ಬೆಂಗಳೂರು ಗ್ರಾಮಾಂತರ

ಸಂಘಟನೆಯಲ್ಲಿ ರಾಜಕೀಯ ಬೆರಸದಿದ್ದಲ್ಲಿ ಜನಾಂಗ ಅಭಿವೃದ್ಧಿ

Published On :

ಕ.ಪ್ರ.ವಾರ್ತೆ   ರಾಮನಗರ   ಡಿ.3
ಒಕ್ಕಲಿಗರ ಸಂಘವು ತಮ್ಮ ಜನಾಂಗದ ಅಭ್ಯುದಯವನ್ನೇ ಗುರಿಯಾಗಿರಿಸಿಕೊಳ್ಳಬೇಕು. ಸಂಘಟನೆಯಲ್ಲಿ ರಾಜಕೀಯ ಬೆರಸದಿದ್ದಲ್ಲಿ ಜನಾಂಗದ ಅಭಿವೃದ್ಧಿ ಸಾಧ್ಯ ಎಂದು ಮಾಜಿ ಶಾಸಕ ಕೆ.ರಾಜು ತಿಳಿಸಿದರು.
ರಾಮನಗರ ನಗರಸಭೆಗೆ ಚುನಾಯಿತರಾಗಿರುವ ಒಕ್ಕಲಿಗ ಸದಸ್ಯರಿಗೆ ನಗರದ ಮಂಜುನಾಥ ಸಮುದಾಯ ಭವನದನಲ್ಲಿ ತಾಲೂಕು ಒಕ್ಕಲಿಗರ ಸಂಘ ಮಂಗಳವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಅದರು, ಯಾವುದೇ ಒಂದು ಜನಾಂಗ ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣ ಅತಿಮುಖ್ಯ. ಒಕ್ಕಲಿಗರ ಸಂಘವು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂದರು.  ಒಕ್ಕಲಿಗರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ, ಉನ್ನತ ಹುದ್ದೆಗಳನ್ನು ಅಲಂಕರಿಸುವಂತಾಗಬೇಕು. ಸ್ಥಿತಿವಂತರು ಜನಾಂಗದ ಕಡುಬಡವರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಮಡಿವಂತಿಕೆ, ಮುಜುಗರ ಬಿಟ್ಟು ಜನಾಂಗದ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ನಗರಸಭೆಗೆ ಆಯ್ಕೆಯಾಗಿರುವವರು ತಮ್ಮ ಪಕ್ಷಕ್ಕೆ ನಿಷ್ಠರಾಗಿದ್ದುಕೊಂಡು ನಗರದ ಜನತೆ ಅನುಭವಿಸುತ್ತಿರುವ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಬೇಕು. ಜತೆಗೆ ಜನಾಂಗದ ಅಭಿವೃದ್ಧಿಗೂ ತಮ್ಮ ಕೈಲಾದ ಕೊಡುಗೆ ನೀಡಬೇಕು. ಬೇರೆ ಜಾತಿಯ ಜನರನ್ನೂ ಕೂಡ ಪ್ರೀತಿಯಿಂದ ಕಾಣಬೇಕು ಎಂದು ಕಿವಿ ಮಾತು ಹೇಳಿದರು.
ರಾಜ್ಯದ ರಾಜಧಾನಿ ಬೆಂಗಳೂರನ್ನು ಕಟ್ಟಿದ್ದು ಕೆಂಪೇಗೌಡರು, ವಿಧಾನಸೌಧ ನಿರ್ಮಿಸಿದ್ದು ಕೆಂಗಲ್ ಹನುಮಂತಯ್ಯನವರು, ಎಸ್.ಎಂ.ಕೃಷ್ಣ ಅವರು ವಿಕಾಸಸೌಧದ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ಒಕ್ಕಲಿಗರು ರಾಜ್ಯಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಆದರೆ, ಹಲವಾರು ಹಂತಗಳಲ್ಲಿ ಒಕ್ಕಲಿಗರು ಅಧಿಕಾರದಿಂದ ವಂಚಿತರಾಗಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಿದೇವರು ವಿಷಾದಿಸಿದರು.
ಸಂಘಟನೆಗಳಿರುವುದು ನಮಗೆ ತೊಂದರೆಯಾದಾಗ ಸಿಡಿದೆದ್ದು ಹೋರಾಡಿ, ನ್ಯಾಯ ದೊರಕಿಸಿಕೊಳ್ಳಲಿಕ್ಕೇ ಹೊರತು ಬೇರೆಯವರ ಮೇಲೆ ದಬ್ಬಾಳಿಕೆ ಮಾಡಲು ಅಲ್ಲ. ಒಕ್ಕಲಿಗರ ಶಕ್ತಿಯ ಬಗ್ಗೆ ಅರಿವು ಮೂಡಿಸಿಕೊಳ್ಳಿ, ರಾಜಕೀಯ ಬದಿಗಿಟ್ಟು ಕ್ರಿಯಾಶೀಲರಾಗುವ ಮೂಲಕ ಜನಾಂಗದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ವಿನಂತಿಸಿದರು.  ನಗರಸಭೆಗೆ ಆಯ್ಕೆಯಾಗಿರುವ ಚೇತನ್ ಕುಮಾರ್, ಶಿವಕುಮಾರ್, ರಾಧಮ್ಮ, ಇಂದಿರಮ್ಮ, ಮಂಗಳಮ್ಮ, ಮೋಹಿತ್ ಮತ್ತು ಆರ್.ಎ.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖಂಡರಾದ ಕಾಂತರಾಜ ಪಟೇಲ್, ಎಲ್.ಕೃಷ್ಣೇಗೌಡ, ಶಾಂತಕುಮಾರ್, ತಿಮ್ಮೇಗೌಡ, ಬಸವರಾಜ್, ಚೇತನ್ ಕುಮಾರ್, ಮಂಜುನಾಥ್,  ಎಲ್. ಸತೀಶ್, ಮರಿಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.