಿದರ್ಶನಗಳು ಸಾಕಷ್ಟಿವೆ.  ಕಡಿಮೆ ಬೆಲೆಯ ಮದ್ಯವು ಹಳ್ಳಿ, ಗಲ್ಲಿಗಳಲ್ಲೂ ಸಿಗುತ್ತಿದ್ದರಿಂದ ಅವಕ್ಕೆ ಎಲ್ಲೂ ಅಭಾವವಿರಲಿಲ್ಲ. ಆದರೆ, ಮಧ್ಯಮ ಪ್ರಮಾಣದ ಮದ್ಯಕ್ಕೆ ಬೇಡಿಕೆ ಹೆಚ್ಚಾಗಿತ್ತು. ಗ್ರಾಹಕರು ಹೆಚ್ಚು ಬೆಲೆ ಕೊಟ್ಟು, ಮದ್ಯ ಖರೀದಿಗೆ ಮುಗಿ ಬಿದ್ದಿದ್ದರು.
ಮತದ ಮೌಲ್ಯ ಕುಸಿತ: ಅಲ್ಪಾವಧಿಗೆ ನಡೆಯುತ್ತಿರುವ ಚುನಾವಣೆ ಕಾರಣಕ್ಕೆ ಪ್ರಮುಖ ಪಕ್ಷಗಳು ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡಿಕೆಯ ಗೋಜಿಗೆ ಹೋಗಿಲ್ಲ. ನಗರ, ಗ್ರಾಮೀಣದಲ್ಲಿ ಬೇರೆಯದೇ ರೀತಿ ಬಟಾವಡೆಗೆ ರಾಜಕೀಯ ಪಕ್ಷಗಳ ಕಾರ್ಯಕರ್ತರು ಇಳಿದಿದ್ದಾರೆ.
ಗ್ರಾಮಾಂತರದಲ್ಲಿ ರು.50 ರಿಂದ 100, ನಗರ ಮತ್ತು ಪಟ್ಟಣದಲ್ಲಿ ರು.100 ರಿಂದ 200ವರೆಗೆ ತಲಾವಾರು ಮತದಾರರಿಗೆ ಹಣ ಹಂಚಲಾಗುತ್ತಿದೆ. ಕಾರ್ಯಕರ್ತರ ನಿರ್ವಹಣಾ ವೆಚ್ಚ ನೀಡಿಕೆಯಲ್ಲೂ ಕುಸಿತ ಕಾಣಲಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಕೈ ತುಂಬಾ ಕಾಸು ಹಿಡಿದವರಿಗೆ ಈಗ ನಿರಾಸೆಯಾಗಿದೆ.
ಮನೆ ಮನೆಗೆ ಭೇಟಿ: ರಾಜಕೀಯ ಮುಖಂಡರು, ಕಾರ್ಯಕರ್ತರು ತಮ್ಮ ಪಕ್ಷದ ಅಭ್ಯರ್ಥಿ ಪರ ಮತಯಾಚನೆಗಾಗಿ ಮನೆ ಮನೆಗೆ ಭೇಟಿ ನೀಡಿದರು. ಈ ವೇಳೆ ಕರ ಪತ, ಮತದಾರರ ಕ್ರಮ ಸಂಖ್ಯೆಯುಳ್ಳ ಚೀಟಿಯೊಂದಿಗೆ ಹಣವನ್ನೂ ಹಂಚಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.