ಮಹಾಲಿಂಗೇಶ್ವರಸ್ವಾಮಿ ದೇಗುಲದಲ್ಲಿ ಪೂಜೆ
ನೆಲಮಂಗಲ: ಪಟ್ಟಣದ ಕೆರೆ ಏರಿಯ ಶ್ರೀ ಮಹಾಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ಕಾರ್ತೀಕ ಮಾಸದ ಅಂತಿಮ ದಿನವಾದ ಸೋಮವಾರ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಸ್ವಾಮಿಗೆ ವಿಶೇವಾಗಿ ಅಲಂಕರಿಸಿದ್ದರು. ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕಾರ್ಯಗಳನ್ನು ನಡೆಸಿ ಬಂದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ದಕ್ಷಿಣಕಾಶಿ ಶಿವಗಂಗೆಯಲ್ಲಿನ ಶ್ರೀ ಗಂಗಾಧರೇಶ್ವರ ಮತ್ತು ಹೊನ್ನಾದೇವಿ ದೇವಾಲಯಗಳಲ್ಲಿ ಕಾರ್ತೀಕ ಸೋಮವಾರದ ಪ್ರಯುಕ್ತ ಸಾವಿರಾರು ಭಕ್ತರು ಮುಂಜಾನೆಯಿಂದಲೇ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಪಟ್ಟಣದಲ್ಲಿರುವ ಶ್ರೀ ಕಾಶಿವಿಶ್ವನಾಥ ಸ್ವಾಮಿ ದೇವಾಲಯ , ಶ್ರೀ ರುದ್ರೇಶ್ವರ ಸ್ವಾಮಿ ದೇವಾಲಯ, ಶ್ರೀ ಮುಕ್ತನಾಥೇಶ್ವರ ಸ್ವಾಮಿ ದೇವಾಲಯ, ಶ್ರೀ ಶನೇಶ್ವರ ಸ್ವಾಮಿ ದೇವಾಲಯಗಳಲ್ಲಿ ದೇವರ ದರ್ಶನಕ್ಕಾಗಿ ಸರದಿ ಸಾಲಿನಲ್ಲಿ ನಿಂತು ಭಕ್ತರು ಪೂಜೆ ಸಲ್ಲಿಸಿ ದರ್ಶನಭಾಗ್ಯ ಪಡೆದರು.
ರಾಜ್ಯೋತ್ಸವ, ವಿಶ್ವ ಏಡ್ಸ್ ದಿನಾಚರಣೆ
ದೇವನಹಳ್ಳಿ: ಇಲ್ಲಿನ ಡಾ.ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಯುವಶಕ್ತಿ ಸಂಘದ ಕಾರ್ಯಕರ್ತರು ಎರಡು ದಿನಗಳ ಕನ್ನಡ ರಾಜ್ಯೋತ್ಸವ ಹಾಗೂ ವಿಶ್ವ ಏಡ್ಸ್ ದಿನಾಚರಣೆ ಸಮಾರಂಭ ಆಯೋಜಿಸಿದ್ದರು. ಸಮಾರಂಭದ ಉದ್ಘಾಟನೆಯನ್ನು ಶಾಸಕ ಪಿಳ್ಳಮುನಿಶಾಮಪ್ಪ ನೆರವೇರಿಸಿದರು. ತಹಸೀಲ್ದಾರ್ ಡಾ.ವೆಂಕಟರಾಜು, ಪುರಸಭಾ ಮುಖ್ಯಾಧಿಕಾರಿ ಮಂಜುನಾಥ್, ಬಯಪ ಸದಸ್ಯ ಕಾರ್ಯದರ್ಶಿ ತಿಪ್ಪಣ್ಣ ಹಾಗೂ ಮಾಜಿ ಪುರಸಭಾಧ್ಯಕ್ಷ ಸಿ. ಜಗನ್ನಾಥ್ ಅವರನ್ನು ಮಾಜಿ ಪುರಸಭಾ ಅಧ್ಯಕ್ಷ ಎಸ್.ಲಕ್ಷ್ಮೀನಾರಾಯಣ್ ಶಾಲುಹೊದಿಸಿ ಸನ್ಮಾನಿಸಿದರು. ಸಂಘದ ಅಧ್ಯಕ್ಷ ಎಂ.ಮೂರ್ತಿ ಸ್ವಾಗತ ಕೋರಿದರು. ರಾಜ್ಯೋತ್ಸವ ಅಂಗವಾಗಿ ಅನುಪಮ ಮೆಲೋಡೀಸ್ ತಂಡದವರಿಂದ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪಿಯು ಕಾಲೇಜು ವಿದ್ಯಾರ್ಥಿ ನಾಪತ್ತೆ
ಸೂಲಿಬೆಲೆ: ಹೊಸಕೋಟೆ ತಾ.ನಂದಗುಡಿ ಹೋಬಳಿಯ ದೊಡ್ಡದಿನ್ನಹಳ್ಳಿ ಗ್ರಾಮದ ನಾರಾಯಣಸ್ವಾಮಿ ಎಂಬವರ ಮಗ ಚನ್ನಕೇಶವ ನಾಪತ್ತೆಯಾಗಿದ್ದಾನೆ ಎಂದು ನಂದಗುಡಿ ಪೊಲೀಸರಿಗೆ ದೂರು ನೀಡಲಾಗಿದೆ. ನಂದಗುಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಚನ್ನಕೇಶವನ.29 ರಂದು ಮನೆಯಿಂದ ಕಾಲೇಜಿಗೆಂದು ಹೋದವನು ನಂತರ ಮನೆಗೆ ವಾಪಸ್ ಬಂದಿರುವುದಿಲ್ಲ. ನಂದಗುಡಿಯಿಂದ ಎಲ್ಲಿಗೆ ಹೋದನು ಎಂಬುದು ಪತ್ತೆಯಾಗಿಲ್ಲ. 17 ವರ್ಷ, ಕೋಲು ಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, 4 ಅಡಿ ಎತ್ತರ, ಕನ್ನಡ, ತೆಲುಗು ಭಾಷೆ ಮಾತನಾಡುತ್ತಾನೆ. ಈತನನ್ನು ಕಂಡವರು ನಂದಗುಡಿ ಪೊಲೀಸ್ ಠಾಣೆ ದೂ.