ಬೆಂಗಳೂರು ಗ್ರಾಮಾಂತರ

ಕ್ಯಾನ್ಸರ್: ಚಿಕಿತ್ಸೆಗಾಗಿ ದಾನಿಗಳಿಂದ ಸಹಾಯ ಕೋರಿಕೆ

Published On :

ರಾಮನಗರ: ಗಂಟಲು ಕ್ಯಾನ್ಸರ್‌ನಿಂದ ಬಳಲುತ್ತಿರುವ ತಾಲೂಕಿನ ರಾಜೀವ್ ಗಾಂಧಿಪುರದ ನಿವಾಸಿ ಚೌಡಯ್ಯ ಅವರು  ಚಿಕಿತ್ಸೆಗಾಗಿ ದಾನಿಗಳಿಂದ ಸಹಾಯ ಬೇಡಿದ್ದಾರೆ. ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಚೌಡಯ್ಯ ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಇವರಿಗೆ 6 ತಿಂಗಳ ಹಿಂದೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಅಂದಿನಿಂದ ಚಿಕಿತ್ಸೆಗಾಗಿ ರು.1 ಲಕ್ಷಕ್ಕೂ ಅಧಿಕ ಹಣವನ್ನು ಖರ್ಚು ಮಾಡಿದ್ದಾರೆ.  ಕ್ಯಾನ್ಸರ್‌ನಿಂದ ಗುಣಮುಖರಾಗಲು ಶಸ್ತ್ರ ಚಿಕಿತ್ಸೆ ಅಗತ್ಯವಿರುವುದಾಗಿ ಚಿಕಿತ್ಸೆ ನೀಡುತ್ತಿರುವ ಕಿದ್ವಾಯಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಇದಕ್ಕೆ ರು. 5ಲಕ್ಷ ಅಗತ್ಯವಿದ್ದು, ಕೂಲಿ ಮಾಡಿ ಜೀವನ ನಡೆಸುತ್ತಿರುವ ಚೌಡಯ್ಯ ಅವರಿಗೆ ಇಷ್ಟು ಹಣ ಹೊಂದಿಸುವುದು ಅಸಾಧ್ಯದ ಮಾತಾಗಿದೆ.  ಆದ್ದರಿಂದ ಚಿಕಿತ್ಸಾ ವೆಚ್ಚ ಭರಿಸಲು ದಾನಿಗಳಿಂದ ಹಣ ಸಹಾಯ ಅವಶ್ಯವಿದ್ದು, ದಾನಿಗಳು ತಾಲೂಕಿನ ಕುರುಬರಹಳ್ಳಿಯ ವ್ಯವಸಾಯ ಸೇವಾ ಸಹಕಾರ ಬ್ಯಾಂಕಿನಲ್ಲಿ ಚೌಡಯ್ಯ ಅವರ ಪತ್ನಿಯ ಹೆಸರಿನಲ್ಲಿರುವ ಉಳಿತಾಯ ಖಾತೆ 34-14 ಸಂಖ್ಯೆಗೆ ನೀಡಬೇಕು ಎಂದು ಆವರು ಮನವಿ ಮಾಡಿದ್ದಾರೆ.
ಆನೇಕಲ್ಲು: ಪತ್ನಿ ಚುಡಾಯಿಸಿದವನ ಕೈ ಕತ್ತರಿಸಿದ
ಆನೇಕಲ್ಲು: ಪತ್ನಿಯನ್ನು ಚುಡಾಯಿಸಿದ್ದಕ್ಕಾಗಿ ಆರೋಪಿಯ ಕೈಯನ್ನು ಕತ್ತರಿಸಿದ ಘಟನೆ ಆನೇಕಲ್ ಠಾಣಾ ವ್ಯಾಪ್ತಿಯ ಲಕ್ಷ್ಮೀ ಚಿತ್ರ ಮಂದಿರ ಬಳಿ ನಡೆದಿದೆ. ಕಿರಣ್  ಕೈ ಕತ್ತರಿಸಿದವ. ವಿಕಾಸ್ (22) ಕೈ ಕಳೆದುಕೊಂಡವ. ಕಿರಣ್ ಮತ್ತು ವಿಕಾಸ್ ಪ್ರತ್ಯೇಕವಾಗಿ ಚಿತ್ರ ವೀಕ್ಷಿಸಲು ಬಂದಿದ್ದಾಗ ಈ ಘಟನೆ ನಡೆದಿದೆ. ಆರೋಪಿ ವಿಕಾಸ್‌ನನ್ನು ಕಂಡ ಕಿರಣ್ ತನ್ನ ಪತ್ನಿಯನ್ನು ಚುಡಾಯಿಸಿದ ಬಗ್ಗೆ ಪ್ರಶ್ನಿಸಿದಾಗ ಮಾತಿಗೆ ಮಾತು ಬೆಳೆದು ಕೋಪಗೊಂಡ ಕಿರಣ್ ತನ್ನಲ್ಲಿದ್ದ ಲಾಂಗ್‌ನಿಂದ ವಿಕಾಸ್ ಮೇಲೆ ಹಲ್ಲೆ ಮಾಡಿದ. ಕೈ ಅಡ್ಡ ನೀಡಿದ ವಿಕಾಸ್‌ನ ಎಡಗೈ ಬಹುತೇಕ ಕತ್ತರಿಸಿದ್ದು ಅಲುಗಾಡುತ್ತಿತ್ತು. ಹಾಗೆಯೇ ಮುಖ, ಎದೆ ಮತ್ತು ಕೆಲ ಭಾಗದಲ್ಲಿ ತೀವ್ರ ಗಾಯಗಳಾಗಿವೆ ಎಂದು ಆನೇಕಲ್ ಪೊಲೀಸರು ತಿಳಿಸಿದ್ದಾರೆ. ಕೂಡಲೇ ವಿಕಾಸ್‌ನನ್ನು ಆನೇಕಲ್ ಪೊಲೀಸರು ಹತ್ತಿರದ ಸ್ಪರ್ಶ ಆಸ್ಪತ್ರೆಗೆ ಕಳುಹಿಸಲಾಯಿತು. ಆತ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ ಎನ್ನಲಾಗಿದೆ. ಸೋಮವಾರ ನಡೆದ ಶಸ್ತ್ರ ಚಿಕಿತ್ಸೆಯಲ್ಲಿ ವಿಕಾಸ್ ಕೈ ಜೋಡಿಸಲಾಗಿದ್ದು ಐಸಿಯುನಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಆಸ್ಪತ್ರೆಯ ಮೂಲಗಳಿಂದ ತಿಳಿದುಬಂದಿದೆ. ಕಿರಣ್ ಮೇಲೆ ದೂರು ದಾಖಲಾಗಿದ್ದು ಕ್ರಮ ವಹಿಸಲಾಗುವುದು ಎಂದು ಪಿಎಸ್ಸೈ ರಾಘವೇಂದ್ರ ಬೈಂದೂರು ತಿಳಿಸಿದ್ದಾರೆ.
ಕುಡಿದ ಅಮಲಿನಲ್ಲಿ ಬಿದ್ದು ವ್ಯಕ್ತಿ ಸಾವು
ನೆಲಮಂಗಲ: ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯೋರ್ವ ಮನೆಯಲ್ಲೆ ಜಾರಿಬಿದ್ದು ಸಾವನ್ನಪ್ಪಿರುವ ಘಟನೆ ಸೋಮವಾರ ತಾಲೂಕಿನ ವಾಜರಹಳ್ಳಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಚೆನ್ನೈ ಮೂಲದ ರಿಂಜಿತ್ (35) ಎಂದು ಗುರುತಿಸಲಾಗಿದೆ. ಈತ ಸ್ಥಳೀಯ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಬಾಡಿಗೆ ಮನೆಯಲ್ಲಿದ್ದು ಮನೆಯಲ್ಲಿ ಯಾರು ಇಲ್ಲದಾಗ ವಿಪರೀತವಾಗಿ ಕುಡಿದು ಆಯ ತಪ್ಪಿ ಜಾರಿಬಿದ್ದು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಬಗ್ಗೆ ಪಟ್ಟಣ ಠಾಣೆ  ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
15 ರಂದು ಲಕ್ಷದೀಪೋತ್ಸವ
ಮಾಗಡಿ: ಪಟ್ಟಣದ ಐತಿಹಾಸಿಕ ಪ್ರಸಿದ್ಧ ಶ್ರೀ ಸೋಮೇಶ್ವರಸ್ವಾಮಿ ದೇವಾಲಯದಲ್ಲಿ ಶಿವದೀಪೋತ್ಸವದ ಪ್ರಯುಕ್ತ ಡಿ.15 ರಂದು ಸಂಜೆ 6 ಗಂಟೆಗೆ ಅದ್ಧೂರಿ ಲಕ್ಷದೀಪೋತ್ಸವ, ಸಂಗೀತ ಸೇವೆ, ಭರತನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಅರ್ಚಕ ಕಿರಣ್ ದೀಕ್ಷಿತ್ ತಿಳಿಸಿದ್ದಾರೆ. ಶಿವ ದೀಪೋತ್ಸವದ ಅಂಗವಾಗಿ ಡಿ.15 ರ ಬೆಳಿಗ್ಗೆ  ದೇವರಿಗೆ ಏಕವಾರ ರುದ್ರಾಭಿಷೇಕ ನಡೆಯಲಿದೆ. ಆಸ್ತಿಕ ಭಕ್ತರು ದಿಪೋತ್ಸವಕ್ಕೆ ದೀಪ, ಬತ್ತಿ,ಎಣ್ಣೆಯನ್ನು  ಸಮರ್ಪಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.