ವಿವೇಕಾನಂದರ ತತ್ವಾದರ್ಶ ಅಳವಡಿಸಿಕೊಳ್ಳಿ
ಕ.ಪ್ರ.ವಾರ್ತೆ , ರಾಮನಗರ , ಡಿ. 9
ಸ್ವಾಮಿ ವಿವೇಕಾನಂದರಿಂದ ಸ್ಫೂರ್ತಿ ಪಡೆದ ಕರಮಚಂದ ಗಾಂಧಿ ಮಹಾತ್ಮರಾದರು, ಸುಭಾಷ್ಚಂದ್ರ ಬೋಸರು ನೇತಾಜಿ ಎನಿಸಿಕೊಂಡರು. ವಿವೇಕಾನಂದರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಎಂತಹ ಅಸಾಧ್ಯವಾದುದನ್ನೂ ಸಾಧಿಸಬಹುದು ಎಂದು ಬೆಂಗಳೂರಿನ ರಾಮಕೃಷ್ಣ ಮಠದ ಶ್ರೀ ತ್ಯಾಗೀಶ್ವರಾನಂದಜೀ ಮಹಾರಾಜ್ ಹೇಳಿದರು.
ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ನಗರಕ್ಕೆ ಸೋಮವಾರ ರಥಯಾತ್ರೆ ಆಗಮಿಸಿದ ಅಂಗವಾಗಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ತಾಲೂಕು ಸ್ವಾಮಿ ವಿವೇಕಾನಂದ ಮಿಷನ್ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರು ಅಪ್ರತಿಮ ದೇಶಭಕ್ತರಾಗಿದ್ದರು. ತಮ್ಮ ಸಂದೇಶಗಳ ಮೂಲಕ ಬ್ರಿಟೀಷರ ದಾಸ್ಯದಲ್ಲಿ ನರಳುತ್ತಿದ್ದ ಭಾರತೀಯರಿಗೆ ಸ್ಫೂರ್ತಿ ತುಂಬಿ, ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮ ರೂಪಿಸುವ ನಾಯಕರನ್ನು ನಿರ್ಮಾಣ ಮಾಡಿದರು. ಹೀಗಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರ ಕೊಡುಗೆ ಅನನ್ಯ ಎಂದು ಬಣ್ಣಿಸಿದರು.
ಭಾರತಕ್ಕೆ ಸೀಮಿತರಲ್ಲ: ವಿವೇಕಾನಂದರು ಕೇವಲ ಭಾರತಕ್ಕೆ ಸೀಮಿತವಾದವರಲ್ಲ. ಇಡೀ ವಿಶ್ವವೇ ಅವರ ಸಂದೇಶಗಳನ್ನು ಗೌರವಿಸಿ, ಅನುಸರಣೆ ಮಾಡುತ್ತಿದೆ. ವಿಶ್ವದ 150ಕ್ಕೂ ಹೆಚ್ಚು ದೇಶಗಳಲ್ಲಿ ಅವರ ಜನ್ಮ ದಿನಾಚರಣೆ ಆಚರಿಸುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಹೀಗಾಗಿ ಅವರು ನಿಜಕ್ಕೂ ವಿಶ್ವಮಾನ್ಯ ಮತ್ತು ವಿಶ್ವ ಮಾನವರೇ ಸರಿ ಎಂದು ತ್ಯಾಗೀಶ್ವರಾನಂದಜೀ ಮಹಾರಾಜ್ ತಿಳಿಸಿದರು.
ಸ್ವಾರ್ಥಿಗಳು, ಢೋಂಗಿಗಳು, ಆಷಾಢಭೂತಿಗಳೇ ಹೆಚ್ಚಾಗುತ್ತಿರುವ ಇಂದಿನ ದಿನಮಾನಗಳಲ್ಲಿ ವಿವೇಕಾನಂದರ ಸಂದೇಶಗಳು ಹೆಚ್ಚಿನ ಮಹತ್ವ ಪಡೆದುಕೊಂಡಿವೆ. ದೇಶಕ್ಕಾಗಿ ನಾನು ಎಂಬುವವರಿಗಿಂತ, ನನಗಾಗಿ ದೇಶ ಎನ್ನುವವರ ಸಂಖ್ಯೆ ಹೆಚ್ಚುತ್ತಿದೆ. ಅಂತಹವರಿಗೆ ವಿವೇಕಾನಂದರ ವಾಣಿಗಳನ್ನು ಅನುಸರಿಸುವಂತೆ ಮಾಡಬೇಕಿದೆ ಎಂದರು.