ಸಂಖ್ಯೆ-080-27961250 ಸಂಪರ್ಕಿಸುವಂತೆ ಪೊಲೀಸರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಕೇಂಬ್ರಿಡ್ಜ್ ಶಾಲೆಗೆ ಸಮಗ್ರ ಪ್ರಶಸ್ತಿ
ಚನ್ನಪಟ್ಟಣ: ರಾಮನಗರದಲ್ಲಿ ಕರಾಟೆ ಟೀಚರ್ಸ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಪಟ್ಟಣದ ಕೇಂಬ್ರಿಡ್ಜ್ ಶಾಲೆಯ ಮಕ್ಕಳು ಸಮಗ್ರ ಪ್ರಶಸ್ತಿ ಪಡೆದಿದ್ದಾರೆ. ಪಂದ್ಯಾವಳಿಯಲ್ಲಿ ಪಾಲ್ಗೊಂಡು ಹೆಚ್ಚಿನ ಪ್ರಶಸ್ತಿ ಪಡೆಯುವ ಮೂಲಕ ಶಾಲೆಯ ಕೀರ್ತಿ ಹೆಚ್ಚಿಸಿದ ವಿದ್ಯಾರ್ಥಿಗಳಿಗೆ ಹಾಗೂ ತರಬೇತುದಾರ ಅನಂತ್.ಸಿ ಅವರನ್ನು ಸಂಸ್ಥೆಯ ಕಾರ್ಯದರ್ಶಿ ಎಸ್.ಲಿಂಗೇಶ್ಕುಮಾರ್, ಟ್ರಸ್ಟಿ ಚಿತ್ರಾ ಲಿಂಗೇಶ್ಕುಮಾರ್, ಪ್ರಾಂಶುಪಾಲೆ ರೇಣುಕಾದೇವಿ ಅಭಿನಂದಿಸಿದ್ದಾರೆ.
ಪ್ರತಿಭಾ ಕಾರಂಜಿ
ಸೂಲಿಬೆಲೆ: ಇಲ್ಲಿಗೆ ಸಮೀಪದ ಬೆಂಡಿಗಾನಹಳ್ಳಿ ಕ್ಲಸ್ಟರ್ ವ್ಯಾಪ್ತಿಯ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ನ.5 ರಂದು ಋಷಿಕುಲ ವಿದ್ಯಾಪೀಠದಲ್ಲಿ ಆಯೋಜಿಸಲಾಗಿದೆ ಎಂದು ಸಿಆರ್ಪಿ ಮುತ್ತುರಾಜ್ ತಿಳಿಸಿದ್ದಾರೆ. ಸೂಲಿಬೆಲೆ ಸಮೀಪದ ಚಿಕ್ಕಅರಳಿಗೆರೆ ಗ್ರಾಮದಲ್ಲಿರು ವಿದ್ಯಾಪೀಠದಲ್ಲಿ ಬೆ.10 ಗಂಟೆ ಕಾರಂಜಿ ಕಾರ್ಯಕ್ರಮವನ್ನು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ಎನ್. ಗೋಪಾಲಗೌಡ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ. ಸತೀಶ್ ಗೌಡ ವಹಿಸಲಿದ್ದಾರೆ. ಜಿಪಂ ಸದಸ್ಯೆ ವೆಂಕಟಲಕ್ಷಮ್ಮ, ತಾಪಂ ಸದಸ್ಯ ಬಿ.ವಿ. ರಾಜಶೇಖರ್ ಗೌಡ, ಮಂಜುಳಾ ವೆಂಕಟೇಶ್, ಕ್ಷೇತ್ರಾ ಶಿಕ್ಷಣಾಧಿಕಾರಿ ಬೈಲಾಂಜಿನಪ್ಪ, ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.
ಮೌನ ಮೆರವಣಿಗೆ
ಚನ್ನಪಟ್ಟಣ : ಡಾ. ಅಂಬೇಡ್ಕರ್ ಪರಿನಿಬ್ಬಾಣ ದಿನದ ಅಂಗವಾಗಿ ತಾಲೂಕು ದಲಿತ ಸಂಘರ್ಷ ಸಮಿತಿ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಗಾಗಿ ಆಗ್ರಹಿಸಿ ಡಿ.6 ರಂದು ಮೌನ ಮೆರವಣಿಗೆ ಹಮ್ಮಿ ಕೊಂಡಿದೆ. ಸಂಜೆ ಆರುಗಂಟೆಗೆ ಪಟ್ಟಣದ ಕುವೆಂಪು ಪ್ರತಿಮೆಯಿಂದ ತಾಲೂಕು ಕಚೇರಿ ವರೆಗೆ ಮೌನ ಮೆರವಣಿಗೆ ನಡೆಸಿ ಖಾಸಗಿ ವಲಯದಲ್ಲೂ ಶೋಷಿತ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸುವುದಾಗಿ ದಸಂಸ ಸಂಚಾಲಕ ವೆಂಕಟೇಶ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

