ತಹಸೀಲ್ದಾರ್ ಧೋರಣೆಗೆ ಖಂಡನೆ
ದೊಡ್ಡಬಳ್ಳಾಪುರ: ಜಿಲ್ಲಾ ಕೇಂದ್ರವಾಗಲು ದೇವನಹಳ್ಳಿ ಎಲ್ಲಾ ರೀತಿಯಿಂದಲೂ ಅರ್ಹತೆ ಪಡೆದಿದೆ ಎಂದು ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ದೇವನಹಳ್ಳಿ ತಾಲೂಕಿನ ತಹಶೀಲ್ದಾರರು ಹೇಳುವ ಮೂಲಕ ತಮ್ಮ ಸ್ಥಾನದ ಜವಾಬ್ದಾರಿ ಮರೆತು ಮಾತನಾಡಿದ್ದಾರೆ. ಈ ಹೇಳಿಕೆಯನ್ನು ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್ ಖಂಡಿಸಿದ್ದಾರೆ. ಸಾರ್ವಜನಿಕ ಅಧಿಕಾರಿಯಾಗಿ ತಾಲೂಕಿನ ಜನರನ್ನು ಓಲೈಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಬಗೆಯ ಹೇಳಿಕೆ ನೀಡಿರುವುದು ಸರಿಯಲ್ಲ. ದೇವನಹಳ್ಳಿ ಜಿಲ್ಲಾ ಕೇಂದ್ರವಾಗಲು ಅರ್ಹವಾಗಿರುವ ಅಂಕಿ-ಅಂಶಗಳ ಬಗ್ಗೆ ಸರ್ಕಾರ ವರದಿ ಕೇಳಿದರೆ ವರದಿ ನೀಡಬೇಕು. ಅದನ್ನು ಬಿಟ್ಟು ರಾಜಕಾರಣಿಯಂತೆ ಬಹಿರಂಗ ಹೇಳಿಕೆಗಳನ್ನು ನೀಡುವುದು ಖಂಡನೀಯ. ಸರ್ಕಾರದ ಅಂಕಿ-ಸಂಖ್ಯೆಗಳ ಇಲಾಖೆ ಪ್ರತಿವರ್ಷ ಸಿದ್ಧಪಡಿಸಿ ಪ್ರಕಟಿಸುವ ಅಧಿಕೃತ ಪುಸ್ತಕದಲ್ಲೇ ದೊಡ್ಡಬಳ್ಳಾಪುರ ಎಲ್ಲ ರೀತಿಯಿಂದಲೂ ಮುಂದಿರುವುದು ಬಹಿರಂಗ ಸತ್ಯ. ಎರಡೂ ತಾಲೂಕುಗಳ ಜನರ ಮಧ್ಯೆ ದ್ವೇಷ ಭಾವನೆ ಬಿತ್ತಲು ಕಾರಣವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಅವರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸಮ್ಮೇಳನಾಧ್ಯಕ್ಷರಿಗೆ ಸನ್ಮಾನ
ದೊಡ್ಡಬಳ್ಳಾಪುರ: ಇಲ್ಲಿನ ಶ್ರೀಮಾರುತಿ ವ್ಯಾಯಾಮ ಶಾಲೆ ಟ್ರಸ್ಟ್ ನೇತೃತ್ವದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.ಇದೇ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಎಂ.ಇ.ಖಲೀಲುಲ್ಲಾಖಾನ್ ಅವರನ್ನು ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಖಲೀಲುಲ್ಲಾಖಾನ್, ಮಾರುತಿ ವ್ಯಾಯಾಮ ಶಾಲೆ ದೊಡ್ಡಬಳ್ಳಾಪುರದಲ್ಲಿ ಅನೇಕ ಪ್ರತಿಭಾವಂತರನ್ನು ಬೆಳೆಸಿದೆ. ಸಾಮಾಜಿಕವಾಗಿ ನನಗೆ ಒಂದು ವ್ಯಕ್ತಿತ್ವವನ್ನು ರೂಪಿಸಿಕೊಟ್ಟ ಶಾಲೆಗೆ ನಾನು ಚಿರಋಣಿ ಎಂದ ಅವರು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಇದಕ್ಕೂ ಮುನ್ನ ಹಿರಿಯ ಸದಸ್ಯರಾದ ಕೆ.ಜಿ.ಗೋಪಾಲ್ ಧ್ವಜಾರೋಹಣ ನೆರವೇರಿಸಿದರು. ಇದೇ ಸಂದರ್ಭದಲ್ಲಿ ತಾಲೂಕು ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ವಿಜೇತರಾದ ನದೂಮ್ ಪಾಷಾ (ಪ್ರಥಮ), ಇರ್ಫಾನ್(ದ್ವಿತೀಯ) ಮತ್ತು ರಾಜೇಶ್ ಕುಮಾರ್ (ತೃತೀಯ) ಅವರಿಗೆ ಬಹುಮಾನ ವಿತರಿಸಲಾಯಿತು. ಸಂಸ್ಥೆಯ ಟ್ರಸ್ಟಿ ಎಂ.ಎನ್. ಶಿವಶಂಕರ್, ಹಿರಿಯ ಸದಸ್ಯರು, ಕಾರ್ಯಕಾರಿ ಸಮಿತಿ ಸದಸ್ಯರು ಹಾಜರಿದ್ದರು.
