ಬಹಿರ್ದೆಸೆ ಇಲ್ಲಿ ಬಹಿರಂಗ ಸತ್ಯ
ರಾಮನಗರ: ರಾಜಧಾನಿ ಬೆಂಗಳೂರು ಮಗ್ಗುಲಲ್ಲಿರುವ ರಾಮನಗರ ಜಿಲ್ಲೆ ನಗರೀಕರಣಕ್ಕೆ ಮೈಯೊಡ್ಡಿ ನಿಂತಿದೆ. ಸರ್ಕಾರ ಬೆಂಗಳೂರಿಗೆ ಪರ್ಯಾಯವಾಗಿ ಜಿಲ್ಲೆಯನ್ನು ಬೆಳೆಸಲು ಯೋಜನೆ ರೂಪಿಸಲು ಹೊರಟಿದೆ. ಇಂತಹ ಜಿಲ್ಲೆಯಲ್ಲಿ ಸರ್ಕಾರಿ ಅಂಕಿ-ಅಂಶ ಪ್ರಕಾರ ವಯಕ್ತಿಕ ಶೌಚಾಲಯ ಹೊಂದಿದ ಕುಟುಂಬಗಳ ಸಂಖ್ಯೆ ಪ್ರತಿಶತ 40ರಷ್ಟು ಮಾತ್ರವೇ ಎನ್ನುವುದು ಆಘಾತಕಾರಿ ಸಂಗತಿ.
ರಾಮನಗರವನ್ನು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸಲು ಜಿಪಂ ಮತ್ತು ಜಿಲ್ಲಾಡಳಿತ ಪಣತೊಟ್ಟಿದೆ. ಆದರೆ, ಗುರಿ ಸಾಧನೆ ನಿರೀಕ್ಷಿತ ಮಟ್ಟದಲ್ಲಿಲ್ಲ. ಕಾರ್ಯಕ್ರಮದ ಪ್ರಗತಿಯಲ್ಲಿ ಜಿಲ್ಲೆಯು ರಾಜ್ಯದಲ್ಲಿ 15ನೇ ಸ್ಥಾನದಿಂದ ಮೇಲೆದ್ದೇ ಇಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಜಿಪಂ ಗೆ ಬಿಡುಗಡೆಯಾದ ಕೋಟಿಗಟ್ಟಲೆ ಅನುದಾನವೆಲ್ಲಾ ಗ್ರಾಪಂಗಳಿಗೆ ಹರಿದು ಹೋಗಿದೆಯೇ ಹೊರತು ಪ್ರಗತಿ ಹೇಳಿಕೊಳ್ಳುವಂತಿಲ್ಲ.
ಲೆಕ್ಕಾಚಾರವೇ ತಪ್ಪು: ನಾಲ್ಕು ತಾಲೂಕುಗಳನ್ನು ಒಳಗೊಂಡ ರಾಮನಗರ ಜಿಲ್ಲೆಯಲ್ಲಿ 2011ರ ಗಣತಿ ಪ್ರಕಾರ 20,4,525 ಕುಟುಂಬಗಳಿವೆ. ಈ ಪೈಕಿ 86 ಸಾವಿರ ಕುಟುಂಬಗಳಷ್ಟೆ ವಯಕ್ತಿಕ ಶೌಚಾಲಯ ಹೊಂದಿವೆ. 1.18 ಲಕ್ಷ ಕುಟುಂಬಗಳಿನ್ನೂ ಬಹಿರ್ದೆಸೆಯನ್ನೇ ಅವಲಂಬಿಸಿವೆ. ಆದರೆ, ಜಿ.ಪಂ. ಆಡಳಿತವು 2004ರ ಗಣತಿ ಪ್ರಕಾರ ಇರುವ 1 ಲಕ್ಷ ಕುಟುಂಬಗಳ ಲೆಕ್ಕವನ್ನೇ ಮುಂದಿಟ್ಟುಕೊಂಡು ತನ್ನ ಕಳಪೆ ಸಾಧನೆ ಮರೆಮಾಚುತ್ತಿದೆ.
