ಹೂ ಕಚ್ಚುವ ಹಂತದಲ್ಲೇ ಮಾವಿಗೆ ಜಿಗಿ ಹುಳು ಬಾಧೆ
ಕ.ಪ್ರ.ವಾರ್ತೆ , ರಾಮನಗರ , ಡಿ.16
ಕಳೆದ ವರ್ಷ ಮಾವು ಉತ್ಪಾದನೆ ಕುಸಿತದಿಂದ ಕಂಗಾಲಾಗಿದ್ದ ರೈತರು ಈ ಬಾರಿ ಬಂಪರ್ ಬೆಳೆ ನಿರೀಕ್ಷೆ ಹೊಂದಿದ್ದಾರೆ. ಆದರೆ, ಹೂ ಕಚ್ಚುವ ಹಂತದಲ್ಲೇ ಮಾವಿಗೆ ತಲೆದೋರಿರುವ ಜಿಗಿ ಹುಳು ಬಾಧೆ ಮತ್ತು ಬೂದಿ ರೋಗವು ಆತಂಕ ಮೂಡಿಸಿದೆ.
ರೇಷ್ಮೆನಾಡು ರಾಮನಗರವು ಮಾವು ಉತ್ಪಾದನೆಯಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ. ಕಳೆದ ವರ್ಷ ಏರು ಹಂಗಾಮವಾಗಿದ್ದರೂ ಸಮರ್ಪಕವಾಗಿ ಹೂ ಕಚ್ಚದೆ, ಉತ್ಪಾದನೆ ಗಣನೀಯವಾಗಿ ಕುಸಿದಿತ್ತು. ಈ ವರ್ಷ ಉತ್ತಮ ಇಳುವರಿ ನಿರೀಕ್ಷೆಗೆ ರೋಗ ಬಾಧೆ ಅಡ್ಡಗಾಲಾಗಿದೆ.
ಕಡೆಗಣಿಸದಂತೆ ಸಲಹೆ: ಮಾವಿನ ಬೆಳೆಯಲ್ಲಿ ಕಾಡುವ ವಿವಿಧ ಕೀಟ, ರೋಗಗಳಲ್ಲಿ ಜಿಗಿ ಹುಳ ಹಾಗೂ ಬೂದಿ ರೋಗ ಪ್ರಮುಖ. ಅಂತೆಯೇ ಈ ರೋಗ ಅತೀವ ಹಾನಿಗೂ ಕಾರಣವಾಗುತ್ತದೆ. ಹೊಸ ಚಿಗುರು ಬರುವಾಗ, ಹೂ ಬಿಡುವ ಮತ್ತು ಕಾಯಿ ಕಚ್ಚುವ ಹಂತದಲ್ಲಿ ರೋಗ ಬಾಧೆ ಹೆಚ್ಚಾಗಿರುತ್ತದೆ.
ಈ ಪೀಡೆಗಳನ್ನು ಕಡೆಗಣಿಸಿ, ನಿರ್ವಹಣಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಇಳುವರಿ ಮಾತ್ರವಲ್ಲದೆ ಗಿಡ ಮತ್ತು ಮರಗಳಿಗೂ ಹಾನಿ ತಪ್ಪಿದ್ದಲ್ಲ. ಹೀಗಾಗಿ ರೈತರು ತೋಟಗಾರಿಕೆ ತಜ್ಞರ ಸಲಹೆ ಪಡೆದು ನಿರ್ವಹಣಾ ಕ್ರಮಗಳನ್ನು ಜರೂರಾಗಿ ಕೈಗೊಳ್ಳಬೇಕು ಎಂದು ತೋಟಗಾರಿಕೆ ಸೂಚಿಸಿದೆ.
ಜಿಗಿ ಹುಳು ಹಾವಳಿ: ಜಿಗಿ ಹುಳುಗಳು ಮಾವಿನ ಮರಗಳಲ್ಲಿ ದಟ್ಟವಾಗಿರುವ ರೆಂಬೆ, ಕೊಂಬೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ಸೂರ್ಯನ ಬೆಳಕು ಮರದೊಳಗೆ ತಾಗದಿದ್ದಾಗ ಈ ಹುಳುಗಳ ಹಾವಳಿ ತೀವ್ರತರವಾಗಿರುತ್ತದೆ. ಹುಳುಗಳು ಎಲೆ ಮತ್ತು ಹೂಗೊಂಚಲಿನಿಂದ ರಸ ಹೀರುವುದರಿಂದ ಎಲೆಗಳು ತಿರುಚಿಕೊಂಡು ತುದಿಯಿಂದ ಒಣಗುತ್ತವೆ.
ಈ ಕೀಟಗಳು ಹೊಳೆಯುವ ಸಿಹಿಯಾದ ಮಕರಂದದಂತಹ ಅಂಟು ದ್ರಾವಣವನ್ನು ವಿಸರ್ಜಿಸುವುದರಿಂದ
ಅದರ ಮೇಲೆ ಕಪ್ಪು ಬಣ್ಣದ ಶಿಲೀಂದ್ರ (ಸೂಟಿ ಮೌಲ್ಡ್) ಬೆಳೆದು, ದ್ಯುತಿ ಸಂಶ್ಲೇಷಣ ಕ್ರಿಯೆಗೆ ಅಡಚಣೆ ಉಂಟಾಗುತ್ತದೆ. ಹೀಗಾಗಿ ಹಾನಿ ಅತಿಯಾದಾಗ ಎಲೆ ಹೂಗೊಂಚಲು ಒಣಗಿ, ಪೀಚು ಉದುರುತ್ತವೆ.
