ಬೆಂಗಳೂರು ಗ್ರಾಮಾಂತರ

ಅಧಿಕಾರಿ-ಮಾಧ್ಯಮ ಸಂಘರ್ಷ ತರವಲ್ಲ

Published On :

ದೊಡ್ಡಬಳ್ಳಾಪುರ: ಅಧಿಕಾರಿಗಳು ಮತ್ತು ಮಾಧ್ಯಮಗಳ ನಡುವೆ ಸಂಘರ್ಷ ಸರಿಯಲ್ಲ ಎಂದು ಇಲ್ಲಿನ ಅನೇಕ ಸಂಘಟನೆಗಳ ಮುಖಂಡರು ಅಭಿಪ್ರಾಯಪಟ್ಟರು.
ಇಲ್ಲಿನ ತಹಸೀಲ್ದಾರ್ ಖಾಸಗಿ ವಿದ್ಯುನ್ಮಾನ ಮಾಧ್ಯಮವೊಂದರ ವರದಿಗಾರರನ್ನು ನಿಂದಿಸುವ ಮೂಲಕ ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿ ಪತ್ರಕರ್ತರ ಟ್ರಸ್ಟ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಶುಕ್ರವಾರ ತಾಲೂಕು ಕಚೇರಿಯ ಮುಂದೆ ನಡೆಸಿದ ಪ್ರತಿಭಟನೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು. ಈ ಘಟನೆ ಖಂಡನಾರ್ಹವಾಗಿದ್ದು ಮಾಧ್ಯಮಗಳು ಜನಪರವಾಗಿ ಕೆಲಸ ಮಾಡಲು ಅಧಿಕಾರಿಗಳು ಸಹಕರಿಸಬೇಕು ಎಂಬ ಆಗ್ರಹ ಕೇಳಿಬಂತು.
ನಂತರ ನಡೆದ ಸಂಧಾನ ಸಭೆಯಲ್ಲಿ ಮಾತನಾಡಿದ ತಹಸೀಲ್ದಾರ್ ಕೆ.ಬಿ.ಸಿದ್ಧಲಿಂಗಯ್ಯ, ಅಧಿಕಾರಿಗಳು ತೀವ್ರ ಒತ್ತಡದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಈ ಬಗೆಯ ಘಟನೆಗಳು ನಡೆಯುವುದು ಸಹಜ. ಮಾಧ್ಯಮದ ಪ್ರತಿನಿಧಿಗಳು ತಾವು ಮೊದಲೇ ಸ್ಪಷ್ಟ ಮಾಹಿತಿ ನೀಡಿ ವಿವರಣೆ ಕೇಳಿದರೆ ಪ್ರತಿಕ್ರಿಯಿಸಬಹುದು. ಅನುಮತಿಯಿಲ್ಲದೆ ಕಚೇರಿಯ ಒಳಗೆ ಚಿತ್ರೀಕರಿಸುವುದು ಅಧಿಕಾರಿಗಳಿಗೆ ಮಾನಸಿಕವಾಗಿ ತೀವ್ರ ಒತ್ತಡ ಸೃಷ್ಟಿಸಿದೆ. ಹೀಗಾಗಿ ಆಗಿರುವ ಘಟನೆಗೆ ವಿಷಾದ ವ್ಯಕ್ತಪಡಿಸುವುದಾಗಿ ಹೇಳಿದರು.
ಸಾರ್ವಜನಿಕ ಹಿತಾಸಕ್ತಿಯಲ್ಲಿ ಮಾಧ್ಯಮ ಮತ್ತು ಅದಿಕಾರಿಗಳು ಸಮಾನ ಹೊಣೆಗಾರಿಕೆ ಹೊಂದಿದ್ದು, ಪೂರಕ ವಾತಾವರಣ ಇರಬೇಕು. ತಾಲೂಕು ಕಚೇರಿಯಲ್ಲಿ ಜನಸಾಮಾನ್ಯರ ಕೆಲಸಗಳು ಸರಾಗವಾಗಿ ನಡೆಯುತ್ತಿಲ್ಲ ಎಂಬುದು ಬಿಚ್ಚಿಟ್ಟ ಸತ್ಯ. ಕೆಲವು ಇಲಾಖೆಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಿದೆ. ಹೀಗಿರುವ ವಾತಾವರಣವನ್ನು ಬದಲಾಯಿಸಿ, ವ್ಯವಸ್ಥಿತ ಆಡಳಿತ ವೈಖರಿ ಪ್ರದರ್ಶನವಾಗಬೇಕು. ಎಲ್ಲ ಹಂತಗಳಲ್ಲಿ ಸಾರ್ವಜನಿಕರ ಕುಂದು-ಕೊರತೆಗಳ ವಿಚಾರಣೆಗೆ ಅವಕಾಶವಿರಬೇಕು. ಅಕ್ರಮಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೂಡ ಕೇಳಿ ಬಂತು. ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಪತ್ರಕರ್ತರು ಮತ್ತು ಅಧಿಕಾರಿಗಳು  ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.