ಏಡ್ಸ್ ಮುಕ್ತ ರಾಷ್ಟ್ರವನ್ನಾಗಿಸಲು ಪ್ರತಿಯೊಬ್ಬರೂ ಪಣ ತೊಡಿ
ರಾಮನಗರ: ಭಾರತವನ್ನು ಏಡ್ಸ್ ಮುಕ್ತ ರಾಷ್ಟ್ರವನ್ನಾಗಿಸಲು ಪ್ರತಿಯೊಬ್ಬರೂ ಪಣ ತೊಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ವೆಂಕಟಾಚಲಮೂರ್ತಿ ಕರೆ ನೀಡಿದರು.
ಜಿ.ಪಂ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ, ಎಂ.ಎಚ್.ಸಮೂಹ ಶಿಕ್ಷಣ ಸಂಸ್ಥೆಯಿಂದ ನಗರದಲ್ಲಿ ಗುರುವಾರ ನಡೆದ ಏಡ್ಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಚ್ಐವಿ ಮತ್ತು ಏಡ್ಸೆ ಲೈಂಗಿಕ ಸಂಪರ್ಕದ ಕಾರಣಕ್ಕೇ ಬರಬೇಕೆಂದಿಲ್ಲ. ಇತರೆ ಕಾರಣಗಳಿಂದಲೂ ಹರಡುವ ಸಾಧ್ಯತೆ ಇದೆ. ಹೀಗಾಗಿ ಪ್ರತಿಯೊಬ್ಬರೂ ಅಂಜಿಕೆ, ಮುಜುಗರ ಬಿಟ್ಟು ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ ಎಂದು ಅವರು ಸಲಹೆ ನೀಡಿದರು.
ಎಚ್ಐವಿ ವೈರಸ್ ಮೂಲದಿಂದ ಏಡ್ಸ್ ರೋಗ ಬರುತ್ತಿದೆ. ಸೋಂಕುಳ್ಳ ವ್ಯಕ್ತಿಯ ರಕ್ತ ದಾನ ಪಡೆಯುವುದು, ಅಂತಹವರ ಜತೆ ಲೈಂಗಿಕ ಸಂಪರ್ಕ, ಸೋಂಕಿನ ವ್ಯಕ್ತಿಗೆ ಚುಚ್ಚುಮದ್ದು ನೀಡಿದ ಸಿರಂಜ್ ಅನ್ನು ಇತರೆ ಆರೋಗ್ಯವಂತರಿಗೆ ಬಳಸುವುದರಿಂದಲೂ ಏಡ್ಸ್ ಹರಡುತ್ತದೆ ಎಂದರು. ಎಚ್ಐವಿ ಸೋಂಕಿನ ವ್ಯಕ್ತಿಗಳನ್ನು ಪ್ರೀತಿ, ವಿಶ್ವಾಸ ಮತ್ತು ವಿನಯದಿಂದ ಕಾಣಬೇಕು. ಯಾವುದೇ ಕಾರಣಕ್ಕೂ ಅವರನ್ನು ಅಸ್ಪೃಶ್ಯರಂತೆ ಕಂಡು, ಅವರಲ್ಲಿ ಆತ್ಮಸ್ಥೈರ್ಯ ಕುಂದಿಸುವ ಕೆಲಸ ಸಲ್ಲದು ಎಂದು ಡಾ.ವೆಂಕಟಾಚಲಮೂರ್ತಿ ತಿಳಿಸಿದರು.
ಎಂ.ಎಚ್. ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ಎಚ್.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ರಾಮನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿ ನಾಗಮಣಿ ಮಾತನಾಡಿದರು. ಏಡ್ಸ್ ಜಾಗೃತಿ ಕುರಿತು ಪ್ರಬಂಧ ಸ್ಪರ್ಧೆ ಹಾಗೂ ಚರ್ಚಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ನಿವೃತ್ತ ಶಿಕ್ಷಕರಾದ ನಾಗರಾಜು ಏಡ್ಸ್ ಕುರಿತು ಚುಟುಕು ಹೇಳಿದರೆ, ವಿನಯಕುಮಾರ್ ಜಾಗೃತಿ ಗೀತೆಗಳನ್ನು ಹಾಡಿದರು. ಕುದೂರಿನ ಆಶಾ ಕಾರ್ಯಕರ್ತೆ ಅನಸೂಯ ಹಾಗೂ ಜಿಲ್ಲಾ ಆಸ್ಪತ್ರೆಯ ಕ್ಷಯ ರೋಗ ವಿಭಾಗದ ನೌಕರ ಉಗ್ರನರಸಿಂಹ ಅವರನ್ನು ಸನ್ಮಾನಿಸಲಾಯಿತು. ಎಂ.ಎಚ್. ಕಾಲೇಜಿನ ಪ್ರಾಂಶುಪಾಲರಾದ ಬಿಂದುಸಾರ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಬಿ. ಭಾರತಿ ಭಾಗವಹಿಸಿದ್ದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಮಹೇಶ್ ಸ್ವಾಗತಿಸಿದರು. ಕಾರ್ಯಕ್ರಮಕ್ಕೂ ಮುನ್ನ ಏಡ್ಸ್ ಜಾಗೃತಿ ಜಾಥಾಕ್ಕೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯನರಸಿಂಹ ಚಾಲನೆ ನೀಡಿದರು.