ಬೂದಿ ರೋಗ ಲಕ್ಷಣ: ಇದು ಒಂದು ಶಿಲೀಂದ್ರದಿಂದ ಕಾಡುವ ರೋಗವಾಗಿದೆ. ಎಲೆ, ಹೂಗೊಂಚಲು, ಪೀಚುಗಳಿಗೆ ಹಾನಿ ಉಂಟುಮಾಡುತ್ತದೆ. ಮೊದಲು ಈ ಬಿಳಿ ಬಣ್ಣದ ಶಿಲೀಂದ್ರ ಕೆಲವು ಭಾಗಗಳಲ್ಲಿ ಮಾತ್ರ ಕಾಣಿಸಿಕೊಂಡು ಕ್ರಮೇಣ ಇಡೀ ಎಲೆ, ಹೂ ಗೊಂಚಲು ಮತ್ತು ಪೀಚುಗಳಿಗೆ ಆವರಿಸುತ್ತದೆ. ಹಾವಳಿ ಹೆಚ್ಚಿದಾಗ ಎಲೆ, ಹೂ ಉದುರುವುದು ಸಾಮಾನ್ಯ. ಕೆಲಮೊಮ್ಮೆ ಕಾಯಿಗಳು ಗಾತ್ರ ಹೆಚ್ಚಾಗದೆ ಪೀಚಿನ ಹಂತದಲ್ಲಿಯೇ ಬೀಳುತ್ತವೆ.
ಎಚ್ಚರ ವಹಿಸಿ
ಮಾವಿನ ಬೆಳೆಯಲ್ಲಿ ಜಿಗಿ ಹುಳು ಮತ್ತು ಬೂದಿ ರೋಗವನ್ನು ರೈತರು ಕಡೆಗಣಿಸಬಾರದು. ಈ ರೋಗದ ಬಗ್ಗೆ ಎಚ್ಚರ ವಹಿಸಿ ಶೀಘ್ರ ಹತೋಟಿ ಕ್ರಮಗಳನ್ನು ಕೈಗೊಳ್ಳಬೇಕು.
- ಹೇಮಾ, ಉಪ ನಿರ್ದೇಶಕಿ,
ತೋಟಗಾರಿಕೆ ಇಲಾಖೆ.
ಹತೋಟಿ ಕ್ರಮಗಳು ಏನೇನು?
ಅತಿ ದಟ್ಟವಾದ ಮರದ ರೆಂಬೆ, ಕೊಂಬೆಗಳನ್ನು ಕಾಯಿ ಕಟಾವಿನ ನಂತರ ಕತ್ತರಿಸಿ ತೆಗೆಯುವುದು ಸೂಕ್ತ. ಇದರಿಂದ ಸೂರ್ಯನ ಕಿರಣಗಳು ಮರದ ಒಳ ಭಾಗಕ್ಕೆ ಪ್ರವೇಶ ಮಾಡಲು ಅನುವು ಮಾಡಿಕೊಟ್ಟಂತಾಗುತ್ತದೆ. ಭವಿಷ್ಯದಲ್ಲಿ ಹುಳು, ರೋಗ ಬಾಧೆ ತಪ್ಪಲಿದೆ.
ಹೂ ಬಿಡುವುದಕ್ಕೆ ಮುಂಚೆ 0.5 ಮಿ.ಲೀ. ಲ್ಯಾಂಬ್ಡಾ ಸೈಹ್ಯಾಲೋಥ್ರಿನ್ ಕರಾಟೆ, ಟಾಟಾ ರೀವಾ ಮತ್ತು 3 ಗ್ರಾಂ. ನೀರಿನಲ್ಲಿ ಕರಗುವ ಗಂಧಕವನ್ನು (ಸಲ್ಟಾಫ್, ಸಲ್ಫೆಕ್ಸ್) ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದರಿಂದ ರೋಗ ನಿಯಂತ್ರಣ ಸಾಧ್ಯವಾಗಲಿದೆ.
ಎರಡನೆಯ ಸಿಂಪರಣೆಯನ್ನು ಕಾಯಿ ಕಚ್ಚಿದ ಕೂಡಲೇ 0.3 ಮಿ.ಲೀ. ಇಮಿಡಾಕ್ಲೋಪ್ರಿಡ್ ಮತ್ತು 1 ಮಿ.ಲೀ. ಡೈನೋಕ್ಯಾಪ್ (ಕಾರಾಥೇನ್) 1 ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು. 3ನೇ ಸಿಂಪಡಣೆಯನ್ನು ಅವಶ್ಯಕತೆ ಇದ್ದಾಗ ಮಾತ್ರ ಬಳಸುವುದು ಸೂಕ್ತವಾಗಿರುತ್ತದೆ.
ಜಿಗಿ ಹುಳ ಹಾವಳಿಯಿದ್ದಾಗ 10 ಸಾವಿರ ಪಿಪಿಎಂ ಸಾಂದ್ರತೆಯುಳ್ಳ ಅಜಾಡಿರೆಕ್ಟಿನ್ (ಬೇವಿನ ಮೂಲದ ಕೀಟ ನಾಶಕವನ್ನು) 7 ಮಿ.ಲೀ.ಯನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಬೂದಿ ರೋಗ ಕಂಡಾಗ ಕಾರ್ಬೆಂಡಜಿಂ 1 ಗ್ರಾಂ. ಔಷಧವನ್ನು 1 ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು.
-ಮತ್ತೀಕೆರೆ ಜಯರಾಂ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