ಕೃಷಿ ಪ್ರಶಸ್ತಿಗಾಗಿ
ಅರ್ಜಿ ಆಹ್ವಾನ
ರಾಮನಗರ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬೆಳೆದಿರುವ ರಾಗಿ ಬೆಳೆ ಕೃಷಿ ಪ್ರಶಸ್ತಿಗಾಗಿ ಆಸಕ್ತಿಯುಳ್ಳ ರೈತರು ಹೆಸರನ್ನು ನೊಂದಾಯಿಸಿಕೊಳ್ಳಲು ಅರ್ಜಿ ಆಹ್ವಾನಿಸಿದೆ. ಹೆಸರು ನೋಂದಾಯಿಸಲು ಆ.31 ಕೊನೆಯ ದಿನವಾಗಿದೆ. ಕೃಷಿ ಪ್ರಶಸ್ತಿಗಾಗಿ ಸ್ಪರ್ಧಿಸುವ ರೈತರು ತಾಲೂಕು ಮಟ್ಟದ ಸ್ಪರ್ಧೆಗೆ ರು.100, ಜಿಲ್ಲಾ ಮಟ್ಟದ ಸ್ಪರ್ಧೆಗೆ ರು.150 ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗೆ ರು.300 ಪ್ರವೇಶ ಶುಲ್ಕ ಪಾವತಿಸಬೇಕು. ಎಸ್ಸಿ-ಎಸ್ಟಿ ವರ್ಗಕ್ಕೆ ಸೇರಿದ ರೈತರು ತಾಲೂಕು ಮಟ್ಟಕ್ಕೆ ರು.25, ಜಿಲ್ಲಾ ಮಟ್ಟಕ್ಕೆ ರು.40 ಹಾಗೂ ರಾಜ್ಯ ಮಟ್ಟಕ್ಕೆ ರು.75 ನ್ನು ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಪಾವತಿಸಿ ನೊಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಆಯಾ ತಾಲೂಕಿನ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡುವಂತೆ ಕೃಷಿ ಜಂಟಿ ನಿರ್ದೇಶಕರು ಕೋರಿದ್ದಾರೆ.
23ರಂದು ತಾಲೂಕು ಮಟ್ಟದ ಕ್ರೀಡಾಕೂಟ
ರಾಮನಗರ: ಪದವಿ ಪೂರ್ವ ಶಿಕ್ಷಣ ಇಲಾಖೆಯು ಶಾಂತಿನಿಕೇತನ ಕಾಲೇಜಿನ ಸಹಯೋಗದೊಂದಿಗೆ ತಾಲೂಕು ಮಟ್ಟದ ಕ್ರೀಡಾಕೂಟ ಆ.23ರ ಬೆಳಗ್ಗೆ 9.30ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಕ್ರೀಡಾಕೂಟವನ್ನು ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಧ್ವಜಾರೋಹಣ ಮಾಡುವ ಮೂಲಕ ಉದ್ಘಾಟಿಸುವರು. ಕಾಲೇಜಿನ ಕಾರ್ಯದರ್ಶಿ ಆರ್.ಕುಮಾರಸ್ವಾಮಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಎಚ್.ಡಿ.ಲಿಂಗರಾಜು, ಜಿ.ಪಂ. ಸಿಇಒ ಡಾ.ಎಂ.ವಿ.ವೆಂಕಟೇಶ್, ಡಿಡಿಪಿಐ ಪ್ರಹ್ಲಾದ್ಗೌಡ ಭಾಗವಹಿಸುವರು.