ಕುಟುಂಬಗಳ ಮಾಹಿತಿಯೇ ಇಲ್ಲ: ವಯಕ್ತಿಕ ಶೌಚಾಲಯಗಳನ್ನು ಹೊಂದಿದ ನಗರ ಮತ್ತು ಪಟ್ಟಣ ಪ್ರದೇಶದ ಕುಟುಂಬಗಳ ಮಾಹಿತಿಯೇ ಜಿಲ್ಲಾ ನಗರಾಭಿವೃದ್ಧಿ ಕೋಶದಲ್ಲಿಲ್ಲ. ಈ ವಿಷಯದಲ್ಲಿ ಸರ್ವೆಯನ್ನು ಈಗಷ್ಟೇ ಪ್ರಾರಂಭಿಸಲು ಅಣಿಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಸಾರ್ವಜನಿಕ ಶೌಚಾಲಯ ಮತ್ತು ಮೂತ್ರಾಲಯ ಸೌಲಭ್ಯವೂ ಸಮರ್ಪಕವಾಗಿಲ್ಲ. ಬೆರಳೆಣಿಕೆಯಷ್ಟಿದ್ದರೂ ಸೂಕ್ತ ನಿರ್ವಹಣೆಯಿಲ್ಲ.
ಹಿಂತಿರುಗಿದ ಅನುದಾನ: ನಗರ, ಪಟ್ಟಣ ಪ್ರದೇಶದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳಿಗೆ ವಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ರು.ತಲಾ 20 ಸಾವಿರ ಪ್ರೋತ್ಸಾಹ ಧನ ವಿತರಿಸಲು ರಾಮನಗರಕ್ಕೆ ನಿರ್ಮಲ ಗಂಗಾ ಯೋಜನೆಯಡಿ ರು.2 ಕೋಟಿ ಬಿಡುಗಡೆಯಾಗಿತ್ತು. ಅದರಲ್ಲಿ ನಯಾ ಪೈಸೆಯೂ ಬಳಕೆಯಾಗದೆ ಇಡುಗಂಟು ಸರ್ಕಾರಕ್ಕೆ ಹಿಂತಿರುಗಿತು.
ಹತ್ತು-ಹಲವು ಷರತ್ತು: ನಿರ್ಮಲ ಗಂಗಾ ಯೋಜನೆಯಡಿ ಶೌಚಾಲಯ ಸೌಲಭ್ಯ ಹೊಂದುವುದಕ್ಕೆ ದಲಿತರು ನಗರ, ಪಟ್ಟಣ ಪ್ರದೇಶದಲ್ಲೇ ಸ್ವಂತ ಮನೆ ಹೊಂದಿರಬೇಕು. ಮನೆಗೆ ಸಂಬಂಧಿಸಿದ ಖಾತೆ ಸಹಿತ ಮಾಲೀಕತ್ವದ ದಾಖಲೆಗಳನ್ನು ಒದಗಿಸಬೇಕಿತ್ತು. ಶೌಚಾಲಯ ಹೊಸದಾಗಿಯೇ ನಿರ್ಮಿಸಬೇಕೆನ್ನುವ ಷರತ್ತು ವಿಧಿಸಲಾಗಿತ್ತು. ಅರ್ಹ ಫಲಾನುಭವಿಗಳು ಇಲ್ಲ ಎನ್ನುವುದಕ್ಕಿಂತಲೂ ಮಾಹಿತಿ ಒದಗಿಸದ ಅಧಿಕಾರಿಗಳ ಅಸಡ್ಡೆಯಿಂದ ಹಣ ವಾಪಸ್ಸಾಗಿದೆ.
ಗುರಿ-ಸಾಧನೆ ವಿವರ: 2013-14ನೇ ಸಾಲಿನಲ್ಲಿ 23834 ಶೌಚಾಲಯಗಳ ನಿರ್ಮಾಣಕ್ಕೆ ಗುರಿ ಹೊಂದಲಾಗಿತ್ತು. ಈವರೆಗೆ ಪೂರ್ಣಗೊಂಡಿರುವುದು 10211 ಮಾತ್ರ. ಇದಕ್ಕಾಗಿ ಕೇಂದ್ರ ಸರ್ಕಾರದಿಂದ ರು.2.54 ಕೋಟಿ ಮತ್ತು ರಾಜ್ಯದಿಂದ ರು.1.04 ಕೋಟಿ ಸೇರಿದಂತೆ ಒಟ್ಟಾರೆ ರು.3.58 ಕೋಟಿ ಬಿಡುಗಡೆಯಾಗಿದೆ.
