ಅರ್ಹ ಫಲಾನುಭವಿಗಳಿಗೆ ಆಶ್ರಯ ಮನೆ ನೀಡಿ: ಶಾಸಕ
ಮಾಗಡಿ: ಮೂರುಗೋಡೆ ಕಟ್ಟಿರುವ ಆಶ್ರಯ ಮನೆಗಳಿಗೆ ಸಹಾಯಧನ ಮಂಜೂರಾಗುವುದಿಲ್ಲ, ಪಿಡಿಓಗಳೇ ಅರ್ಹ ಪಲಾನುಭವಿಗಳಿಗೆ ತಪ್ಪು ಮಾಹಿತಿ ನೀಡಿ ಸಂಕಷ್ಟಕ್ಕೆ ಸಿಕ್ಕಿಸಬೇಡಿ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಸೂಚಿಸಿದರು.
ಅವರು ತಾಲೂಕು ಪಂಚಾಯ್ತಿಯಲ್ಲಿ ನಡೆದ ತುರ್ತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಅರ್ಹರಿಗೆ ಆಶ್ರಯ ಮನೆ ನಿರ್ಮಿಸಿಕೊಳ್ಳಲು ಆದ್ಯತೆ ನೀಡಿ, ಅನರ್ಹರಿಗೆ ಆಶ್ರಯ ಮನೆ ನೀಡಿದರೆ, ಮನೆಗೆ ಹೋಗಬೇಕಾದಿತು ಎಂದು ಪಿಡಿಓಗಳಿಗೆ ಎಚ್ಚರಿಕೆ ನೀಡಿದರು.
ಗೋ-ಕಟ್ಟೆ ಹೂಳೆತ್ತಿಸಿ: ಪಂಚಾಯ್ತಿ ವ್ಯಾಪ್ತಿಯ ಆಯಾ ಗ್ರಾಮಗಳ ಬಳಿ ಇರುವ ಗೋ-ಕಟ್ಟೆಗಳಲ್ಲಿ ಅಂತರ್ಜಲ ಇರುತ್ತದೆ. ಆಂತಹ ಕೆರೆ, ಗೋಕಟ್ಟೆಗಳ ಹೂಳೆತ್ತಿಸಲು ನರೇಗ ಯೋಜನೆಯಡಿ ಅಗತ್ಯ ಕ್ರಮ ಕೈಗೊಳ್ಳಬೇಕು. ನಮ್ಮ ಊರು, ನಮ್ಮ ರಸ್ತೆ, ನಮ್ಮ ಊರು, ನಮ್ಮ ಹೊಲ ಯೋಜನೆಯನ್ನು ದುರ್ಬಳಕೆಯಾಗದಂತೆ ಅನುಷ್ಠಾನಗೊಳಿಸಬೇಕಿದೆ ಎಂದರು. ದನದ ಕೊಟ್ಟಿಗೆ ನಿರ್ಮಿಸಿಕೊಳ್ಳಲು ಸಹಾಯಧನ: ಹೈನುಗಾರಿಕೆಯನ್ನು ನಂಬಿಕೊಂಡು ಜೀವಿಸುತ್ತಿರುವ ಬಡ ಕುಟುಂಬಗಳ ಆರ್ಥಿಕ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಸರ್ಕಾರ ಅನುಷ್ಠಾನಗೊಳಿಸಿದೆ. ಅರ್ಹ ರೈತ ಪಲಾನುಭವಿಗಳು ದನದ ಕೊಟ್ಟಿಗೆಗೆ ನೆಲಹಾಸು ನಿರ್ಮಿಸಿಕೊಳ್ಳಲು ಸಹಾಯಧನ ನೀಡಲು ಪಿಡಿಓಗಳು ರೈತರಿಗೆ ಮಾಹಿತಿ ಒದಗಿಸಿ ಸೌಲತ್ತು ನೀಡಬೇಕು. ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಪಿಡಿಓ ಕೈಗೊಳ್ಳಬೇಕಾದರೆ ಆಯಾ ಪಂಚಾಯ್ತಿ ವ್ಯಾಪ್ತಿಯ ಸದಸ್ಯರಿಗೆ, ತಾ.ಪಂ. ಹಾಗೂ ಜಿಲ್ಲಾ ಪಂಚಾಯ್ತಿ ಸದಸ್ಯರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಗೊಂದಲಕ್ಕೆ ಅವಕಾಶ ನೀಡಬೇಡಿ, ಅಭಿವೃದ್ಧಿಗೆ ಹೆಚ್ಚೆಚ್ಚು ಆದ್ಯತೆ ನೀಡುವಂತೆ ಶಾಸಕರು ತಿಳಿಸಿದರು.
ನೀರಿನ ಸಮಸ್ಯೆ: ಗವಿನಾಗಮಂಗಲ ಮತ್ತು ಕುದೂರಿನಲ್ಲಿ ನೀರಿನ ಸಮಸ್ಯೆ ಇದೆ. ಕೊಳವೆ ಬಾವಿ ಕೊರೆಸಿ, ಅಗತ್ಯ ಮೋಟರ್ ಪಂಪ್ ಕೊಡಿಸಿಕೊಡುವಂತೆ ಶಾಸಕರಲ್ಲಿ ಪಿಡಿಓಗಳು ಮನವಿ ಮಾಡಿದರು. ಈ ಸಂಬಂಧ ಕೂಡಲೆ ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾ ಪಂಚಾಯ್ತಿ ಎಇಇ ರವಿ ಎಸ್.ಸೂರನ್ ಅವರಿಗೆ ಶಾಸಕರು ಸೂಚಿಸಿದರು. ತಾ.ಪಂ. ಅಧ್ಯಕ್ಷ ಜಿ.ಕೃಷ್ಣ, ಉಪಾಧ್ಯಕ್ಷೆ ಭಾರತಿ ಮಹದೇವಯ್ಯ, ಮಾಜಿ ಅಧ್ಯಕ್ಷರಾದ ಜಿ.ವಿ.ರಾಮಣ್ಣ, ಕಾಂತರಾಜು, ಬಿ.ಟಿ. ವೆಂಕಟೇಶ್, ಜಿ.ಪಂ. ಸದಸ್ಯರಾದ ಮುದ್ದುರಾಜ ಯಾದವ್, ವಿಜಯಕುಮಾರ್ ಹಾಗೂ ತಾಲೂಕಿನ ಗ್ರಾ.ಪಂ. ಪಿಡಿಓ ಗಳು, ತಾ.ಪಂ. ಸಹಾಯಕ ನಿರ್ದೇಶಕ ಪರಶಿವಮೂರ್ತಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