'ವಿದ್ಯಾರ್ಥಿ ದಿಸೆಯಲ್ಲೇ ಸಂಸ್ಕಾರ ಬೆಳೆಯಲಿ'
ನೆಲಮಂಗಲ: ದೇಶದ ಮುಂದಿನ ಭವಿಷ್ಯ ರೂಪಿಸುವವರೇ ಇಂದಿನ ಮಕ್ಕಳು. ಈ ನಿಟ್ಟಿನಲ್ಲಿ ಅವರನ್ನು ದೇಶಾಭಿಮಾನಿಗಳಾಗಿ ಬೆಳೆಸುವ ಹೊಣೆ ಶಿಕ್ಷಕರದಾಗಿದೆ ಎಂದು ಮೋನಿಕ ಫಾರಂನ ಮಾಲೀಕರಾದ ಮುರುಳಿಧರ್ ಹೇಳಿದರು. ತಾಲೂಕಿನ ಸೋಮಸಾಗರದ ಸರ್ಕಾರಿ ಶಾಲೆಯ ಮಕ್ಕಳಿಗೆ ಸರ್ಕಾರದಿಂದ ನೀಡುವ ಉಚಿತ ಹಾಲು ಯೋಜನೆಯ ಕ್ಷೀರಭಾಗ್ಯಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು. ಇದೆ ಸಂದರ್ಭದಲ್ಲಿ ದಾನಿ ಮುರುಳಿಧರ್ ಮತ್ತು ಲತಾ ದಂಪತಿಯನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನವನ್ನು ಸ್ವೀಕರಿಸಿದ ಮುರುಳಿಧರ್ ಮಾತನಾಡಿ,ಈಗಾಗಲೇ ಶಾಲಾ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ ನೀಡಿದ್ದು ಮತ್ತು ಬಡ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಮುಂದೆಯೂ ಸಹ ಮಕ್ಕಳಿಗೆ ಅನುಕೂಲ ಕಲ್ಪಿಸುವುದಾಗಿ ತಿಳಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಕೃಷ್ಣಪ್ಪ, ತಿಮ್ಮಪ್ಪ, ಮುಖ್ಯ ಶಿಕ್ಷಕ ಆರ್.ರಾಜಶೇಖರ್ ಹಾಗೂ ಶಾಲಾ ಎಸ್ಡಿಎಂಸಿ ಸದಸ್ಯರು ಮತ್ತು ಗ್ರಾಮಸ್ಥರು ಇದ್ದರು.
ಉಪಾಕರ್ಮ: ಹಗಲು ಸೇವೆ
ಮಾಗಡಿ: ಉಪಾಕರ್ಮದ ಪ್ರಯುಕ್ತ ಪಟ್ಟಣದ ತಿರುಮಲೆ ರಾಮಲಿಂಗ ಚೌಡೇಶ್ವರಿ ದೇವಸ್ಥಾನದಲ್ಲಿ ದೇವಾಂಗ ಸಮಾಜದವರಿಂದ ಹಗಲುಸೇವೆ ಮತ್ತು ಜನಿವಾರ ಧಾರಣೆಯ ಜತೆಗೆ ಧಾರ್ಮಿಕ ಕಾರ್ಯಕ್ರಮ ನೆರವೇರಿತು. ಹಲಗು ಸೇವೆ ಮತ್ತು ಜನಿವಾರ ಧಾರಣೆಯ ಅಂಗವಾಗಿ ಚೌಡೇಶ್ವರಿ ಅಮ್ಮನವರಿಗೆ ಅಭಿಷೇಕ, ಅರ್ಚನೆ, ವಿಶೇಷ ಹೂವಿನ ಅಲಂಕಾರದೊಂದಿಗೆ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಸಮಾಜದವರು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು. ನಂತರ ದೇವಿಯ ಉತ್ಸವಮೂರ್ತಿಯನ್ನು ಮಂಗಳ ವಾದ್ಯದೊಂದಿಗೆ ರಾಜಬೀದಿ ಮೆರವಣಿಗೆ ನಡೆಸಿದರು. ಸಮಾಜದ ಬಾಂಧವರು ದೇವಿಯ ಉತ್ಸವದಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದರು. ಚೌಡೇಶ್ವರಿ ದೇವಿ ಹೆಸರಿನಲ್ಲಿ ಸಮಾಜದ ಬಹುತೇಕ ಮಂದಿ ಕತ್ತಿಯಿಂದ ಎದೆಗೆ ಬಡಿದುಕೊಳ್ಳುವ ಮೂಲಕ ಹಗಲು ಸೇವೆ ನಡೆಸಿದರು. ಸಮಾಜದ ಬಾಂಧವರು ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸಿದ್ದರು. ಪ್ರಸಾದ ವಿನಿಯೋಗ ನಡೆಯಿತು. ಪುರಸಭಾ ಸದಸ್ಯ ಎಸ್. ಮಹದೇವ್, ಸಮಾಜದ ಮುಖಂಡರಾದ ಟಿ.ಸಿ. ರಮೇಶ್, ಟಿ.ಎಸ್. ಬಾಲರಾಜು, ಅಶ್ವಥ್, ಪುಟ್ಟಶೆಂಕರಪ್ಪ, ಉಮಾಪತಿ, ಗೋವಿಂದರಾಜು, ರಾಮಕೃಷ್ಣಪ್ಪ, ಈಶ್ವರಪ್ಪ, ನರಸಿಂಹಮೂರ್ತಿ, ಪದ್ಮನಾಭ, ಟಿ.ಸಿ. ಕೃಷ್ಣ, ನಾರಾಯಣ,ರಾಜು, ಶಂಕರ,ಮೂರ್ತಿ, ಜಯರಾಮು ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

