ಬೆಂಗಳೂರು ಗ್ರಾಮಾಂತರ

ತಿಂಗಳಲ್ಲಿ ಖಾತೆ ಬದಲಿಸಿ ಕೊಡಿ

Published On :

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆ ಸಂಯುಕ್ತ ಆಶ್ರಯದಲ್ಲಿ  ಕರ್ನಾಟಕ ಉಪ ಲೋಕಾಯುಕ್ತ ನ್ಯಾ. ಸುಭಾಷ್ ಬಿ.ಆದಿ ಅವರಿಂದ ಸಾರ್ವಜನಿಕರಿಂದ ಬಂದ ದೂರುಗಳ  ವಿಚಾರಣೆ ಹಾಗೂ ಕುಂದುಕೊರತೆಗಳ ಆಲಿಕೆ ಸಭೆ ಇದೇ ಪ್ರಥಮ ಬಾರಿಗೆ ಇಲ್ಲಿನ ಮಿನಿ ವಿಧಾನ ಸೌಧದ ಆವರಣದಲ್ಲಿ ಭಾನುವಾರ ಆಯೋಜಿಸಲಾಗಿತ್ತು.
ಲೋಕಾಯುಕ್ತ ಕಚೇರಿಯಿಂದ 88 ಪ್ರಕರಣಗಳ ಬಗ್ಗೆ ಸಾರ್ವಜನಿಕರಿಗೆ ನೊಟೀಸ್ ನೀಡಲಾಗಿತ್ತು. ಅದರಲ್ಲಿ 84 ಪ್ರಕರಣಗಳ ವಿಚಾರಣೆ ಸಂಜೆ 6.30ರವರೆಗೂ ನಡೆದು ನಾಲ್ಕು ಪ್ರಕರಣಗಳು ಬಾಕಿ ಉಳಿದವು. ಅಲ್ಲದೆ 26 ಮಂದಿ ಹೊಸದಾಗಿ ದೂರುಗಳನ್ನು ನೀಡಿದ್ದಾರೆ.
ಇಂದು ನಡೆದ ಪ್ರಕರಣಗಳಲ್ಲಿ ಬಹುತೇಕ ಕಂದಾಯ ಇಲಾಖೆಗೆ ಸೇರಿದ್ದಾಗಿದ್ದು ಕೆಲವು ಪುರಸಭೆ ಮತ್ತು ಪಂಚಾಯಿತಿಗಳ ವ್ಯಾಪ್ತಿಗೆ ಸೇರಿದ ದೂರುಗಳಾಗಿದ್ದವು. ವಿಚಾರಣೆ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವಿ.ಶಂಕರ್ ಉಪವಿಭಾಗಾಧಿಕಾರಿ ಸಿ.ಮಂಜುನಾಥ್ ಹಾಗೂ ತಹಸೀಲ್ದಾರ್ ಡಾ.ವೆಂಕಟರಾಜು ಉಪಸ್ಥಿತರಿದ್ದರು.
ಇಂದು ನಡೆದ ವಿಚಾರಣಾ ಸಂದರ್ಭದಲ್ಲಿ ಪುರಸಭೆಗೆ ಸಂಬಂಧಪಟ್ಟಹಾಗೆ ದೇವನಹಳ್ಳಿ ಕೋಟೆ ವೇಣುಗೋಪಾಲಸ್ವಾಮಿ ದೇವಾಲಯದ ಬಳಿ ವಾಸವಿದ್ದ ಡಿ.ಎಸ್.ಕೃಷ್ಣಮೂರ್ತಿ ಎಂಬುವರು 1961ರಲ್ಲಿ ನಿಧನರಾಗಿದ್ದು ಅವರ ಪುತ್ರ ಸುಬ್ರಹ್ಮಣ್ಯ ಶಾಸ್ತ್ರಿ ಅವರಿಗೆ ಪುರಸಭೆಯವರು ಖಾತೆ ಮಾಡದೆ ಕೃಷ್ಣಮೂರ್ತಿಯವರ ತಮ್ಮ ಗೋಪಾಲಶಾಸ್ತ್ರಿ ಹೆಸರಿಗೆ ಖಾತೆ ಮಾಡಿರುವುದಕ್ಕೆ  ದೂರನ್ನು ನೀಡಿದ್ದರು. ಈ ಪ್ರಕರಣ ವಿಚಾರಣೆ ನಡೆದು ಪುತ್ರನಿಗೆ ಖಾತೆ ಮಾಡದೆ ತಮ್ಮನಿಗೆ ಖಾತೆ ಮಾಡಿರುವುದು ಕಾನೂನು ಬಾಹಿರವಾಗಿದೆ. ಆದ್ದರಿಂದ ಒಂದು ತಿಂಗಳಿನೊಳಗಾಗಿ ಖಾತೆ ಬದಲಾಯಿಸಿಕೊಡಬೇಕೆಂದು  ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆಕ್ಷೇಪ: ದೇವನಹಳ್ಳಿ ವಿಜಯಪುರ ರಸ್ತೆಯಲ್ಲಿ ತಮಗೆ ಸರ್ಕಾರದಿಂದ ಮಂಜೂರಿಯಾಗಿದ್ದ ಎರಡು ಎಕರೆ ಜಮೀನನ್ನು ಮಿನಿ ಕ್ರೀಡಾಂಗಣಕ್ಕಾಗಿ ತಹಸೀಲ್ದಾರ್ ಅವರು