ಇಷ್ಟೂ ಮೊತ್ತವನ್ನು ಜಿಲ್ಲೆಯ 130 ಗ್ರಾ.ಪಂ.ಗಳಿಗೆ ಕ್ರಿಯಾ ಯೋಜನೆ ಆಧರಿಸಿ ಮಂಜೂರು ಮಾಡಲಾಗಿದೆ.
ಗ್ರಾಮ ಪಂಚಾಯಿತಿವಾರು ಬಳಕೆ, ಉಳಿಕೆ ಮೊತ್ತದ ನಿಖರ ಮಾಹಿತಿ ಇನ್ನೂ ಜಿಪಂಗೆ ಲಭ್ಯವಾಗಿಲ್ಲ. ಹಳೆಯ ಶೌಚಾಲಯಕ್ಕೆ ಸುಣ್ಣ, ಬಣ್ಣ ಬಳಿದು ಹಣ ಪಡೆದವರು ಸಾಕಷ್ಟಿದ್ದಾರೆ. ಕೆಲ ಕುಟುಂಬಗಳು ಒಂದಕ್ಕಿಂತ ಹೆಚ್ಚು ಶೌಚಾಲಯ ಸೌಲಭ್ಯ ನಿರ್ಮಿಸಿ, ಅನುದಾನ ಪಡೆದಿವೆ. ಅವ್ಯವಹಾರ ಸಂಬಂಧ ಇಲ್ಲಿವರೆಗೆ ಒಂದೇ ಒಂದು ದೂರು ದಾಖಲಾಗಿಲ್ಲ. ಇನ್ನು ಕ್ರಮ ಜಾರಿ ಪ್ರಶ್ನೆಯೇ ಉದ್ಬವಿಸದು.
ಪ್ರಚಾರ-ಪರಾಮರ್ಶೆ ಇಲ್ಲ: ರಾಮನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದು 7 ವರ್ಷ ಕಳೆದಿದೆ. ಸ್ವಚ್ಛತಾ ಆಂದೋಲನ ಕಾರ್ಯಕ್ರಮದಡಿ ಬೆಂಗಳೂರು ಗ್ರಾಮಾಂತರದಿಂದ ರಾಮನಗರ ಬೇರ್ಪಟ್ಟು ಆಗಿರುವುದು ಮೂರು ವರ್ಷವಷ್ಟೆ. ಅಲ್ಲಿಂದೀಚಿಗೆ ಒಟ್ಟಾರೆ ರು.8 ಕೋಟಿ ಅನುದಾನ ಬಿಡುಗಡೆ ಆಗಿದ್ದು, ರು. 7.30 ಕೋಟಿ ಬಳಕೆಯಾಗಿದೆ ಎನ್ನುವುದು ಅಧಿಕಾರಿಗಳ ಮಾಹಿತಿ.
ಈಚೆಗೆ ನಡೆದ ಸ್ವಚ್ಛತಾ ಆಂದೋಲನ ಮತ್ತು ವಿಶ್ವ ಶೌಚಾಲಯ ದಿನಾಚರಣೆಯಲ್ಲಿ ಜಾಥ ನಡೆಸಿದ್ದು, ಗ್ರಾಪಂ ಕಚೇರಿಗಳಲ್ಲಿ ಭಿತ್ತಿಪತ್ರಗಳನ್ನು ಅಂಟಿಸಿದ ಹೊರತಾಗಿ ಈ ಜಿಲ್ಲೆಯಲ್ಲಿ ಶೌಚಾಲಯ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಪ್ರಾಮಾಣಿಕವಾಗಿ ನಡೆದಿಲ್ಲ. ಈ ಕಾರ್ಯಕ್ರಮದ ಅನುಷ್ಠಾನ ಕುರಿತು ಯಾವುದೇ ಪ್ರಗತಿ ಪರಿಶೀಲನೆಯಲ್ಲೂ ಪರಾಮರ್ಶೆ ನಡೆದಿಲ್ಲ.
