ಅಕ್ರಮ ಹಂದಿ ಸಾಕಣೆಯಿಂದ ಪರಿಸರ ಮಾಲಿನ್ಯ ತಡೆಗಟ್ಟಲು ಆಗ್ರಹ
ಕ.ಪ್ರ.ವಾರ್ತೆ , ರಾಮನಗರ , ಡಿ.18
ಅಕ್ರಮ ಹಂದಿ ಸಾಕಣೆಯಿಂದಾಗುತ್ತಿರುವ ಪರಿಸರ ಮಾಲಿನ್ಯ ಮತ್ತು ಕಿರಿಕಿರಿಯಿಂದ ಮುಕ್ತಿ ದೊರಕಿಸಿಕೊಡಿ ಎಂದು ನಗರಸಭೆಯ ವಾರ್ಡ್ 1ರ ಅರ್ಕಾವತಿ ಬಡಾವಣೆಯ ನಾಗರಿಕರು ನಗರಸಭೆಯ ಮುಂದೆ ದಿಢೀರ್ ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಶಕ್ತಿ ಕೇಂದ್ರ ಕಂದಾಯ ಭವನದಿಂದ ಕೂಗಳತೆ ದೂರದಲ್ಲಿರುವ ಅರ್ಕಾವತಿ ಬಡಾವಣೆಯಲ್ಲಿ ಅಕ್ರಮ ಹಂದಿ ಸಾಕಾಣೆ ಕೇಂದ್ರಗಳಿವೆ. ಹಂದಿ ಸಾಕಾಣೆಯನ್ನು ನಗರ ಪ್ರದೇಶದಲ್ಲಿ ನಿಷೇಧಿಸಿದ್ದರೂ ಇಲ್ಲಿ ರಾಜಾರೋಷವಾಗಿ ಸಾಕಾಣಿಕೆ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಹಂದಿ ಸಾಕಾಣಿಕೆಯನ್ನು ವೈಜ್ಞಾನಿಕವಾಗಿಯೂ ನಡೆಸುತ್ತಿಲ್ಲ. ಹೀಗಾಗಿ ಸುತ್ತಮುತ್ತಲ ಪ್ರದೇಶದಲ್ಲಿ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ, ಸಾಂಕ್ರಮಿಕ ರೋಗಗಳ ಭೀತಿ ಈ ಬಡಾವಣೆಯ ನಾಗರಿಕರನ್ನು ಕಾಡುತ್ತಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.
ಹಂದಿಗಳನ್ನು ಸಾಕುತ್ತಿರುವ ಮಂದಿ ಸಾಕಾಣೆಗೆ ಸೂಕ್ತವಾಗಿ ಸ್ಥಳವನ್ನು ನಿರ್ಮಿಸಿಕೊಳ್ಳದ ಪರಿಣಾಮ ಹಂದಿಗಳು ಇಡೀ ಬಡಾವಣೆಯಲ್ಲಿ ಬೇಕಾಬಿಟ್ಟಿಯಾಗಿ ಸುತ್ತುತ್ತವೆ. ಕೆಲವೊಮ್ಮೆ ಮನೆಗಳ ಕಾಂಪೌಂಡಗಳ ಒಳಕ್ಕೂ ನುಗ್ಗಿ ಗಲೀಜು ಮಾಡುತ್ತಿವೆ ಎಂದರು. ಹೊಟೇಲ್ ಮತ್ತು ಮದುವೆ ಮನೆಗಳಿಂದ ಅಳಿದುಳಿದ ಆಹಾರ ಪದಾರ್ಥವನ್ನು ಹಂದಿಗಳಿಗೆ ನೀಡಲಾಗುತ್ತಿದೆ. ಈ ಆಹಾರ ಕೊಳೆತು ನಾರುತ್ತಾ ಗಬ್ಬು ವಾಸನೆ ಬೀರುತ್ತಿದೆ. ಈ ಬಗ್ಗೆ ಹಲವು ಬಾರಿ ದೂರಿದ್ದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಾದಿ ಹಿಡಿಯಬೇಕಾಗಿದೆ ಎಂದರು.
ಹಂದಿಗಳನ್ನು ಕತ್ತರಿಸಿ, ಸುಡುತ್ತಿರುವುದರಿಂದಲೂ ಕೆಟ್ಟ ವಾಸನೆ ಬರುತ್ತಿದೆ. ಜನ ವಸತಿ ಪ್ರದೇಶದಲ್ಲಿ ಹಂದಿಗಳ ಅವೈಜ್ಞಾನಿಕ ಸಾಕಾಣಿಕೆಯನ್ನು ತಕ್ಷಣ ಕೊನೆಗಾಣಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಅರ್ಕಾವತಿ ಬಡಾವಣೆ ಹಿತರಕ್ಷಣಾ ಸಮಿತಿಯ ಗೌರವಾಧ್ಯಕ್ಷ ವಿ. ಭೋಜಣ್ಣ, ಅಧ್ಯಕ್ಷ ಎಸ್.ಪುಟ್ಟರಾಮಯ್ಯ, ಬಡಾವಣೆಯ ನಿವಾಸಿಗಳಾದ ಕಮಲಮ್ಮ, ಕೆಂಪಯ್ಯ, ಕೆ.ರಾಜು, ಟಿ.ವಿ. ಶ್ರೀನಿವಾಸ, ಪದ್ಮಾವತಿ, ಸಿ.ಮಂಜುಳಾ, ಸರೋಜಮ್ಮ ಮತ್ತಿತರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

