ರಾಜ್ಯಕ್ಕೆ ರಾಜೀವ್ಗಾಂಧಿ ಆರೋಗ್ಯ ವಿವಿ ಲಾಭ ಏನು?
ಸುವರ್ಣ ವಿಧಾನ ಸಭೆ: ರಾಜೀವ್ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಆರಂಭವಾಗಿ ಇಷ್ಟು ವರ್ಷಗಳಾದರೂ ವಿವಿ ಏನು ಸಂಶೋಧನೆ ಮಾಡಿದೆ? ಸರ್ಕಾರಕ್ಕೆ ಏನು ಸಲಹೆ ನೀಡಿದೆ? ಇದರಿಂದ ರಾಜ್ಯಕ್ಕೇನು ಉಪಯೋಗ?
ವೈದ್ಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನೇಮಕಾತಿಗೆ ಅನುಮತಿ ನೀಡುವುದು, ಪರೀಕ್ಷೆಗಳನ್ನು ಮಾಡುವುದು ಬಿಟ್ಟರೆ ಬೇರೆ ಯಾವ ಕೆಲಸವನ್ನೂ ಮಾಡಿಲ್ಲ. ಮಾಡಬೇಕಾದ ಕೆಲಸಗಳನ್ನೂ ಸರಿಯಾಗಿ ಮಾಡೋಲ್ಲ.
ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕವನ್ನು ಸಮರ್ಥಿಸಿಕೊಳ್ಳುವ ಸಂದರ್ಭದಲ್ಲಿ ವಿವಿಯ ಕರ್ಮಕಾಂಡಗಳನ್ನು ಬಿಚ್ಚಿಟ್ಟದ್ದು ಬೇರಾರೂ ಅಲ್ಲ, ಸ್ವತಃ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ್!
ಸಚಿವನಾಗಿ ಜವಾಬ್ದಾರಿಯಿಂದಲೇ ಎಲ್ಲ ಮಾತುಗಳನ್ನು ಹೇಳುತ್ತಿದ್ದೇನೆ. ಕಳೆದ ಆರು ತಿಂಗಳಿನಿಂದ ವಿವಿ ಕಾರ್ಯವೈಖರಿಯನ್ನು ಗಮನಿಸುತ್ತಿದ್ದೇನೆ. ಈ ಸಂದರ್ಭದಲ್ಲಿ ಕಂಡು ಬಂದ ಲೋಪಗಳನ್ನು ಸರಿಪಡಿಸುವ ಉದ್ದೇಶದಿಂದ ವಿಧೇಯಕದ ಮೂಲಕ ಅದಕ್ಕೆ ಕಡಿವಾಣ ಹಾಕಲು ಮುಂದಾಗಿದ್ದೇನೆ ಎಂದರು.
ವಿವಿಯಲ್ಲಿ ಸಿಂಡಿಕೇಟ್ ವ್ಯವಸ್ಥೆ ಇದ್ದರೂ ಅದು ಸರಿಯಿಲ್ಲ. ವಿವಿಯಲ್ಲಿ ನಡೆದ ಅವ್ಯವಹಾರಗಳನ್ನು ನಿಯಂತ್ರಿಸುವ ಶಕ್ತಿಯೂ ಅದಕ್ಕಿಲ್ಲ. ರಾತ್ರೋರಾತ್ರಿ ಕಾಲೇಜುಗಳಿಗೆ ಮಾನ್ಯತೆ ನೀಡುವುದು, ವಿದ್ಯಾರ್ಥಿಗಳ ನೇಮಕಕ್ಕೆ ಅನುಮತಿ ಕೊಡುವುದು... ಹೀಗೆ ವಿವಿಧ ನಿಯಮ ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೂ ನಿಯಂತ್ರಿಸುತ್ತಿಲ್ಲ. ಸಂತೆಯಂತೆ ನಡೆಯುವ ಇಲ್ಲಿನ ವ್ಯವಹಾರಗಳಿಗೆ ಕಡಿವಾಣ ಹಾಕುವುದು ಅಗತ್ಯ ಎಂದರು.
ವಾಗ್ವಾದಕ್ಕೆ ಕಾರಣವಾದ ಕೆಲವು ಪದಗಳು: ವೈದ್ಯರ ಕಾರ್ಯವೈಖರಿ ಮತ್ತು ಖಾಸಗಿ ಆಸ್ಪತ್ರೆಗಳ ಕಾರ್ಯವೈಖರಿಯನ್ನು ಟೀಕಿಸುವ ಸಂದರ್ಭದಲ್ಲಿ ಹಿರಿಯ ಸದಸ್ಯ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಳಸಿದ ಕೆಲವು ಪದಗಳು ವಾಗ್ವಾದಕ್ಕೆ ಕಾರಣವಾಯಿತು.
