ವೈಚಾರಿಕ ಪ್ರಜ್ಞೆ ಪ್ರಚೋದಿಸುವ ಕೆಲಸ ನಿರಂತರವಿರಲಿ
ದೊಡ್ಡಬಳ್ಳಾಪುರ: ವೈಚಾರಿಕ ಪ್ರಜ್ಞೆಯನ್ನು ಪ್ರಚೋದಿಸುವ ಕೆಲಸ ನಿರಂತರವಾಗಿ ಆಗುತ್ತಿರಬೇಕು. ಸಮಕಾಲೀನ ವಿಚಾರಗಳಿಗೆ ಪೂರಕವಾಗಿ ಪಠ್ಯ ಸಂವೇದನೆಗಳು ಬದಲಾಗಬೇಕು ಎಂದು ವಿಜ್ಞಾನ ಲೇಖಕ ಡಾ.ಎ.ಓ.ಆವಲಮೂರ್ತಿ ಹೇಳಿದರು.
ಇಲ್ಲಿನ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಜಾಗೃತ ಪರಿಷತ್ತುಗಳ ನೇತೃತ್ವದಲ್ಲಿ ಜಿ.ಕೆ.ಪ್ರೌಢಶಾಲೆಯಲ್ಲಿ ನಡೆದ ಸಾಹಿತ್ಯ ಸಂಸ್ಕೃತಿ-ವಿಜ್ಞಾನ ಸಮಾಗಮ-2013 ಕಾರ್ಯಕ್ರಮ ಮಾಲಿಕೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಯಾವುದೇ ಸಂದರ್ಭದಲ್ಲೇ ಆಗಲೀ ಉಪದೇಶಕ್ಕಿಂತ ಪ್ರಾಯೋಗಿಕ ಅನುಷ್ಠಾನದ ಪರಿಕಲ್ಪನೆ ಹೆಚ್ಚು ಪ್ರಯೋಜನಕಾರಿ. ವಿಚಾರಗಳು ಆಲೋಚನೆಗಳನ್ನು ಪ್ರಚೋದಿಸದ ಹೊರತು ಪ್ರಯೋಜನವಿಲ್ಲ ವಿಚಾರವಂತಿಕೆ ಬೆಳೆಸದ ಹೊರತು ಭವಿಷ್ಯವಿಲ್ಲ. ನಮ್ಮ ಆಲೋಚನೆಗಳಿಗೆ ಪೂರಕವಾಗಿ ಸತ್ಯದ ಹುಡುಕಾಟ ನಡೆಯಬೇಕು. ಸರಿ-ತಪ್ಪುಗಳ ಕುರಿತು ತರ್ಕಿಸುವ ಮನೋಭಾವ ಮಕ್ಕಳಲ್ಲಿ ಬರಬೇಕು. ಅದನ್ನು ಶೈಕ್ಷಣಿಕ ವಾತಾವರಣದಲ್ಲೇ ಉಂಟು ಮಾಡಿದರೆ ಒಳ್ಳೆಯದು. ವಿಚಾರದ ಚಿಂತನೆ ಮತ್ತು ಅಭಿವ್ಯಕ್ತಿಸುವ ಮಾತುಗಾರಿಕೆ ಸಮಕಾಲೀನ ಸಂದರ್ಭದಲ್ಲಿ ಹೆಚ್ಚು ಮೌಲ್ಯವನ್ನು ಪಡೆದಿದೆ ಎಂದು ಅವರು ವಿವರಿಸಿದರು. ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಕನ್ನಡ ಜಾಗೃತ ಪರಿಷತ್ತಿನ ಮಾಜಿ ಅಧ್ಯಕ್ಷ ಎಂ.ಕೃಷ್ಣಮೂರ್ತಿ, ಕನ್ನಡ ನಾಡು-ನುಡಿಯ ಅಭಿರುಚಿಯನ್ನು ಮಕ್ಕಳ ಮನಸ್ಸಿಗೆ ಬಿತ್ತುವಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಯ ಪಾತ್ರ ಹಿರಿದು. ಸಾಹಿತ್ಯ ಮತ್ತು ವಿಜ್ಞಾನದ ವಿಷಯಗಳ ಬಗ್ಗೆ ಉಪನ್ಯಾಸ ಹಾಗೂ ಸೃಜನಶೀಲ ಸಾಂಸ್ಕೃತಿಕ ಪ್ರತಿಭೆಯ ಅನಾವರಣಕ್ಕೆ ಕಾರ್ಯಕ್ರಮದ ಮೂಲಕ ವೇದಿಕೆ ಕಲ್ಪಿಸಲಾಗಿದ್ದು, ಕನ್ನಡವನ್ನು ಕ್ರಿಯಾತ್ಮಕವಾಗಿ ಕಟ್ಟುವ ನಿಟ್ಟಿನಲ್ಲಿ ಇದೊಂದು ಉತ್ತಮ ಬೆಳವಣಿಗೆ ಎಂದರು. ಬೆಂ.ಗ್ರಾ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ನಾಗಪ್ರಿಯ ಕಾರ್ಯಕ್ರಮದ ಸಮಾರೋಪ ಭಾಷಣ ಮಾಡಿದರು. ವಿಜ್ಞಾನ ಮತ್ತು ಗಣಿತದ ವಿಚಾರಗಳ ಬಗ್ಗೆ ಕನ್ನಡದಲ್ಲೂ ಮಾಹಿತಿಯನ್ನು ಯಶಸ್ವಿಯಾಗಿ ಮಕ್ಕಳಿಗೆ ತಲುಪಿಸಬಹುದು. ಆ ಸಾಧ್ಯತೆಗಳನ್ನು ಸಾಹಿತ್ಯ ಸಂಸ್ಕೃತಿ-ವಿಜ್ಞಾನ ಸಮಾಗಮ ಕಾರ್ಯಕ್ರಮದಲ್ಲಿ ಮಾಡಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎಂ.ಇ.ಖಲೀಲುಲ್ಲಾಖಾನ್, ತಾ.ಕಸಾಪ ಮಾಜಿ ಅಧ್ಯಕ್ಷ ಪ್ರೊ.ಚಂದ್ರಪ್ಪ, ಪರಿಸರವಾದಿ ಕೆ.ಗುರುದೇವ್, ಜಿ.ಕೆ.ಪ್ರೌಡಶಾಲೆ ಕಾರ್ಯದರ್ಶಿ ರಘುರಾಂ ಮತ್ತಿತರರು ಮಾತನಾಡಿದರು.ತಾಲೂಕು ಕಸಾಪ ಅಧ್ಯಕ್ಷ ಕೆ.ಆರ್.ರವಿಕಿರಣ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯಶಿಕ್ಷಕಿ ಉಷಾರಾಣಿ, ಗೌ.ಅಧ್ಯಕ್ಷ ಡಿ.ಶ್ರೀಕಾಂತ, ಎಚ್.ಎನ್.ಪ್ರಕಾಶ್, ಕೋಶಾಧ್ಯಕ್ಷ ಎಂ.ಚಿಕ್ಕಣ್ಣ, ಯುವಕವಿ ಸಂತೋಷ್ ಮತ್ತಿತರರು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ತಾಲೂಕಿನ 8 ಪ್ರೌಡಶಾಲೆಗಳಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಲವು ವಿಚಾರಗಳ ಕುರಿತು ಉಪನ್ಯಾಸ ನೀಡಿದ ಗಣ್ಯರಿಗೆ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಅಭಿನಂದಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