ಬಹುಮಾನ ವಿಜೇತರು: ಪ್ರಬಂಧ ಸ್ಪರ್ಧೆಯಲ್ಲಿ ಎಂ.ಎಚ್. ಕಾಲೇಜಿನ ವಿದ್ಯಾರ್ಥಿ ಸುಪ್ರಿಯ(ಪ್ರಥಮ), ಮಂಜುಳ(ದ್ವಿತಿಯ), ಸೌಜನ್ಯ (ತೃತೀಯ) ಬಹುಮಾನ ಪಡೆದರು. ಏಡ್ಸ್ ಕುರಿತ ಘೋಷಣೆಗೆ ರೂಪಶ್ರೀ(ಪ್ರಥಮ), ಭಿತ್ತಿ ಚಿತ್ರ ಸ್ಪರ್ಧೆಯಲ್ಲಿ ಅಶ್ವಿನಿ ಪ್ರಥಮ ಬಹುಮಾನ ಪಡೆದರು.
ರಾಮನಗರದಲ್ಲಿ ನಿಯಂತ್ರಣ
ಜಿಲ್ಲೆಯಲ್ಲಿ 2009 ರಿಂದ 2013ರ ವರೆಗೆ ಸುಮಾರು 1.04 ಲಕ್ಷ ಮಂದಿ ರಕ್ಷ ಪರೀಕ್ಷೆಗೆ ಒಳಗಾಗಿದ್ದಾರೆ. ಇವರಲ್ಲಿ 1314 ಮಂದಿಗೆ ಎಚ್ಐವಿ ಸೋಂಕು ಇರುವುದು ದೃಢಪಟ್ಟಿದೆ. ಈ ಪೈಕಿ 1053 ಸೋಂಕು ಪೀಡಿತರು ಸ್ಥಳೀಯವಾಗಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಪ್ತ ಸಮಾಲೋಚಕಿ ಹಾಗೂ ಐಸಿಟಿಸಿ ಮೇಲ್ವಿಚಾರಕಿ ನಳಿನಿ ವಿವರಿಸಿದರು. ಹೊರ ಜಿಲ್ಲೆ ಮತ್ತು ರಾಜ್ಯಗಳ ಎಚ್ಐವಿ ಸೋಂಕಿತ 1632 ಮಂದಿಯು ಈ ಜಿಲ್ಲೆಗೆ ಬಂದು ನೊಂದಣಿ ಮಾಡಿಸಿಕೊಂಡು, ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಮನಗರ ಜಿಲ್ಲೆಯಲ್ಲಿ 2004ರಲ್ಲಿ ಶೇಕಡ 1.5ರಷ್ಟಿದ್ದ ಎಚ್ಐವಿ ಸೋಂಕಿತರ ಪ್ರಮಾಣ ಪ್ರಸ್ತುತ ಶೇಕಡ 0.05ಕ್ಕೆ ಇಳಿದಿದ್ದು, ಬಹುತೇಕ ನಿಯಂತ್ರಣಕ್ಕೆ ಬಂದಿದೆ ಎಂದರು. ಜಿಲ್ಲಾಸ್ಪತ್ರೆ, 3 ತಾಲೂಕು ಆಸ್ಪತ್ರೆಗಳು, 4 ಸಮುದಾಯ ಆರೋಗ್ಯ ಕೇಂದ್ರಗಳು ಸಹಿತ ಜಿಲ್ಲೆಯ 8 ಕಡೆ ಆಪ್ತ ಸಮಾಲೋಚನೆ ಮತ್ತು ಎಚ್ಐವಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ ದಿನ 24 ತಾಸು ರಕ್ತ ತಪಾಸಣೆ ಹಾಗೂ ಚಿಕೆತ್ಸೆ ಮುಂದುವರೆದಿದೆ ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

