ಬೆಂಗಳೂರು ಗ್ರಾಮಾಂತರ

ಸಕಾಲಕ್ಕೆ ಇಲ್ಲಿ ಬೆಲೆಯೇ ಇಲ್ಲ...

Published On :

ಕೆ.ಆರ್.ರವಿಕಿರಣ್
ಕ.ಪ್ರ.ವಾರ್ತೆ   ದೊಡ್ಡಬಳ್ಳಾಪುರ   ಡಿ. 4
ರಾಜ್ಯ ಸರ್ಕಾರ ಸಾರ್ವಜನಿಕ ಸೇವೆಗಳನ್ನು ವ್ಯವಸ್ಥಿತವಾಗಿ ಜನರಿಗೆ ನೀಡುವ ಉದ್ದೇಶದಿಂದ ಜಾರಿಗೆ ತಂದ ಸಕಾಲ ಯೋಜನೆ ದೊಡ್ಡಬಳ್ಳಾಪುರದಲ್ಲಿ ಅಕ್ಷರಶಃ ನಾಗರಿಕಸ್ನೇಹಿಯಾಗಿಲ್ಲ. ತಾಲೂಕು ಕಚೇರಿಯ ವ್ಯಾಪ್ತಿಗೆ ಬರುವ 128 ಸೇವೆಗಳ ಪೈಕಿ ಕೆಲವು ಸೇವೆಗಳಿಗೆ ಮಾತ್ರವೇ ಸೀಮಿತವಾಗಿರುವ ಸಕಾಲ ಹಲವು ಮಂದಿಗೆ ಬಿಸಿತುಪ್ಪವಾಗಿ ಪರಿಣಮಿಸಿರುವುದು ನಾಗರಿಕರ ಹಿಡಿಶಾಪಕ್ಕೆ ಕಾರಣವಾಗಿದೆ.
ಯೋಜನೆ ಹಳ್ಳ ಹಿಡಿದಿದೆ ಎಂಬ ನೇರ ಆರೋಪ ದಿನನಿತ್ಯ ತಾಲೂಕು ಕಚೇರಿಗೆ ಅಲೆದು ಅಲೆದು ಸುಸ್ತಾದ ಸಾರ್ವಜನಿಕರದ್ದು. ಇಲ್ಲಿನ ತಾಲೂಕು ಕಚೇರಿ ಪ್ರವೇಶಿಸುತ್ತಲೇ ಬಲ ಭಾಗಕ್ಕೆ ಸಕಾಲದ ದೊಡ್ಡ ದೊಡ್ಡ ಉದ್ದೇಶಗಳನ್ನು ಬಿಂಬಿಸುವ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಗಿದೆ. ಅಲ್ಲೇ ಸಕಾಲ ಅರ್ಜಿಗಳ ವಿತರಣೆ ಮತ್ತು ಸಂಪರ್ಕ ಕೇಂದ್ರ ಕೂಡ ಇದೆ. ಆದರೆ ಈ ಕೇಂದ್ರ ಬಾಗಿಲು ತೆರೆದು ಕೆಲಸ ನಿರ್ವಹಿಸಿದ್ದು ಮಾತ್ರ ತೀರಾ ವಿರಳ. ವಾರದಲ್ಲಿ ಒಂದೆರಡು ದಿನವೂ ಈ ಕೇಂದ್ರದ ಬಾಗಿಲು ತೆರೆಯೋದಿಲ್ಲ. ಇನ್ನು ಸಾರ್ವಜನಿಕರ ಹಿತಾಸಕ್ತಿಯನ್ನು ಕೇಳಬೇಕಾದ ಅಧಿಕಾರಿಗಳು ತಮ್ಮದೇ ಕೆಲಸದಲ್ಲಿ ಬ್ಯುಸಿಯಾಗಿರುತ್ತಾರೆ. ಹೀಗಿರುವಾಗ ಯಾರ ಬಳಿ ಸಾರ್ವಜನಿಕರು ಅಳಲು ತೋಡಿಕೊಳ್ಳಬೇಕೋ ಗೊತ್ತಿಲ್ಲ ಎಂಬುದು ಸ್ಥಳೀಯ ನಾಗರಿಕ ಹನುಮಂತು ಎಂಬುವವರ ಆರೋಪ.
ದಲ್ಲಾಳಿಗಳ ಕೇಂದ್ರ : ಸಕಾಲ ಯೋಜನೆ ಬಂದ ಮೇಲೆ ಅದನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳು ಪ್ರಯತ್ನಿಸಿಲ್ಲ. ದೊಡ್ಡಬಳ್ಳಾಪುರ ಸುತ್ತಮುತ್ತ ಭೂಮಿಯ ಬೆಲೆ ಗಗನಕ್ಕೇರಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ದಲ್ಲಾಳಿಗಳು ತಾಲೂಕು ಕಚೇರಿಯಲ್ಲಿ ದೊಡ್ಡ ದಂಧೆಯನ್ನೇ ಮಾಡುತ್ತಿದ್ದಾರೆ.  ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವೂ ಸೇರಿದೆ. ಸಕಾಲಕ್ಕೆ ದೊರೆಯಬೇಕಾದ ಸೇವೆ ಕಮಿಷನ್‌ಗೆ ಮಾತ್ರ ಮೀಸಲಾಗಿರುವುದು ದುರಂತ. ಸಾರ್ವಜನಿಕರ ಅರ್ಜಿ ವಿಲೇವಾರಿ ಮಾಡಬೇಕಾದ ಜಾಗ ಕೊಡು-ಕೊಳ್ಳುವಿಕೆಯ ತಾಣವಾಗಿ ಮಾರ್ಪಟ್ಟಿದೆ. ಒಂದು ಸಣ್ಣ ಕೆಲಸ ಆಗಬೇಕಿದ್ದರೂ ಮಧ್ಯವರ್ತಿಗಳನ್ನೇ ಅವಲಂಭಿಸಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದು ಸಕಾಲ ಯೋಜನೆ ಅವ್ಯವಸ್ಥೆಯ ಬಗ್ಗೆ ನಾಗರಿಕ ಕಾಕೋಳು ರವಿ ಆರೋಪಿಸುತ್ತಾರೆ.
ಸರ್ವೇ ಸಂಬಂಧಿತ ವಿಲೇವಾರಿ ತಾಲೂಕು ಕಚೇರಿಯ ನೆಮ್ಮದಿ ಕೇಂದ್ರ ವ್ಯಾಪ್ತಿಯಲ್ಲಿ ಸಕಾಲ ಯೋಜನೆಯಡಿ ಸರ್ವೇ ಸಂಬಂಧಿತ ಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡಲಾಗುತ್ತಿದೆ. ದಿನಕ್ಕೆ 20ರಿಂದ 30 ಅರ್ಜಿಗಳು ವ್ಯವಸ್ಥಿತವಾಗಿ ವಿಲೇವಾರಿ ಆಗುತ್ತಿವೆ ಎನ್ನಲಾಗಿದೆ. ಉಳಿದ ಸೇವೆಗಳ ಬಗ್ಗೆ ವ್ಯವಸ್ಥಿತವಾದ ಉತ್ತರ ಪಡೆಯುವುದು ಕಷ್ಟಸಾಧ್ಯ. ಪಹಣಿ, ನಾಗರೀಕ ಸೇವೆ, ಆಹಾರ ಸಂಬಂಧಿತ ಮಾಹಿತಿ, ರೇಷನ್‌ಕಾರ್ಡ್, ಮ್ಯೂಟೇಷನ್, ವಿವಿಧ ಪ್ರಮಾಣ ಪತ್ರಗಳು, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಸೇರಿದಂತೆ ಹಲವು ಸೇವೆಗಳು ನಾಗರಿಕರಿಗೆ ಸರ್ಕಾರದ ನಿಯಮಾವಳಿಯಷ್ಟು ಸುಲಭದಲ್ಲಿ ದೊರೆಯುತ್ತಿಲ್ಲ. ತಾಲೂಕು ಕಚೇರಿಯ ಕೆಲ ಸೇವೆಗಳು ಹಣವುಳ್ಳವರಿಗೆ ಮಾತ್ರ ಎಂಬಂತಾಗಿದೆ ಎಂಬ ಗಂಭೀರ ಆರೋಪವನ್ನೂ ನಾಗರೀಕರು ಮಾಡುತ್ತಿದ್ದಾರೆ.
ಕರ್ನಾಟಕ ನಾಗರಿಕ ಸೇವಾ ಖಾತರಿ ವ್ಯವಸ್ಥೆಯಲ್ಲಿ ಸೇವಾ ನಿರ್ವಹಣೆ, ಕೋರಿಕೆ-ನಮೂದು, ನವೀಕರಿಸಲಾದ ಸ್ಥಿತಿ ಗತಿಗಳ ಬಗ್ಗೆ, ಮೊಬೈಲ್ ಸೇವಾ ನಿರ್ವಹಣೆ, ಅನರ್ಹ ಸೇವಾ ಕೋರಿಕೆ, ಸೇವಾ ವಿನಂತಿ ಸ್ಥಿತಿ, ಅನುಮೋದನೆ, ನಿರಾಕರಣೆ, ಬಾಕಿ ಇರುವ ವರದಿಗಳ ವೀಕ್ಷಣೆ, ವರದಿ ವೀಕ್ಷಣೆ, ದಿನಾಂಕವಾರು ಸ್ವೀಕೃತಿ ವರದಿ, ವಿಲೇವಾರಿ ವರದಿ, ಬಾಕಿ ಇರುವ ಸೇವಾ ವರದಿ, ತಡವಾಗಿ ವಿಲೇವಾರಿಯಾದ ವರದಿ, ದಿನಗಳ ಪ್ರಕಾರ ಬಾಕಿ ಇರುವ ವರದಿ ಸೇರಿದಂತೆ ಹಲವು ಹಂತಗಳಲ್ಲಿ ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ಸಿಗುತ್ತಲೇ ಇಲ್ಲ. ಈ ಬಗ್ಗೆ ಯಾವ ಅಧಿಕಾರಿಯನ್ನು ಕೇಳಿದರೂ ಅವರದೇ ಆದ ವಿವರಣೆಗಳನ್ನು ನೀಡುತ್ತಾರೆ. ಪರಿಸ್ಥಿತಿ ಹೀಗಾದರೆ ವ್ಯವಸ್ಥೆಯ ಗತಿಯೇನು ಎಂಬುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ.



