ಬೆಂಗಳೂರು ಗ್ರಾಮಾಂತರ

ಕಾಂಗ್ರೆಸ್ ಸರ್ಕಾರ ಸ್ವಯಂಕೃತ ಅಪರಾಧದಿಂದ ಪತನ

Published On :

ಕ.ಪ್ರ.ವಾರ್ತೆ ,  ರಾಮನಗರ ,  ಡಿ.16
ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ತನ್ನ ಸ್ವಯಂಕೃತ ಅಪರಾಧದಿಂದಾಗಿ 2014-15ರಲ್ಲಿ ತನ್ನಿಂತಾನೇ ಪತನಗೊಳ್ಳಲಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.
ತನ್ನ ಜನ ವಿರೋಧಿ ನೀತಿಗಳನ್ನು ಜನಪ್ರತಿಯ ಕಾರ್ಯಕ್ರಮಗಳ ಮೂಲಕ ಮರೆಮಾಚಿಕೊಂಡು, ಜನತೆಯನ್ನು ವಂಚಿಸುತ್ತಿರುವ ಈ ಸರ್ಕಾರ ಯಾವ ಕಾರಣಕ್ಕೂ ಅವಧಿ ಪೂರೈಸದು ಎಂದು ಅವರು ನಗರದಲ್ಲಿ ಸೋಮವಾರ ತಮ್ಮ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಹೇಳಿದರು.  
ರಾಜ್ಯದಲ್ಲಿರುವುದು ಬೊಗಳೆ ಸರ್ಕಾರ. ಬರೇ ಘೋಷಣೆಗಳಲ್ಲೇ ಅದು ಮುಳುಗಿದೆ. ಸರ್ಕಾರದ ಧೋರಣೆಗಳಿಂದ ರಾಜ್ಯದಲ್ಲಿ ಮತ್ತೆ ರೈತರ ಸರಣಿ ಆತ್ಮಹತ್ಯೆ ಪ್ರಾರಂಭವಾಗಿದೆ. ಈ ಸರ್ಕಾರದ ಆಡಳಿತಕ್ಕೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ನೀಡಿರುವ ಸರ್ಟಿಫಿಕೇಟ್ ಕೈಗನ್ನಡಿ ಎಂದರು.
ಸರ್ಕಾರದಲ್ಲಿರುವ ಬಹುತೇಕ ಸಚಿವರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಕಚ್ಚಾಟ ಮಿತಿ ಮೀರಿದೆ. ಪಕ್ಷದೊಳಗಿನ ಮುಸುಕಿನ ಗುದ್ದಾಟದ ಪರಿಣಾಮ ಎಐಸಿಸಿ ವೀಕ್ಷಕ ದಿಗ್ವಿಜಯ ಸಿಂಗ್ ಅವರು ಸಮನ್ವಯ ಸಮಿತಿ ಸಭೆ ನಡೆಸಲಾಗದೆ ದೆಹಲಿಗೆ ವಾಪಸ್ಸಾಗಿದ್ದಾರೆ ಎಂದು ಛೇಡಿಸಿದರು.
ಶತಕ ದಾಟುವುದಿಲ್ಲ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಯಾವ ಕಾರಣಕ್ಕೂ ನೂರರ ಗಡಿ ದಾಟುವುದೇ ಇಲ್ಲ. ಬಿಜೆಪಿಗೂ ಬಹುಮತ ಸಿಗದು. 1996ರ ಇತಿಹಾಸ ಮತ್ತೊಮ್ಮೆ ಮರುಕಳಿಸಲಿದ್ದು, ಕೇಂದ್ರದಲ್ಲಿ ತೃತೀಯ ರಂಗದ ಸರ್ಕಾರ ರಚನೆ ಸಾಧ್ಯತೆ ನಿಚ್ಚಳವಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಮತ ಬ್ಯಾಂಕ್ ಹುನ್ನಾರ: ಎತ್ತಿನ ಹೊಳೆ ಸೇರಿದಂತೆ ನೀರಾವರಿ ಯೋಜನೆಗಳ ಅನುಷ್ಠಾನದ ಬಗ್ಗೆ ಕಾಂಗ್ರೆಸ್ ನಾಯಕರ ಆಶ್ವಾಸನೆ ಮತ ಬ್ಯಾಂಕ್ ಹುನ್ನಾರವಷ್ಟೇ. ಚನ್ನಪಟ್ಟಣದಲ್ಲಿ ಯೋಗೇಶ್ವರ್ ಮಾಡುತ್ತಿರುವುದೂ ಅಂಥದ್ದೇ ಟೋಪಿ ಹಾಕುವ ಕೆಲಸ ಎಂದು ಕುಮಾರಸ್ವಾಮಿ ಜರೆದರು.
ಅಧಿಕಾರಿಗೆ ಹರಿಹಾಯ್ದರು: ರಾಮನಗರದಲ್ಲಿರುವ ಉಪ ವಿಭಾಗಾಧಿಕಾರಿಯನ್ನು ಇಲ್ಲಿವರೆಗೆ ಸಮರ್ಥಿಸಿಕೊಂಡೇ ಬಂದಿದ್ದ ಕುಮಾರಸ್ವಾಮಿ ತಮ್ಮ ಹುಟ್ಟು ಹಬ್ಬದ ವೇದಿಕೆಯಲ್ಲಿ ಅವರ ವಿರುದ್ಧವೇ ಹರಿಹಾಯ್ದರು. ಖಾತೆ ಮತ್ತಿತರೆ ವಿಷಯದಲ್ಲಿ ರೈತರನ್ನು ಕಚೇರಿಗೆ ಅಲೆಸುತ್ತಿದ್ದಾರೆ ಎಂದು ಟೀಕಿಸಿದರು.
ಇದೇ ವೇಳೆ ಅವರು ಹಿಂದಿನ ಉಪ ವಿಭಾಗಾಧಿಕಾರಿ ಡಾ.ರಾಜೇಂದ್ರ ಪ್ರಸಾದ್ ಕಾರ್ಯ ವೈಖರಿ ಪ್ರಶಂಸಿದರು. ರಾಮನಗರದಲ್ಲಿ ನನ್ನನ್ನು ಹಣಿಯಲೆಂದೇ ಜನ ವಿರೋಧಿ ಅಧಿಕಾರಿಗಳನ್ನು ಇಲ್ಲಿಗೆ ವರ್ಗ ಮಾಡಿ ತಂದು ಹಾಕಲಾಗುತ್ತಿದೆ ಎಂದು ಆರೋಪಿಸಿದರು.
 ವಿಧಾನ ಪರಿಷತ್ ಸದಸ್ಯ ಅಪ್ಸರ್ ಆಗಾ, ಮಾಜಿ ಶಾಸಕ ಕೆ.ರಾಜು, ಜಿ.ಪಂ. ಅಧ್ಯಕ್ಷ ಎಚ್.ಸಿ.ರಾಜು ಮತ್ತಿತರರಿದ್ದರು.
ಬೆಳಗಾವಿ ಅಧಿವೇಶನದ ವೇಳೆ ಆತ್ಮಹತ್ಯೆ ಮಾಡಿಕೊಂಡ ವಿಠಲ್ ಅರಭಾವಿ ಅವರು ಕುರುಬ ಸಮುದಾಯಕ್ಕೆ ಸೇರಿದವರೆನ್ನುವ ಕಾರಣಕ್ಕೆ ರು.10 ಲಕ್ಷ ಪರಿಹಾರವನ್ನು ಸಿಎಂ ಸಿದ್ದರಾಮಯ್ಯ ಹಿಂದು ಮುಂದು ನೋಡದೆ ಘೋಷಿಸಿದರು. ಆದರೆ, ಅನ್ಯ ಜಾತಿ ರೈತರು ಸತ್ತಾಗ ಸೂಕ್ತ ಪರಿಹಾರ ನೀಡಿಲ್ಲ. ಸರ್ಕಾರದ ಯಾವ ಪ್ರತಿನಿಧಿಯೂ ಸ್ಥಳಕ್ಕೆ ಭೇಟಿ ನೀಡಿಲ್ಲ. ಈ ವಿಷಯ ಮಾತನಾಡಿದರೆ ನನ್ನನ್ನು ಜಾತಿವಾದಿ ಎಂದು ಬಿಂಬಿಸುತ್ತಾರೆ.
- ಎಚ್.ಡಿ.ಕುಮಾರಸ್ವಾಮಿ
ಮಾಜಿ ಸಿಎಂ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.