ಇತರರಿಗಾಗಿ ಬದುಕಿ: ಸ್ವಾರ್ಥಕ್ಕಾಗಿ ಬದುಕುವವರು ಉಸಿರಾಡುವ ಹೆಣಗಳಿದ್ದಂತೆ. ಇತರರಿಗಾಗಿ ಬದುಕುವುದೇ ಜೀವನ. ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ. ಎಲ್ಲರೂ ಸ್ವಾರ್ಥವನ್ನು ಬಿಟ್ಟು ಪುರುಷ ಸಿಂಹಗಳಾಗಬೇಕು ಎಂದು ಕರೆ ನೀಡಿದ್ದಾರೆ. ಇದು ಸರ್ವ ಕಾಲಕ್ಕೂ ಅನ್ವಯವಾಗುವಂಥದ್ದು ಎಂದು ಶ್ರೀ ತ್ಯಾಗೀಶ್ವರಾನಂದಜೀ ಮಹಾರಾಜ್ ಹೇಳಿದರು.
ಜಗನ್ಮಾತೆ ಕಾಣುತ್ತಿದ್ದರು: ಜಗತ್ತಿಗೆ ಮಾರ್ಗದರ್ಶನ ನೀಡಿದ ಜಗದ್ಗುರುಗಳು. ಅಮೇರಿಕದ ಚಿಕಾಗೋ ನಗರದಲಿ ನಡೆದ ಧರ್ಮಸಮ್ಮೇಳನದಿಂದ ಭಾರತಕ್ಕೆ ಬಂದ ಸ್ವಾಮೀಜಿಗೆ ಅತ್ಯದ್ಭುತ ಸ್ವಾಗತ ನೀಡಲಾಯಿತು. ಪ್ರತಿ ಹೆಣ್ಣಿನಲ್ಲೂ ಜಗನ್ಮಾತೆಯನ್ನು ಅವರು ಕಾಣುತ್ತಿದ್ದರು ಎಂದು ಬೆಂಗಳೂರಿನ ಭವತಾರಿಣಿ ಆಶ್ವಮದ ಮಾತಾಜೀ ವಿವೇಕಮಯೀ ಹೇಳಿದರು. ವಿದ್ಯಾರ್ಥಿಗಳು, ಯುವಜನರು ವಿವೇಕಾನಂದರ ಜೀವನ ಚರಿತ್ರೆ ಓದುವ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಬಹುದು. ಸಮಾಜದ ನ್ಯೂನತೆಗಳನ್ನು ಸರಿಪಡಿಸಲು ಪ್ರತಿಯೊಬ್ಬರು ಕಟಿಬದ್ಧರಾಗಬೇಕು. ವಿವೇಕಾನಂದರ ರಥ ಯಾತ್ರೆಯ ಉದ್ದೇಶ ಜಾಗೃತ ಸಮಾಜ ನಿರ್ಮಾಣ ಮಾಡುವುದಾಗಿದೆ ಎಂದರು.
ಸಮಾರಂಭದಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಅಂಧರ ಶಾಲೆಯ ಅನ್ನದಾನೇಶ್ವರ ಸ್ವಾಮೀಜಿ, ಚಿಕ್ಕಲೂರು ಹೊಸಮಠದ ಶ್ರೀ ಸಿದ್ದನಾಗಲಿಂಗ ಸ್ವಾಮಿಜಿ, ನಗರಸಭೆ ಮಾಜಿ ಅಧ್ಯಕ್ಷ ಕೆ.ಶೇಷಾದ್ರಿ, ಪದ್ಮನಾಭ, ಜಯಣ್ಣ, ಜಗದೀಶ್, ರಂಗಸ್ವಾಮಿ ಮತ್ತಿತರರು ಭಾಗವಹಿಸಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಮಿನಿ ವಿಧಾನಸೌಧದ ಆವರಣದಿಂದ ಪ್ರಮುಖ ಬೀದಿಗಳಲ್ಲಿ ಸ್ವಾಮಿ ವಿವೇಕಾನಂದರ ರಥ ಯಾತ್ರೆ ನಡೆಯಿತು. ವಿವೇಕಾನಂದರ ಪ್ರತಿಮೆಗೆ ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಮಾಲಾರ್ಪಣೆ ಮಾಡಿ ರಥ ಯಾತ್ರೆಗೆ ಚಾಲನೆ ನೀಡಿದರು. ಶಾಲಾ-ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಕೈಯಲ್ಲಿ ಭಗವಾಧ್ವಜ ಹಿಡಿದು ಜಾಥಾದಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