ರಾಜೀವ್ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕದ ಮೇಲಿನ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ರಮೇಶ್ಕುಮಾರ್, ವಿವಿಗಳು ಈಗ ವ್ಯಾಪಾರದ ಕೇಂದ್ರಗಳಾಗಿವೆ. ಹಣ ನೀಡಿ ಡಾಕ್ಟರೇಟ್ ಪದವಿ ಖರೀದಿಸುತ್ತಿದ್ದಾರೆ. ಸಿಂಡಿಕೇಟ್ ಸದಸ್ಯರು, ಸೆನೆಟ್ ಸದಸ್ಯರ ಚುನಾವಣೆಗಳು ವಿಧಾನಸಭೆ ಚುನಾವಣೆ ನಾಚಿಸುವ ರೀತಿ ನಡೆಯುತ್ತಿವೆ. ಇಂಥವರಿಂದಲೇ ವಿವಿ ಸ್ಥಿತಿ ಹಾಳಾಗಿದೆ ಎಂದರು.
ನಮ್ಮ ವಿವಿಗಳು ಸಂತೆಗಳಂತಿವೆ. ರೈತ ತಾನು ಬೆಳೆದ ಉತ್ಪನ್ನವನ್ನು ಮಾರುಕಟ್ಟೆಯಲ್ಲಿ ಕೊಂಡೊಯ್ದಾಗ ಬೇಕಾದ ಗ್ರಾಹಕ ಹಣ ಕೊಟ್ಟು ಅದನ್ನು ಕೊಂಡುಕೊಳ್ಳುತ್ತಾನೆ. ಇದನ್ನು ಸಂತೆ ಎನ್ನುತ್ತೇವೆ. ಅದೇ ರೀತಿ ವಿವಿಗಳು ಪದವಿಗಳನ್ನು ಮಾರಾಟಕ್ಕಿಟ್ಟಿವೆ. ಬೇಕಾದವರು ಹಣ ಕೊಟ್ಟು ಖರೀದಿಸುತ್ತಾರೆ ಎಂದರು.
ನಂತರ ವೈದ್ಯರ ಕಾರ್ಯವೈಖರಿ ಕುರಿತಂತೆ ಪ್ರಸ್ತಾಪಿಸಿದ ರಮೇಶ್ ಕುಮಾರ್, ವೈದ್ಯರಾದವರು ಮಾನವೀಯತೆ ಬಿಟ್ಟು ಅಮಾನವೀಯರಂತೆ ವರ್ತಿಸುತ್ತಾರೆ ಎಂದು ಹೇಳಿದ್ದು ಬಿಜೆಪಿ ಸದಸ್ಯ ಡಾ. ಅಶ್ವತ್ಥನಾರಾಯಣ ಅವರನ್ನು ಕೆರಳಿಸಿತು.
ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಾಗ ಮಾತು ಮುಂದುವರಿಸಿದ ರಮೇಶ್ಕುಮಾರ್, ಆಸ್ಪತ್ರೆಗಳಲ್ಲಿ ಯಾವ ರೀತಿ ಲೂಟಿ, ಜನರ ಶೋಷಣೆ ನಡೆಯುತ್ತದೆ ಎಂಬುದನ್ನು ವಿವರಿಸಲು ನಾನು ಸಿದ್ಧ. ಇದಕ್ಕಾಗಿ ಅವಕಾಶ ಕೊಡಿ ಎಂದು ಕೋರಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಶ್ವತ್ಥನಾರಾಯಣ್, ಎಲ್ಲ ವೈದ್ಯರ ಬಗ್ಗೆ ಸಾರಾಸಗಾಟಾಗಿ ಆರೋಪಿಸುವುದು ಸರಿಯಲ್ಲ.
ಎಲ್ಲ ವೈದ್ಯರೂ ಒಂದೇ ರೀತಿ ಇರುತ್ತಾರೆ ಎಂದಾದರೆ ರಮೇಶ್ಕುಮಾರ್ ಅವರು ತಮಗೆ ಆರೋಗ್ಯ ಸಮಸ್ಯೆ ಉದ್ಭವವಾದಾಗ ಚಿಕಿತ್ಸೆ ಪಡೆಯಲು ದೇವರ ಬಳಿ ಹೋಗುತ್ತಾರೆಯೇ ಎಂದು ಪ್ರಶ್ನಿಸಿದರು. ಮಾತು ಹಾದಿ ತಪ್ಪುತ್ತಿರುವುದನ್ನು ಗಮನಿಸಿದ ಸಭಾಧ್ಯಕ್ಷರ ಪೀಠದಲ್ಲಿ ಉಪಾಧ್ಯಕ್ಷ ಶಿವಶಂಕರರೆಡ್ಡಿ ಅವರು ಸದಸ್ಯರನ್ನು ಸಮಾಧಾನಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