ಗಬ್ಬೆದ್ದು ನಾರುತ್ತಿವೆ: ರಾಮನಗರವು ಹೆಸರಿಗಷ್ಟೆ ಜಿಲ್ಲಾ ಕೇಂದ್ರ. ತನ್ನದೇ ಜಿಲ್ಲೆಯ ತಾಲೂಕು ಕೇಂದ್ರಗಳಿಗಿಂತ ಇಲ್ಲಿನ ಶೌಚಾಲಯ, ಮೂತ್ರಾಲಯಗಳ ಸ್ಥಿತಿ ಭಿನ್ನವಲ್ಲ. ಇಡೀ ಜಿಲ್ಲೆಯಲ್ಲಿ ಇರುವುದು ತಲಾ 15 ಸಾರ್ವಜನಿಕ ಶೌಚಾಲಯ ಮತ್ತು ಮೂತ್ರಾಲಯಗಳು. ಪೇ ಅಂಡ್ ವ್ಯವಸ್ಥೆ ಜಾರಿ ಇದ್ದಾಗ್ಯೂ ಸಮರ್ಪಕ ನಿರ್ವಹಣೆ ಇಲ್ಲದೆ ಅವೆಲ್ಲ ಗಬ್ಬು ನಾರುತ್ತಿವೆ. ಮೂಗು ಮುಚ್ಚಿಕೊಂಡೇ ಅಲ್ಲಿಗೆ ಹೋಗಬೇಕಿದೆ.
ಬಸ್ ನಿಲ್ದಾಣ, ರೈಲು ನಿಲ್ದಾಣದಲ್ಲೂ ಶೌಚಾಲಯಗಳು ಉತ್ತಮವಾಗಿಲ್ಲ. ಜನ ಸಂಖ್ಯೆಗೆ ಅನುಗುಣವಾಗಿ ಶೌಚಾಲಯವಿರುವುದು ಮಾಗಡಿಯಲ್ಲಷ್ಟೆ. ಚನ್ನಪಟ್ಟಣದಲ್ಲಿ 4, ರಾಮನಗರದಲ್ಲಿ 5, ಕನಕಪುರದಲ್ಲಿ 2 ಶೌಚಾಲಯದ ಕೊರತೆ ಇದೆ. ಇರುವ ಶೌಚಾಲಯಗಳಲ್ಲಿ ಅಶುಚಿತ್ವ, ನೀರಿನ ಸಮಸ್ಯೆ ತಾಂಡವಾಡುತ್ತಿದ್ದರೂ ಹಣ ವಸೂಲಿ ಹೆಚ್ಚಿದೆ.
ಕಕ್ಕಸ್ಸನ್ನೂ ಬಿಡದ ಅಧಿಕಾರಿಗಳು: ಕಕ್ಕಸ್ಸು, ಮೂತ್ರದ ಕಾಸಿಗೂ ಅಧಿಕಾರಿಗಳು ಬಾಯಿ ಹಾಕುತ್ತಿದ್ದಾರೆ. ಸಾರ್ವಜನಿಕ ಶೌಚಾಲಯ ನಿರ್ವಹಣೆಯ ಟೆಂಡರ್ ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟದ ಲಂಚ ನಡೆಯುತ್ತಿದೆ. ಶೌಚ, ಮೂತ್ರಕ್ಕೆ ನಿಗದಿಪಡಿಸಿದ ಶುಲ್ಕಕ್ಕಿಂತ 2-3 ಪಟ್ಟು ವಸೂಲಿ ನಡೆದಿದೆ.
ಇದರಲ್ಲಿ ಗುತ್ತಿಗೆದಾರರಿಂದ ಅಧಿಕಾರಿಗಳಿಗೆ ಪಾಲು ಹೋಗುತ್ತಿದೆ. ಪ್ರಶ್ನಿಸಿದರೆ ಕುಡಿದ ಮತ್ತಿನಲ್ಲಿರುವ ಸಿಬ್ಬಂದಿ ಜಟಾಪಟಿಗೆ ಇಳಿಯುತ್ತಾರೆ. ನಾಚಿಕೆಗೇಡೆಂದು ಯಾರೂ ಪ್ರಶ್ನಿಸುತ್ತಿಲ್ಲ. ದೂರನ್ನೂ ನೀಡಿಲ್ಲ. ಇದು ಲಂಚಕೋರರಿಗೆ ವರದಾನವಾಗಿದೆ.
-ಮತ್ತೀಕೆರೆ ಜಯರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