ವಶಪಡಿಸಿಕೊಂಡಿದ್ದು ಮತ್ತೆ ತಮಗೆ ಬದಲಿ ಜಮೀನನ್ನು ನೀಡದೆ ಇರುವುದರ ಬಗ್ಗೆ ಪ್ರಕಾಶ್ ಎಂಬ ರೈತ ದೂರು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಉಪಲೋಕಾಯುಕ್ತರು ವಶಪಡಿಸಿಕೊಂಡ ರೈತನಿಗೆ ಬದಲಿ ಜಮೀನು ನೀಡದೆ ಇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕೂಡಲೆ ಆ ರೈತನಿಗೆ ಜಮೀನು ಕೊಡಿ  ಅಥವಾ ನಿಮ್ಮ ಕೈಯಿಂದ ಹಣ ಹಾಕಿ ಆತನಿಗೆ ಜಮೀನು ಕೊಡಿ  ಎಂದು ಆದೇಶ ನೀಡಿದರು.
ಕ್ರಿಮನಲ್ ಕೇಸ್ ಹಾಕಿ: ಬೂದಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಹಿತ್ತರಹಳ್ಳಿ ಗ್ರಾಮದ ಜನತಾ ಕಾಲೋನಿಯ ರಸ್ತೆಯಲ್ಲಿಯೇ ಮನೆಗಳನ್ನು ಕಟ್ಟಿರುವುದು ಅಲ್ಲದೆ ಕೆಲವರು ಪಾಯ ಹಾಕಿರುವ ಬಗ್ಗೆ ಎಚ್. ಮುನಿಶಾಮಪ್ಪ ಎಂಬುವರು ದೂರನ್ನು ನೀಡಿದ್ದು ವಿಚಾರಣೆ ನಡೆಸಿದ ಉಪಲೋಕಾಯುಕ್ತರು ಸರ್ಕಾರಿ ಜಮೀನಿನಲ್ಲಿ ಯಾರೇ ಅತಿಕ್ರಮಣ ಮಾಡಿದ್ದರೆ ಅಂತಹವರ ಬಗ್ಗೆ ಕ್ರಮ ಜರುಗಿಸಿ ಕ್ರಿಮಿನಲ್ ಕೇಸ್ ಜರುಗಿಸಿ ಎಂದು ಆದೇಶ ನೀಡಿದರು.
ಚನ್ನರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂ 183ರಲ್ಲಿ 7 ಎಕರೆ ಜಮೀನಿದ್ದು ಅದರಲ್ಲಿ ಮಂಜೂರಿಯಾಗದೆ 60 ಮನೆಗಳನ್ನು ಕಟ್ಟಲಾಗಿದೆ. ಕೂಡಲೇ ತೆರವುಗೊಳಿಸಬೇಕೆಂದು ಭರತ್ ದೂರು ನೀಡಿದ್ದು ಅನಧಿಕೃತ ಮನೆಗಳನ್ನು ತೆರವು ಗೊಳಿಸಬೇಕೆಂದು ಪಂಚಾಯಿತಿ ಪಿಡಿಒ ಅವರಿಗೆ ಆದೇಶಿಸಿದರು.
ಹಲವಾರು ಪ್ರಕರಣಗಳು ಆರೇಳು ವರ್ಷಗಳ ಹಿಂದೆ ದೂರು ದಾಖಲಾಗಿದ್ದರೂ ಸಾರ್ವಜನಿಕರಿಗೆ ನ್ಯಾಯ ವಿಳಂಬವಾಗುತ್ತಿದೆ. ಇದನ್ನು ಸರಿಪಡಿಸಲು ಮುಂದಿನ ದಿನಗಳಲ್ಲಿ ತಾಲೂಕು ಕೇಂದ್ರದಲ್ಲಿ ಇಂತಹ ಬಹಿರಂಗ ವಿಚಾರಣಾ ಕಾರ್ಯಕ್ರಮಗಳು ನಡೆಯಲಿವೆ ಎನ್ನಲಾಗಿದೆ.
ಈ ಸಂಧರ್ಭದಲ್ಲಿ ಹಿಂದಿನ ತಹಸೀಲ್ದಾರ್ ಎಲ್.ಸಿ. ನಾಗರಾಜ್, ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಲೆಕ್ಕಾಧಿಕಾರಿಗಳು, ಗ್ರಾಮ ಪಂಚಾಯಿತಿಗಳ ಪಿಡಿಒ ಮತ್ತು ಕಾರ್ಯದರ್ಶಿಗಳು, ಸರ್ವೆ ಅಧಿಕಾರಿಗಳು ಅಲ್ಲದೆ ನಿವೃತ್ತಿ ಪಡೆದ ಕೆಲವು ಅಧಿಕಾರಿಗಳು  ಹಾಜರಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.