ಸಕಾಲ ಯೋಜನೆಯಡಿ ಬರುವ ಎಲ್ಲ ಸೇವೆಗಳಿಗೂ ಅರ್ಜಿ ಸ್ವೀಕರಿಸಲಾಗುತ್ತಿದೆ. ಸಕಾಲ ಅರ್ಜಿ ವಿಲೇವಾರಿ ಕೇಂದ್ರವೂ ಕಾರ್ಯನಿರ್ವಹಿಸುತ್ತಿದೆ. ಸಿಬ್ಬಂದಿ ಕೊರತೆ ಇರುವ ಕೆಲ ಸಂದರ್ಭದಲ್ಲಿ ಮಾತ್ರ ಸಾರ್ವಜನಿಕರಿಗೆ ಸಣ್ಣಪುಟ್ಟ ತೊಂದರೆಗಳಾಗುತ್ತಿವೆ. ಜೆರಾಕ್ಸ್ ಯಂತ್ರ ಕೈಕೊಟ್ಟಿರುವ ಪರಿಣಾಮ ಸ್ಪಲ್ಪ ಮಟ್ಟಿಗೆ ಸೇವೆಯಲ್ಲಿ ತೊಡಕಾಗಿದೆ. ಉಳಿದಂತೆ ಎಲ್ಲ ಯೋಜನೆಗಳಲ್ಲೂ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನೇ ನೀಡಲಾಗುತ್ತಿದೆ. ಸಾರ್ವಜನಿಕರು ಮಧ್ಯವರ್ತಿಗಳನ್ನು ಅವಲಂಬಿಸದೆ ನೇರವಾಗಿ ಅಧಿಕಾರಿಗಳ ಬಳಿಯೇ ಸೇವೆಗಳ ಬಗ್ಗೆ ಮಾಹಿತಿ ಪಡೆಯಬೇಕು. ಸಕಾಲ ಯೋಜನೆಗೆ ಯಾವ ತೊಡಕೂ ಇಲ್ಲ.
ಟಿ ರಮೇಶ್, ಶಿರಸ್ತೇದಾರ್, ದೊಡ್ಡಬಳ್ಳಾಪುರ


ಹೇಳಿದ ಕಾಲಕ್ಕೆ ಒಂದೂ ಸೇವೆ ಲಭ್ಯವಾಗೋದಿಲ್ಲ. ಅರ್ಜಿ ಸಲ್ಲಿಸುವ ಹಂತದಿಂದ ಪ್ರತಿಹಂತದಲ್ಲೂ ಮಧ್ಯವರ್ತಿಗಳ ಕಾಟ ತಾಂಡವವಾಡುತ್ತಿದೆ. ಜನರಿಗೆ ಸಾರ್ವಜನಿಕ ಸೇವೆಗಳ ವ್ಯವಸ್ಥೆ ಬಗ್ಗೆಯೇ ಜಿಗುಪ್ಸೆ ಬಂದಿದೆ. ಪಾರದರ್ಶಕವಾಗಿ ಸೇವೆ ಒದಗಿಸಬೇಕು. 128 ಯೋಜನೆಗಳ ಪೈಕಿ ಕೆಲ ಯೋಜನೆಗಳಿಗಷ್ಟೇ ತಾಲೂಕು ಕಚೇರಿಯಲ್ಲಿ ಸಕಾಲ ಯೋಜನೆ ಸೀಮಿತವಾಗಿರುವುದು ಖಂಡನೀಯ. ಅಧಿಕಾರಿಗಳು ಗಮನ ಹರಿಸಬೇಕು.
ಟಿ ಸೋಮಶೇಖರ್, ನಾಗರೀಕ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.